ಧಾರವಾಡ, ನವೆಂಬರ್ 18: ಧಾರವಾಡ (Dharwad) ತಾಲೂಕಿನ ಕಲಕೇರಿ ಗ್ರಾಮದಲ್ಲಿ ಪಕ್ಕಾ ದೇಶಿ ಶೈಲಿಯಲ್ಲಿ ನಿರ್ಮಾಣವಾಗಿರುವ ಸಂಗೀತ ಮಹಾವಿದ್ಯಾಲಯಕ್ಕೆ (Dharwad Music College) ಇಂದು (ನ.18) ಯಾತ್ರಿಗಳ ದಂಡೇ ಹರಿದು ಬಂದಿತ್ತು. ಹೀಗೆ ಬಂದ ಯಾತ್ರಿಗಳು ಮುಂಬೈ ಮೂಲದ ‘ಜಾಗೃತಿ ಯಾತ್ರಾ’ ಎನ್ನುವ ಸಂಸ್ಥೆಯ ವತಿಯಿಂದ ಬಂದಿದ್ದಾರೆ. ಹಲವಾರು ವರ್ಷಗಳಿಂದಲೂ ಈ ಸಂಸ್ಥೆ ಯುವಕರಿಗೆ ಸ್ವಾವಲಂಬನೆಯ ಬದುಕನ್ನು ನಡೆಸಲು ಉತ್ತೇಜಿಸುವುದರ ಜೊತೆಗೆ ದೇಶದ ಪ್ರತಿಯೊಂದು ಭಾಗದಲ್ಲಿನ ವಿಶೇಷತೆಯನ್ನು ಅಧ್ಯಯನ ಮಾಡಿಸಲು ಕರೆದುಕೊಂಡು ಬರುತ್ತದೆ.
ಕಳೆದ 17 ವರ್ಷಗಳಿಂದ ಈ ಕೆಲಸವನ್ನು ಸಂಸ್ಥೆ ಮಾಡುತ್ತಾ ಬಂದಿದೆ. ಪ್ರತಿವರ್ಷ ನೂರಾರು ಯುವಕ-ಯುವತಿಯರನ್ನು ಎರಡು ವಾರಗಳ ಕಾಲ ದೇಶದ ನಾನಾ ಭಾಗಗಳಿಗೆ ಕರೆದೊಯ್ದು, ಅಲ್ಲಿನ ಸಂಸ್ಕೃತಿ, ವಿಶೇಷತೆಗಳ ಬಗ್ಗೆ ಜಾಗೃತಿ ಮೂಡಿಸುತ್ತೆ. ನವೆಂಬರ್ 16 ರಂದು ಮುಂಬೈನಿಂದ ಶುರುವಾದ ಈ ಯಾತ್ರೆಯಲ್ಲಿ ಎಲ್ಲರೂ ರೈಲು ಮುಖಾಂತರವೇ ತೆರಳಬೇಕು. 15 ದಿನಗಳಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ 8000 ಕಿಲೋ ಮೀಟರ್ ಕ್ರಮಿಸಲಾಗುತ್ತದೆ. ಈ ಬಾರಿಯೂ ನಾನಾ ರಾಜ್ಯಗಳ 530 ಯಾತ್ರಿಗಳು ಈ ಶಾಲೆಗೆ ಬಂದಿದ್ದರು. ಈ ಯಾತ್ರಿಗಳನ್ನು ಆದರದಿಂದ ಬರಮಾಡಿಕೊಂಡ ಮಹಾವಿದ್ಯಾಲಯದ ಸಿಬ್ಬಂದಿ, ಅವರಿಗೆ ಶಾಲೆಯ ಸಂಪೂರ್ಣ ಮಾಹಿತಿ ನೀಡಿದರು.
ಈ ಶಾಲೆಯಲ್ಲಿ ಬಗೆ ಬಗೆಯ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ತಬಲಾ, ವೀಣೆ, ಗಿಟಾರ್, ಶಾಸ್ತ್ರೀಯ ಸಂಗೀತ, ನಾಟಕ ಸೇರಿದಂತೆ ಅನೇಕ ಬಗೆಯ ಕಲೆಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಈ ಶಾಲೆಯಲ್ಲಿ ಅವಕಾಶವಿದೆ. ಸುಮಾರು 250 ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದೇಶ-ವಿದೇಶಿಗರನ್ನು ಈ ಶಾಲೆ ಸೆಳೆಯುತ್ತಿದೆ. ಇಂಥಹ ಶಾಲೆಗೆ ಭೇಟಿ ನೀಡಿದ ಯುವಕರ ತಂಡ, ಇಲ್ಲಿನ ಶಿಸ್ತು, ಮಕ್ಕಳಲ್ಲಿನ ಜಾಣ್ಮೆ ಕಂಡು ಮೂಕ ವಿಸ್ಮಿತರಾದರು.
ಇದನ್ನೂ ಓದಿ: ರಾಜಕೀಯ ಕೆಲಸಕ್ಕೆ ಕೊಂಚ ಬಿಡುವು: ಪಗಡೆ ಆಟವಾಡಿದ ಪ್ರಲ್ಹಾದ್ ಜೋಶಿ
ಈ ಜಾಗೃತಿ ಯಾತ್ರಿಯ ಶಿಬಿರಾರ್ಥಿಗಳನ್ನು ವಿಶ್ವದಾದ್ಯಂತ ಆನ್ಲೈನ್ ಪರೀಕ್ಷೆಯ ಮೂಲಕ ಅಂತಿಮಗೊಳಿಸಲಾಗಿರುತ್ತದೆ. ಈ ಬಾರಿ ಈ ಯಾತ್ರೆಗೆ ಒಟ್ಟು 40 ಸಾವಿರ ಅರ್ಜಿಗಳು ಬಂದಿದ್ದವು. ಅರ್ಜಿ ಸಲ್ಲಿಸಿದವರಿಗೆ ಪರೀಕ್ಷೆ ನಡೆಸಿ, ಕೊನೆಗೆ 530 ಯುವಕರನ್ನು ಅಂತಿಮಗೊಳಿಸಿ, ಯಾತ್ರೆಗೆ ಕರೆತರಲಾಗಿದೆ. ಈ ಯಾತ್ರೆಯ ವೇಳೆ ಸ್ವಾವಲಂಬನೆ ಮತ್ತು ಸಾಮಾಜಿಕ ಸುಧಾರಣೆ ದೃಷ್ಟಿಯಿಂದ ಯುವಕ-ಯುವತಿಯರಿಗೆ ವಿಶೇಷ ಪ್ರದೇಶಗಳ ಭೇಟಿ ಜೊತೆಗೆ, ಅಲ್ಲಿನ ವೈವಿಧ್ಯತೆಯನ್ನೂ ಪರಿಚಯಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಮಹಾವಿದ್ಯಾಲಯಕ್ಕೆ ಆಗಮಿಸಿದ ಯಾತ್ರಿಗಳು ಮಹಾವಿದ್ಯಾಲಯದ ತುಂಬಾ ಅಡ್ಡಾಡಿ ಮಕ್ಕಳಿಂದ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅವರೆಲ್ಲ ಸ್ಥಳೀಯ ಮಕ್ಕಳು ಹಾಗೂ ಸಂಗೀತ ಶಾಲೆ ವಿದ್ಯಾರ್ಥಿಗಳೊಂದಿಗೆ ಬೆರೆತು ಸಂಭ್ರಮಿಸಿದರು.
ಹದಿನೈದು ದಿನಗಳ ಕಾಲ ವಿವಿಧ ದೇಶ ವಿವಿಧ ರಾಜ್ಯಗಳ ವಿಭಿನ್ನ ಬಗೆಯ ಸಂಸ್ಕೃತಿ ಹಿನ್ನೆಲೆಯುಳ್ಳ ಹಲವಾರು ಜನರು ಒಂದೇ ಕಡೆ ಸೇರುವುದು ಕೂಡ ವಿಶೇಷವೇ. ಇದರಿಂದಾಗಿ ವಿವಿಧ ಬಗೆಯ ಸಂಸ್ಕೃತಿಗಳ ಪರಿಚಯವಾಗುತ್ತಲ್ಲದೇ, ಪರಸ್ಪರ ಸ್ವಯಂ ಉದ್ಯೋಗ ಯೋಚನೆಗಳ ವಿನಿಮಯವೂ ಆಗುತ್ತದೆ.
ವಿದೇಶಿಯರು ಕೂಡ ಈ ಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಸಾಗರದಾಚೆಯ ಸಂಸ್ಕೃತಿ, ಉಡುಗೆ-ತೊಡುಗೆ-ಸಂಪ್ರದಾಯಗಳ ಬಗ್ಗೆಯೂ ಮಾಹಿತಿ ಸಿಗುತ್ತದೆ. ಒಟ್ಟಿನಲ್ಲಿ ಇಂಥ ವಿಶೇಷ ಕಾರ್ಯಕ್ರಮ ಕಾಡ ನಡುವಿನ ಕಲಕೇರಿ ಗ್ರಾಮದ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದದ್ದು ನಿಜಕ್ಕೂ ಸ್ಥಳೀಯರಿಗೆ ವಿಶೇಷವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ