ಹಿಟ್​​ ಆ್ಯಂಡ್​​ ರನ್​​ ಕೇಸ್​​ಗೆ ಟ್ವಿಸ್ಟ್​: KSRTC ಬಸ್​​ ಡ್ಯಾಶ್​​ ಕ್ಯಾಮರಾದಿಂದ ರಿವೀಲ್​​ ಆಯ್ತು ಸ್ಫೋಟಕ ಸತ್ಯ

ಧಾರವಾಡದ ಹಿಟ್ ಅಂಡ್ ರನ್ ಪ್ರಕರಣಕ್ಕೆ KSRTC ಬಸ್ ಡ್ಯಾಶ್‌ಕ್ಯಾಮ್ ಸ್ಫೋಟಕ ತಿರುವು ನೀಡಿದೆ. ಆರಂಭದಲ್ಲಿ ಅಪಘಾತವೆಂದು ಕಂಡರೂ, ಇದು ಲಲಿತಾ ಎಂಬುವವರ ಪೂರ್ವನಿಯೋಜಿತ ಹತ್ಯೆ ಎಂದು ಬಯಲಾಗಿದೆ. ದೂರವಾಗಿದ್ದ ಪತಿ ಉದಯಕುಮಾರ್ 40 ಲಕ್ಷ  ನೀಡಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರು ಆರೋಪಿ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.

ಹಿಟ್​​ ಆ್ಯಂಡ್​​ ರನ್​​ ಕೇಸ್​​ಗೆ ಟ್ವಿಸ್ಟ್​: KSRTC ಬಸ್​​ ಡ್ಯಾಶ್​​ ಕ್ಯಾಮರಾದಿಂದ ರಿವೀಲ್​​ ಆಯ್ತು ಸ್ಫೋಟಕ ಸತ್ಯ
ಆರೋಪಿ ಉದಯ್​​ ಕುಮಾರ್​​
Image Credit source: Google

Updated on: Mar 09, 2026 | 4:38 PM

ಧಾರವಾಡ, ಮಾರ್ಚ್​​ 09: ಸವದತ್ತಿ ರಸ್ತೆಯ ಅಮಿನಭಾವಿ ಸಮೀಪ ಫೆಬ್ರವರಿ 26ರಂದು ನಡೆದಿದ್ದ ಅಪಘಾತ​​ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಪ್ಪು ಬಣ್ಣದ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಲಲಿತಾ (42) ದಾರುಣವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆ ಧಾರವಾಡ ಪೊಲೀಸರು ಹಿಟ್​​​ ಆ್ಯಂಡ್​​ ರನ್ ಕೇಸ್​​ ದಾಖಲು ಮಾಡಿಕೊಂಡಿದ್ದರು. ಆದರೆ ಘಟನೆ ಮೊದಲಿಗೆ ಸಹಜ ಅಪಘಾತದಂತೆ ಕಂಡರೂ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಬಸ್‌ನ ಡ್ಯಾಶ್‌ಕ್ಯಾಮ್ ದೃಶ್ಯಗಳು ಅಸಲಿ ಸತ್ಯ ಬಿಚ್ಚಿಟ್ಟಿವೆ. ಇದೊಂದು ಪೂರ್ವ ನಿಯೋಜಿತ ಹತ್ಯೆಯಾಗಿದ್ದು, ಲಲಿತಾ ಅವರಿಂದ ದೂರವಾಗಿದ್ದ ಅವರ ಪತಿ ಉದಯ್​​ಕುಮಾರ್​​ ಎಂಬಾತನೇ ಇದರ ಸೂತ್ರಧಾರ ಎಂಬುದು ತನಿಖೆ ವೇಳೆ ಬಯಲಾಗಿದೆ.

ಉದಯಕುಮಾರ್ ಮತ್ತು ಲಲಿತಾ 2000ರಲ್ಲಿ ವಿವಾಹವಾಗಿದ್ದರು. ಆದರೆ ಕೆಲವು ವರ್ಷಗಳಿಂದ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಲಲಿತಾ ತಮ್ಮ ತವರು ಸೇರಿದ್ದರು. ಇಬ್ಬರ ನಡುವೆ ವಿಚ್ಛೇದನ ಸಂಬಂಧಿತ ಪ್ರಕರಣ ಕೂಡ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಲೋಕ ಅದಾಲತ್‌ನಲ್ಲಿ ಲಲಿತಾಗೆ ನಿರ್ವಹಣಾ ವೆಚ್ಚದ ಭಾಗವಾಗಿ 1.5 ಎಕ್ರೆ ಜಮೀನು ಹಸ್ತಾಂತರಿಸಲು ಉದಯಕುಮಾರ್‌ಗೆ ಆದೇಶಿಸಲಾಗಿತ್ತು. ಆದರೆ ಇದನ್ನು ಒಪ್ಪಲು ತಯಾರಿಲ್ಲದ ಉದಯಕುಮಾರ್, ಪತ್ನಿ ಹತ್ಯೆ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ ಸುಮಾರು 40 ಲಕ್ಷ ರೂಪಾಯಿ ಹಣ ನೀಡಿದ್ದ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಯುವಕನನ್ನ ಹತ್ಯೆಗೈದು ಹೈವೇನಲ್ಲಿ ಶವ ಬಿಸಾಡಿದ ದುಷ್ಕರ್ಮಿಗಳು; ಸಾಕ್ಷ್ಯನಾಶಕ್ಕೆ ಮಾಡಿದ್ದೇನು ಗೊತ್ತಾ?

ವಿವಾದದ ಬಗ್ಗೆ ಮಾತುಕತೆ ನಡೆಸುವ ನೆಪದಲ್ಲಿ ಉದಯಕುಮಾರ್ ಲಲಿತಾರನ್ನು ಸವದತ್ತಿ ರಸ್ತೆಗೆ ಕರೆಸಿಕೊಂಡಿದ್ದ. ಬಳಿಕ ಆರೋಪಿಯ ಸಹಚರರು ನಂಬರ್ ಪ್ಲೇಟ್ ಇಲ್ಲದ ಎಸ್‌ಯುವಿ ಕಾರನ್ನು ಬಳಸಿ ಲಲಿತಾ ಅವರಿಗೆ ಡಿಕ್ಕಿ ಹೊಡೆದು, ಅದು ಅಪಘಾತ ಎಂಬುವಂತೆ ಬಿಂಬಿಸಿದ್ದಾರೆ. ನಂಬರ್ ಪ್ಲೇಟ್ ಇರದಿದ್ದರೂ ಸಿಸಿಟಿವಿ ದೃಶ್ಯಗಳ ಮೂಲಕ ವಾಹನ ಮತ್ತು ಅದರಲ್ಲಿದ್ದವರನ್ನು  ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.  ಉದಯಕುಮಾರ್ ಮತ್ತು ಸಹಚರರ ನಡುವೆ ನಡೆದ ಫೋನ್ ಕರೆಗಳ ವಿವರಗಳು ಹಾಗೂ ಲಲಿತಾಗೆ ಕರೆ ಮಾಡಿದ ಸಮಯದ ಮಾಹಿತಿಯೂ  ಪೊಲೀಸರಿಗೆ ಲಭಿಸಿದೆ.  ಘಟನೆ ಸಂಬಂಧ ಪೊಲೀಸರು ಉದಯಕುಮಾರ್ ಸೇರಿ  ಸಹಚರರಾದ ನಾಗಪ್ಪ , ಅಭಿಷೇಕ್ ಮತ್ತು ನಾಗರಾಜ್​​ನನ್ನು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋರ್ಟ್ ಆರೋಪಿಗಳಿಗೆ​​ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ದಿ ಇಂಡಿಯನ್​​ ಎಕ್ಸ್​​ಪ್ರೆಸ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us