
ಧಾರವಾಡ, ಅ.29: ಧಾರವಾಡದ ಆದಿಶಕ್ತಿ ಬಡಾವಣೆಯಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ರೇವಪ್ಪ ದುರದುಂಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಭಾರಿ ಸ್ಫೋಟಕ ತಿರುವು ಸಿಕ್ಕಿದೆ. ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ಮೋಸ ಮಾಡಲಾದ ಜಾಲಕ್ಕೆ ಸಿಲುಕಿ ರೇವಪ್ಪ ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಅಕ್ಟೋಬರ್ 24ರಂದು ನೇಣಿಗೆ ಕೊರಳೊಡ್ಡಿದ್ದ ರೇವಪ್ಪ ದುರದುಂಡಿ ಅವರ ಸೊಂಟಕ್ಕೆ ಕಟ್ಟಿಕೊಂಡಿದ್ದ ಬ್ಯಾಗ್ನಲ್ಲಿ ಡೆತ್ನೋಟ್, 70ಕ್ಕೂ ಹೆಚ್ಚು ಬ್ಯಾಂಕ್ ಚೆಕ್ಗಳು ಹಾಗೂ ಮೂರು ನೋಟ್ಬುಕ್ಗಳು ಪತ್ತೆಯಾಗಿದ್ದು, ಇಡೀ ಪ್ರಕರಣದ ಅಸಲಿ ಬಣ್ಣ ಬಯಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲಾರಕೊಪ್ಪ ಗ್ರಾಮದ ನಿವಾಸಿಯಾಗಿದ್ದ ರೇವಪ್ಪ, ವಿವಿಧ ಇಲಾಖೆಗಳಲ್ಲಿ ಎಫ್ಡಿಎ (FDA), ಎಸ್ಡಿಎ (SDA) ಸೇರಿದಂತೆ ಹಲವು ಹುದ್ದೆಗಳನ್ನು ಕೊಡಿಸುವುದಾಗಿ ನಿರುದ್ಯೋಗಿ ಯುವಕರಿಂದ ಬರೋಬ್ಬರಿ 4 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದ್ದರು. ಯುವಕರಿಂದ ಪಡೆದ ಈ ದೊಡ್ಡ ಮೊತ್ತವನ್ನು ಸಿಕಂದರ್ ಚೌಧರಿ, ಹಸನಸಾಬ್ ರಂಜುಣಗಿ, ದಿಲೀಪ್ ಕುಮಾರ್ ಆಚಾರ್ಯ ಹಾಗೂ ಕಾಮಪ್ಪ ಪೂಜಾರಿ ಎಂಬುವವರಿಗೆ ರೇವಪ್ಪ ನೀಡಿದ್ದರು.
ಹಣ ಪಡೆದು ಹಲವು ವರ್ಷಗಳು ಕಳೆದರೂ ಯುವಕರಿಗೆ ಕೆಲಸ ಸಿಗಲಿಲ್ಲ. ಇದರಿಂದ ಕಂಗಾಲಾದ ಉದ್ಯೋಗಾಕಾಂಕ್ಷಿಗಳು ಹಣ ವಾಪಸ್ ನೀಡುವಂತೆ ರೇವಪ್ಪಗೆ ತೀವ್ರ ಒತ್ತಡ ಹೇರಲು ಪ್ರಾರಂಭಿಸಿದರು. ಹಣ ಪಡೆದಿದ್ದ ಮಧ್ಯವರ್ತಿಗಳಿಗೆ ರೇವಪ್ಪ ಎಷ್ಟೇ ಮನವಿ ಮಾಡಿದರೂ ಅವರು ಹಣ ಹಿಂತಿರುಗಿಸಲು ಸ್ಪಂದಿಸಲಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ಕಿರುಕುಳ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೇವಪ್ಪ ಕೊನೆಗೆ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ.
ರೇವಪ್ಪ ಆತ್ಮಹತ್ಯೆ ಮಾಡಿಕೊಂಡ ವೇಳೆ ಅವರ ಸೊಂಟಕ್ಕೆ ಕಟ್ಟಿಕೊಂಡಿದ್ದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ವಿವಿಧ ಬ್ಯಾಂಕುಗಳು ಹಾಗೂ ವಿವಿಧ ವ್ಯಕ್ತಿಗಳ ಹೆಸರಿನಲ್ಲಿದ್ದ ಸುಮಾರು 70 ಬ್ಯಾಂಕ್ ಚೆಕ್ಗಳು ಪತ್ತೆಯಾಗಿವೆ. ತಾನು ಯಾರಾರಿಂದ ಎಷ್ಟೆಷ್ಟು ಹಣ ಪಡೆದಿದ್ದೇನೆ ಮತ್ತು ಅದನ್ನು ಯಾರಿಗೆ ನೀಡಿದ್ದೇನೆ ಎಂಬುದರ ಸಂಪೂರ್ಣ ಲೆಕ್ಕಪತ್ರವಿರುವ 3 ನೋಟ್ಬುಕ್ಗಳನ್ನು ಬರೆದಿಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ರೇವಪ್ಪ ಪತ್ರ ಬರೆದಿದ್ದು, ತಮಗಾದ ಮೋಸ ಮತ್ತು ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಹೆಚ್ಚಿದ ಬಿಸಿಲು, ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷ: ರಾಜ್ಯದಲ್ಲಿ ಒಂದೇ ವಾರದಲ್ಲಿ 702 ಹಾವು ಕಡಿತ ಪ್ರಕರಣ, 6 ಸಾವು
ಮೃತರ ಪತ್ನಿ ಲಕ್ಷ್ಮೀಬಾಯಿ ನೀಡಿದ ದೂರಿನ ಆಧಾರದ ಮೇಲೆ ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಲ್ಲಿ ಉತ್ತರ ಕನ್ನಡ ಹಾಗೂ ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಧಾರವಾಡ ನಗರ ಪೊಲೀಸರು ರೇವಪ್ಪ ಬರೆದಿಟ್ಟಿರುವ ಡೆತ್ನೋಟ್ ಹಾಗೂ ಸಿಕ್ಕಿರುವ ಬ್ಯಾಂಕ್ ಚೆಕ್ಗಳನ್ನು ವಶಕ್ಕೆ ಪಡೆದುಕೊಂಡು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ