ಧಾರವಾಡ, ನ.04: ಮಳೆ ಕೈ ಕೊಟ್ಟು ರಾಜ್ಯದಲ್ಲಿ ಬರದ (Drought) ಛಾಯೆ ಆವರಿಸಿದೆ. ಈ ಹಿನ್ನೆಲೆ ವಿದ್ಯುತ್ ಉತ್ಪಾದನೆ ಕುಡ ಕುಂಟಿತವಾಗಿದ್ದು ರೈತರಿಗೆ ವಿದ್ಯುತ್ ಕೊರತೆ ಭಾರೀ ನಷ್ಟವನ್ನು ತಂದಿಟ್ಟಿದೆ ( Electricity Crisis). ಕೆಲ ಕಡೆ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ಬೆಳೆ ಬೆಳೆಯಲು ಆಗುತ್ತಿಲ್ಲ. ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಧಾರವಾಡದಲ್ಲಿ ವಿದ್ಯುತ್ ನಿರಂತರವಾಗಿ ಕೈ ಕೊಡುತ್ತಿದೆ. ಇದರಿಂದಾಗಿ ನೀರಿದ್ದರೂ ಜಮೀನಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ರೈತರಿಗೆ ಬಂದಿದೆ. ಬೆಳೆ ಕಳೆದುಕೊಳುವ ಆತಂಕದಲ್ಲಿ ರೈತ ಸಮುದಾಯ ಕಂಗಾಲಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಕೆಲ ರೈತರು ತಮ್ಮ ಹೊಲದಲ್ಲಿ ಕೆರೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕೆರೆಯಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹರಿಸಲು ಆಗುತ್ತಿಲ್ಲ. ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಬೆಣ್ಣೆಹಳ್ಳದಿಂದ ಪಂಪ್ ಮೂಲಕ ರೈತರು ನೀರು ಸಂಗ್ರಹಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿಕೊಂಡಿದ್ದಾರೆ. ಹತ್ತಾರು ಕಿ.ಮೀ. ಪೈಪ್ ಲೈನ್ ಮಾಡಿಕೊಂಡು ಬೆಣ್ಣೆಹಳ್ಳ ತುಂಬಿದಾಗ ನೀರು ತುಂಬಿಸಿಕೊಂಡಿದ್ದಾರೆ. ಆದರೆ ಕೆರೆಯಲ್ಲಿ ನೀರಿದ್ದರೂ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಸಧ್ಯ ಈರುಳ್ಳಿ ಬೆಳೆ ಕೈಗೆ ಬರುತ್ತಿರುವ ಸಮಯದಲ್ಲಿ ನೀರು ಹರಿಸಲಾಗುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ ನಾಶವಾಗುವ ಚಿಂತೆಯಲ್ಲಿ ರೈತರು ಕಣ್ಣೀರಿಡುತ್ತಿದ್ದಾರೆ. ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಸಬೇಕಾಗಿರೋ ಹೆಸ್ಕಾಂ ಕೇವಲ 3-4 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದೆ. ತಮಗೆ ಇಷ್ಟವಾದಾಗ ವಿದ್ಯುತ್ ಪೂರೈಸುತ್ತಿದ್ದಾರೆ. ಇದರಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಇತ್ತೀಚೆಗೆ ಈರುಳ್ಳಿಗೆ ಉತ್ತಮ ಬೆಲೆ ಬಂದಿದೆ. ನೀರು ಹಾಯಿಸಿದರೆ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ವಿದ್ಯುತ್ ಪೂರೈಕೆ ಕೊರತೆ ಚಿಂತೆಗೆ ನೂಕಿದೆ.
ಇದನ್ನೂ ಓದಿ: ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ: ಬದರಿನಾಥದಲ್ಲಿ ಉದ್ಧವ್ ಠಾಕ್ರೆ ಕುಟುಂಬದವರ ಎದುರು ಘೋಷಣೆ ಕೂಗಿದ ಬೆಳಗಾವಿ ನಿವಾಸಿಗಳು
ಮಳೆ ಇಲ್ಲದೇ ಎಲ್ಲ ಬೆಳೆಗಳು ಒಣಗಿ ಹೋಗಿವೆ. ಹೀಗಾಗಿ ಜಾನುವಾರಗಳಿಗೂ ತಿನ್ನಲು ಮೇವು ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಮೂಕ ಪ್ರಾಣಿಗಳಿಗೆ ಸಮರ್ಪಕರ ಮೇವು ಇಲ್ಲದೇ ಸೊರಗುತ್ತಿವೆ. ಸಾಕಿದ ಪ್ರಾಣಿಗಳ ಮೂಕ ರೋಧನ ಅನ್ನದಾತರ ಕರಳು ಹಿಂಡುತ್ತಿದೆ. ಗದಗ ಜಿಲ್ಲೆಯಲ್ಲಿ ಭೀಕರ ಬರಗಾಲಕ್ಕೆ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ರೈತರ ಕೈಗೆ ಸೇರಿಲ್ಲ. ಜಮೀನಿನಲ್ಲಿಯೆ ಬೆಳೆಗಳು ಕಮರಿ ಹೋಗಿವೆ. ಜಮೀನಿನಲ್ಲಿ ಬೆಳೆ ಬೆಳೆದಿದ್ರೆ, ಜಾನುವಾರುಗಳಿಗೆ ಮೇವು ಸಿಗ್ತಾಯಿತ್ತು. ಆದ್ರೆ, ಈ ಬಾರಿ ಬರಗಾಲದಿಂದ ಜಮೀನಿನಲ್ಲಿ ಬೆಳೆ ಬೆಳೆದಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಜಾನುವಾರಗಳಿಗೆ ಆಹಾರದ ಕೊರತೆ ಕಂಡು ಬಂದಿದೆ. ಅಂದಹಾಗೇ ಗದಗ ಜಿಲ್ಲೆ ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ, ಮುಂಡರಗಿ ತಾಲೂಕುಗಳಲ್ಲಿ ಬರದ ಎಫೆಕ್ಟ್ ನೇರವಾಗಿ ಜಾನುವಾರುಗಳಿಗೆ ತಟ್ಟಿದೆ. ಹಸಿರು ಹುಲ್ಲು ಸಿಗ್ತಾಯಿಲ್ಲಾ. ಮಳೆ ಇಲ್ಲದೆ ಗುಡ್ಡಗಾಡು ಪ್ರದೇಶದಲ್ಲಿ ಹುಲ್ಲು ಬೆಳೆದಿಲ್ಲ. ಹೀಗಾಗಿ ಜಾನುವಾರಗಳಿಗೆ ಆಹಾರ ಸಿಗ್ತಾಯಿಲ್ಲಾ. ಕಳೆದ ವರ್ಷ ಸ್ಟಾಕ್ ಮಾಡಿರೋ ಹೊಟ್ಟಿನ ಬಣವೆ, ಜೋಳದ ಬಣವೆಗಳು ಬಹುತೇಕ ಖಾಲಿಯಾಗಿವೆ. ಹೀಗಾಗಿ ಅಲ್ಪಸ್ವಲ್ಪ ಆಹಾರ ಹಾಕುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಸರ್ಕಾರ ಬರಗಾಲ ಅಂತ ಘೋಷಣೆ ಮಾಡಿ ಗಪ್ ಚುಪ್ ಆಗಿದೆ. ಹೀಗಾಗಿ ಕಂಗಾಲಾದ ರೈತರು ಕೂಡಲೇ ಸರ್ಕಾರ ಗೋಶಾಲೆ ಆರಂಭ ಮಾಡಿ, ಜಾನುವಾರಗಳ ರಕ್ಷಣೆ ಮಾಡ್ಬೇಕು, ಇಲ್ಲವಾದರೆ ನಾವು ಜಾನುವಾರುಗಳನ್ನು ಮಾರುವ ಸ್ಥಿತಿ ಬರುತ್ತೇ ಅಂತ ಅನ್ನದಾತರು ಕಣ್ಣೀರಿಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:02 pm, Sat, 4 November 23