ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎನ್ನದೆ ನಿರಂತರ ಮಳೆ ಸುರಿಯುತ್ತಿದೆ. ಒಮ್ಮೆ ಜಿಟಿ ಜಿಟಿ ಮಳೆಯಾದ್ರೆ ಮತ್ತೊಮ್ಮೆ ಜೋರಾದ ಮಳೆಯಿಂದ ಸೂರ್ಯನ ದರ್ಶನವೇ ಆಗುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಳೆ ಹಾನಿ ಬಗ್ಗೆ ವಿವರಣೆ ನೀಡಿದ್ದಾರೆ.
ಧಾರವಾಡದಲ್ಲಿ ಮಳೆಯಿಂದಾದ ಹಾನಿ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದ್ದಾರೆ. ಮಳೆ ಅಕಾಲಿಕ ಮಳೆಯಿಂದ 188 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 22 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 7390 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 1210 ಹೆಕ್ಟೇರ್ನಲ್ಲಿದ್ದ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸುಮಾರು 28 ಕಿಲೋಮೀಟರ್ನಷ್ಟು ರಸ್ತೆಗಳು ಹಾಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ 26.3 ಮೀ.ಮೀ ಮಳೆಯಾಗಬೇಕಿತ್ತು. ಆದರೆ 70.1 ಮೀಮೀ ಮಳೆಯಾಗಿದೆ. ಶೇ. 167ರಷ್ಟು ಜಾಸ್ತಿ ಮಳೆಯಾಗಿದೆ. ಅಳ್ನಾವರ, ಧಾರವಾಡ ತಾಲೂಕಿನಲ್ಲಿ ಹೆಚ್ಚು ಮಳೆ ಆಗಿದೆ. ಸಾಕಷ್ಟು ನಷ್ಟವಾಗಿದೆ. ಹೊಲ್ತಿಕೋಟೆ ಗ್ರಾಮದ ಕೆರೆ ಒಡೆದಿದೆ. ಅದನ್ನು 15 ಲಕ್ಷ ರೂದಲ್ಲಿ ತಾತ್ಕಾಲಿಕ ರಿಪೇರಿ ಮಾಡಲಾಗುವುದು. ಇನ್ನೂ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಹೀಗಾಗಿ ಇನ್ನೂ ಹೆಚ್ಚಿನ ಬೆಳೆ ಹಾನಿ ಆಗುವ ಸಾಧ್ಯತೆ ಇದೆ ಎಂದರು.
ಸಮಸ್ಯೆ ಇದ್ದ ಕಡೆ ಶಾಲೆಗಳಿಗೆ ರಜೆ ಕೊಡಲು ನಿರ್ಧಾರ
ಇನ್ನು ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಅವಾಂತರಗಳು ಎದುರಾಗುತ್ತಿದ್ದು ಸಮಸ್ಯೆ ಇದ್ದ ಕಡೆ ಶಾಲೆಗಳಿಗೆ ರಜೆ ಕೊಡಲು ನಿರ್ಧಾರ ಮಾಡಲಾಗಿದೆ. ಶಾಲೆಗೆ ಹೋಗಲು ಸಮಸ್ಯೆಯಾದ ಕಡೆ ರಜೆ ಕೊಡ್ತೇವೆ. ಹಳ್ಳ ಇದ್ದ ಕಡೆ ನೀರು ಕಡಿಮೆಯಾಗೋವರೆಗೂ ರಜೆ. ಅಂತಹ ಶಾಲೆಗಳಿಗೆ ರಜೆ ಕೊಡಲು ಡಿಡಿಪಿಐಗೆ ಸೂಚಿಸಲಾಗಿದೆ.
ಇದನ್ನೂ ಓದಿ: 40,000ಕ್ಕೂ ಹೆಚ್ಚು ತಮಿಳು ಬ್ರಾಹ್ಮಣರಿಗೆ ಸಿಗುತ್ತಿಲ್ಲ ವಧು; ಉತ್ತರ ಪ್ರದೇಶ, ಬಿಹಾರಕ್ಕೂ ವ್ಯಾಪಿಸಿದ ವಧು ಅನ್ವೇಷಣೆ