ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ 150 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯವು (Stanford University) ಬಿಡುಗಡೆ ಮಾಡಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯ ವಿಜ್ಞಾನಿಗಳಾದ ಡಾ. ಎಸ್. ಬಸವರಾಜಪ್ಪ ಮತ್ತು ಡಾ. ಅಮರನಾಥ ಹೆಗಡೆ ಅವರು ಸ್ಥಾನ ಪಡೆದಿದ್ದಾರೆ. ಅವರ ಮೌಲ್ಯಿಕ ಸಂಶೋಧನೆಗಳ ಸಾಧನೆಯಿಂದ ಧಾರವಾಡ ಐಐಟಿ ಗೆ ಕೀರ್ತಿ ಬಂದಿದ್ದು, ಅವರನ್ನು ಧಾರವಾಡ ಐಐಟಿ ಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯ ಪಬ್ಲಿಕೇಶನ್‍ನ ಸಹಯೋಗದೊಂದಿಗೆ ವಿಶ್ವದ ಅಗ್ರ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಶ್ರೇಯಾಂಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಮತ್ತು ಇತರ ಸಂಯೋಜಿತ ಗ್ರಂಥಮಾಪಕ ಅಂಕಿ-ಸಂಖ್ಯೆಗಳ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಇಂತಹ ಅಗ್ರಗಣ್ಯ ವಿಜ್ಞಾನಿಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುವ ಪರಿಪಾಠ 2018 ರಿಂದ ಪ್ರಾರಂಭವಾಗಿದೆ.
ಡಾ. ಎಸ್. ಬಸವರಾಜಪ್ಪ :
ಡಾ. ಎಸ್. ಬಸವರಾಜಪ್ಪ ಅವರು ಐಐಟಿ ಧಾರವಾಡದ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರಿಗೆ ಅವರು 129 ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. 2023 ರ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ಅಗ್ರ ವಿಜ್ಞಾನಿಗಳಲ್ಲಿ ವಾರ್ಷಿಕ ಶ್ರೇಯಾಂಕದೊಂದಿಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ. ಡಾ.ಬಸವರಾಜಪ್ಪ ಅವರದು ವಸ್ತುಗಳು, ಯಾಂತ್ರಿಕ ಮತ್ತು ಸಾರಿಗೆ ಎಂಜಿನಿಯರಿಂಗ್ ವಿಷಯಗಳ ಸಂಶೋಧನಾ ಕ್ಷೇತ್ರಗಳಾಗಿವೆ. ಈ ಹಿಂದೆಯೂ ಕೂಡ 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದರು.
ಡಾ. ಅಮರನಾಥ ಹೆಗಡೆ :
ಡಾ. ಅಮರನಾಥ ಹೆಗಡೆ ಅವರು ಧಾರವಾಡ ಐಐಟಿ ಯ ಸಿವಿಲ್ ಮತ್ತು ಇನ್ಫಾಸ್ಟ್ರಕ್ಚರ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದರೆ. ಇಲ್ಲಿಯವರೆಗೆ ಅವರು 46 ಸಂಶೋಧನೆ, ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ವರ್ಷದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಶ್ರೇಯಾಂಕ ಪಡೆದಿದ್ದಾರೆ. ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಜಿಯೋಸಿಂಥೆಟಿಕ್ ಮತ್ತು ಗ್ರೌಂಡ್ ಇಂಪ್ರೂಮೆಂಟ್ಸ್, ಕಾಂಪ್ಯೂಟೇಶನಲ್ಲಿ ಟೆಕ್ನಿಕ್ಸ್ ವಿಷಯಗಳು ಇವರ ಅಧ್ಯಯನ ಆಸಕ್ತಿಯ ಕ್ಷೇತ್ರಗಳಾಗಿವೆ.
Also Read: ವಿಜಯಪುರದ ಮೂವರು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ! ಯಾರವರು? ಏನವರ ಸಾಧನೆ?
ಐಐಟಿ ಧಾರವಾಡದ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮತ್ತು ವಿವಿಧ ವಿಭಾಗಗಳ ಡೀನ್‍ರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಇಬ್ಬರೂ ಸಂಶೋಧಕರನ್ನು ಧಾರವಾಡ ಐಐಟಿಗೆ ಕೀರ್ತಿ ತಂದ ಸಾಧನೆಗಾಗಿ ಅಭಿನಂದಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ