Dharwad News: ಫ್ಲ್ಯಾಟ್ ಮತ್ತು ಶಾಪ್ ಕೊಡದ ಡೆವಲಪರ್‌ಗೆ 65 ಲಕ್ಷ ರೂ ಹಿಂದಿರುಗಿಸಲು ಗ್ರಾಹಕರ ಆಯೋಗ ಆದೇಶ

ಫ್ಲ್ಯಾಟ್ ಮತ್ತು ಶಾಪ್ ಕೊಡದ ಬೆಂಗಳೂರಿನ ಬಿಲ್ಡರ್ಸ್​​ ಸಾಲಂಕಿ ಅಸೋಸಿಯೇಟ್ಸ್‌ನ ಮುಖ್ಯಸ್ಥರಾದ ಕವಿತಾ ಮತ್ತು ರವಿಂದ್ರ ಸಾಲಂಕಿಗೆ ಬಡ್ಡಿಯೊಂದಿಗೆ ರೂ. 65 ಲಕ್ಷ ಹಣ ಹಿಂದಿರುಗಿಸಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.‌

Dharwad News: ಫ್ಲ್ಯಾಟ್ ಮತ್ತು ಶಾಪ್ ಕೊಡದ ಡೆವಲಪರ್‌ಗೆ 65 ಲಕ್ಷ ರೂ ಹಿಂದಿರುಗಿಸಲು ಗ್ರಾಹಕರ ಆಯೋಗ ಆದೇಶ
ಪ್ರಾತಿನಿಧಿಕ ಚಿತ್ರ
Edited By:

Updated on: Jul 24, 2023 | 8:17 PM

ಧಾರವಾಡ, ಜುಲೈ 24: ಫ್ಲ್ಯಾಟ್ ಮತ್ತು ಶಾಪ್ ಕೊಡದ ಡೆವಲಪರ್‌ಗೆ ಬಡ್ಡಿಯೊಂದಿಗೆ ರೂ. 65 ಲಕ್ಷ ಹಣ ಹಿಂದಿರುಗಿಸಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ (Consumer Commission) ಆದೇಶ ನೀಡಿದೆ.‌ ನಗರದ ಕೃಪಾಲಿಸ್ ಕಂಪೌಂಡ್ ನಿವಾಸಿ ಲವಾ ಇಜಂತಕರ್ ಮತ್ತು ಸ್ಥಳೀಯ ನಾರಾಯಣಪುರದ ವಾಸಿ ಶೇಷಪ್ಪಾ ಲೆಂಡಿ ಎಂಬುವವರು ಬೆಂಗಳೂರಿನ ಬಿಲ್ಡರ್‌ರಾದ ಸಾಲಂಕಿ ಅಸೋಸಿಯೇಟ್ಸ್‌ನ ಮುಖ್ಯಸ್ಥರಾದ ಕವಿತಾ ಮತ್ತು ರವಿಂದ್ರ ಸಾಲಂಕಿ ಅವರೊಂದಿಗೆ ಸೈದಾಪುರದಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಅಪಾರ್ಟಮೆಂಟ್‌ನಲ್ಲಿ ಫ್ಲ್ಯಾಟ್ ಮತ್ತು ಶಾಪ್ ಖರೀದಿಸಲು 2018 ರ ಡಿಸೆಂಬರ್ 12 ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು.

ಆ ಪೈಕಿ ಇಜಂತಕರ್‌ರವರು 32 ಲಕ್ಷ ರೂ. ಮೌಲ್ಯದ ಫ್ಲ್ಯಾಟ್‌ಗಾಗಿ 25 ಲಕ್ಷ ರೂ. ಹಾಗೂ ಶೇಷಪ್ಪ ಲೆಂಡಿರವರು ಫ್ಲ್ಯಾಟ್ ಮತ್ತು ಶಾಪ್‌ನ್ನು 41 ಲಕ್ಷ ರೂ.ಗೆ ಖರೀದಿಸಿ ಅದರ ಪೈಕಿ 40 ಲಕ್ಷ ರೂ. ಮುಂಗಡವಾಗಿ ನೀಡಿ ಖರೀದಿ ಕರಾರು ಪತ್ರ ಮಾಡಿಕೊಂಡಿದ್ದರು. ಒಪ್ಪಂದದ ಪತ್ರದ ಪ್ರಕಾರ 2019 ರ ಏಪ್ರಿಲ್‌ರೊಳಗೆ ನಿರ್ಮಾಣ ಕಾರ್ಯ ಮುಗಿಸಿ ಸ್ವಾಧೀನಕ್ಕೆ ಕೊಡುವ ಷರತ್ತು ಇತ್ತು. ಆದರೆ, ನಿಗದಿತ ಅವಯೊಳಗೆ ಫ್ಲ್ಯಾಟ್ ಮತ್ತು ಶಾಪಿನ ಪಕ್ಕಾ ಖರೀದಿ ಪತ್ರ ಮಾಡಿಕೊಟ್ಟಿಲ್ಲ ಹಾಗೂ ತಮ್ಮ ಮುಂಗಡ ಹಣವನ್ನೂ ಸಹ ಎದುರುದಾರರು ಹಿಂದಿರುಗಿಸಿಲ್ಲ ಎಂದು ಡೆವಲಪರ್ಸ್ ಮತ್ತು ಬಿಲ್ಡ್‌ರ್ ವಿರುದ್ಧ ಪ್ರತ್ಯೇಕ ಎರಡು ದೂರು ದಾಖಲಾಗಿದ್ದವು.

ಇದನ್ನೂ ಓದಿ: ಧಾರವಾಡ: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ವಿಚಾರಣೆ ಮಾಡುವಾಗ ಭೂ ಮಾಲೀಕರ ಸಂಬಂಧಿ ಇಂದಿರಾಬಾಯಿ ಧಾರವಾಡದ ಸಿವಿಲ್ ಕೋರ್ಟ್‌ನಲ್ಲಿ ಓ.ಎಸ್.ನಂ. 199/221 ದಾವೆ ಹೂಡಿ ಫ್ಲ್ಯಾಟ್ ಮತ್ತು ಶಾಪ್ ಮಾರಾಟ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಆದ್ದರಿಂದ ತಮ್ಮ ತಪ್ಪಿನಿಂದ ದೂರುದಾರರಿಗೆ ತೊಂದರೆಯಾಗಿಲ್ಲ ಎಂದು ಬಿಲ್ಡರ್ ಆಕ್ಷೇಪಣೆ ಎತ್ತಿದ್ದರು.

ಈ ಬಗ್ಗೆ ಕೂಲಂಕುಶ ವಿಚಾರಣೆ ನಡೆಸಿ ಕರಾರು ಒಪ್ಪಂದ ಪತ್ರದಲ್ಲಿ 2019 ರೊಳಗೆ ಎಲ್ಲ ರೀತಿಯಿಂದ ಕಟ್ಟಡ ನಿರ್ಮಾಣದ ಕೆಲಸ ಮುಗಿಸಿ ಬ್ಯಾಂಕಿನ ನಿರಾಪೇಕ್ಷಣಾ ಪತ್ರ ಪಡೆದು ದೂರುದಾರರಿಗೆ ಸ್ವಾಧಿನಕ್ಕೆ ಕೊಡಬೇಕು ಎನ್ನುವ ಕರಾರು ಇದ್ದು, ಅದರನ್ವಯ ನಡೆದುಕೊಳ್ಳದ ಎದುರುದಾರರ ನಡಾವಳಿಕೆ ತಪ್ಪು ಎಂದು ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.

ಇದನ್ನೂ ಓದಿ: ಧಾರವಾಡ: ಹಜ್ ಯಾತ್ರೆ ತಪ್ಪಿಸಿದ್ದಕ್ಕೆ ಅಲ್-ಹುದೆಬಿಯಾ ಟ್ರಾವೆಲ್ಸ್‌ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಇಬ್ಬರೂ ದೂರುದಾರರಿಂದ ಪಡೆದ 25 ಲಕ್ಷ ರೂ. ಮತ್ತು 40 ಲಕ್ಷ ರೂ. ಹಣವನ್ನು ಕರಾರಾದ ದಿನದಿಂದ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಹಣ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ. ಅದರ ಜೊತೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ತಲಾ ರೂ. 1 ಲಕ್ಷ ಪರಿಹಾರ ಮತ್ತು ತಲಾ ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 pm, Mon, 24 July 23