
ಹುಬ್ಬಳ್ಳಿ, 16: ಒಂದಲ್ಲ, ಎರಡಲ್ಲ, ಹುಬ್ಬಳ್ಳಿ ಗಣೇಶೋತ್ಸವ (Hubballi Ganeshotsav) ಆಚರಣೆಗೆ ಬರೋಬ್ಬರಿ 18 ಷರತ್ತುಗಳನ್ನು ವಿಧಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹುಬ್ಬಳ್ಳಿ ಗಣೇಶೋತ್ಸವಕ್ಕೆ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಮಾರ್ಪಾಡು ಮಾಡುವಂತೆ ಸಮಿತಿ ಒತ್ತಾಯಿಸುತ್ತಿದ್ದು, ಒಂದೊಮ್ಮೆ ಸಡಿಲಿಕೆ ಮಾಡದಿದ್ದಲ್ಲಿ ಹಿರಿಯರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗಜಾನನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಸಂಜೀವ್ ಬಡಸ್ಕರ್ ಹೇಳಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿದ ವಿಚಾರವಾಗಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಆಗಸ್ಟ್ 31 ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡು ಠರಾವಿನ ಆದೇಶ ಪ್ರಕಾರ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದರು.
ಸೆ.19 ರಿಂದ ಅನುಮತಿ ನೀಡಿದ್ದೇವೆ, ಇದಕ್ಕೂ ಮುಂಚೆ ಪೂಜೆಗೆ ಅವಕಾಶ ಇಲ್ಲ. ಗಣೇಶ ಪ್ರತಿಷ್ಠಾಪನೆ ಸಮಯವನ್ನ ಬದಲಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೆವೆ ಎಂದರು.
ಮೂರು ದಿನಗಳವರೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕಾನೂನು ಸುವ್ಯವಸ್ಥೆಗಾಗಿ ನಾವು 18 ಷರತ್ತುಗಳನ್ನು ಹಾಕಿದ್ದೇವೆ. ಪೆಂಡಾಲ್ ಅಳತೆ ಸೇರಿದಂತೆ ಹಲವು ಷರತ್ತುಗಳನ್ನ ಹಾಕಲಾಗಿದೆ. ಅನ್ಯ ಧರ್ಮದವರಿಗೆ ಧಕ್ಕೆ ಉಂಟು ಮಾಡದಂತೆ ಷರತ್ತನ್ನೂ ವಿಧಿಸಲಾಗಿದೆ. ಬಾಡಿಗೆ ಪಡೆಯದೆ ನಾವು ಒಂದು ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿದ್ದೇವೆ ಎಂದರು.
ಇದ್ನನೂ ಓದಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ; ಈಗಾಗಲೇ ಸಿದ್ದವಾದ ವಿನಾಯಕ
ಅನುಮತಿ ಕೊಡಬಾರದು ಅಂತಾ ನಮ್ಮ ಮೇಲೆ ಯಾರ ಒತ್ತಡವೂ ಇರಲಿಲ್ಲ. ನಾವು ಅನುಮತಿ ನೀಡಬೇಕು ಅನ್ನೋಷ್ಟರಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಾಗಿದ್ದರಿಂದ ಅನುಮತಿ ಕೊಡಲು ಆಗಲಿಲ್ಲ. ಹೈಕೋರ್ಟ್‌ನಲ್ಲಿ ರಿಟ್ ಹಿನ್ನೆಲೆ ಅನುಮತಿ ನೀಡುವುದು ವಿಳಂಬವಾಯಿತು. ಹೈಕೋರ್ಟ್ ಆದೇಶ ಪ್ರತಿ ಸಿಕ್ಕಿದ್ದು ತಡವಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದರು.
ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸೇರಿ ಕಾನೂನು ಸುವ್ಯವಸ್ಥೆಗಾಗಿ ಷರತ್ತು ಹಾಕ್ಕಿದ್ದೇವೆ. ಷರತ್ತಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಮಯವನ್ನ ಬದಲಾವಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮುಹೂರ್ತದ ಸಮಯವನ್ನ ಪೊಲೀಸ್ ಆಯುಕ್ತರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಕಳೆದ ಬಾರಿಗಿಂತ ಪ್ರಸಕ್ತ ವರ್ಷ ಬಹುತೇಕ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಗಜಾನನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಸಂಜೀವ್ ಬಡಸ್ಕರ್ ಹೇಳಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಮೆರವಣಿಗೆ ಮಾಡದೇ ನಿಗದಿತ ಸಮಯಕ್ಕೆ ಪ್ರತಿಷ್ಠಾಪನೆ ಸೇರಿದಂತೆ ಹಲವು ಷರತ್ತುಗಳನ್ನ ವಿಧಿಸಿದ್ದಾರೆ ಎಂದರು.
ಶಾಸ್ತ್ರೋಕ್ತವಾಗಿ ನಾವು ಗಣೇಶ ಪ್ರತಿಷ್ಠಾಪನೆ ಮಾಡಬೇಕಿರುವುದರಿಂದ ಷರತ್ತುಗಳಿಗೆ ನಾವು ಒಪ್ಪಿಕೊಂಡಿಲ್ಲ. ನಾಳೆ ಬೆಳಗ್ಗೆ ಷರತ್ತು ಮಾರ್ಪಾಡು ಮಾಡುವಂತೆ ಪಾಲಿಕೆಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಒಪ್ಪದಿದ್ದರೆ ಹಿರಿಯರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ