
ಹುಬ್ಬಳ್ಳಿ , ಅ,27: ರಾಜ್ಯದಲ್ಲಿ ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಜೈನ ಸಮುದಾಯವು ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಧುಮುಕಿದೆ. ಮುಂದಿನ 10 ದಿನಗಳ ಒಳಗಾಗಿ ಸರ್ಕಾರ ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಬೆಳಗಾವಿಯ ಸುವರ್ಣಸೌಧದ ಎದುರು ಅನ್ನ, ನೀರು ತೊರೆದು ‘ಸಲ್ಲೇಖನ ವ್ರತ’ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥದ ಶ್ರೀ ಗುಣಧರನಂದಿ ಜೈನಮುನಿ ಮಹಾರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಜೈನಮುನಿಗಳು, ವರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಹಕ್ಕುಗಳಿಗಾಗಿ ಹಮ್ಮಿಕೊಂಡಿರುವ ಹೋರಾಟದ ರೂಪುರೇಷೆಯನ್ನು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಸಣ್ಣ ಸಣ್ಣ ಸಮುದಾಯಗಳಿಗೆ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವ ಸರ್ಕಾರ, ರಾಜ್ಯದಲ್ಲಿ ಬರೋಬ್ಬರಿ 20 ಲಕ್ಷ ಮತದಾರರಿರುವ ಜೈನ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಗುಣಧರನಂದಿ ಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈನ ಬಸದಿಗಳು ಹಾಗೂ ಮುನಿಗಳ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಜೈನ ಮುನಿಗಳು ಪಾದಯಾತ್ರೆ (ಸಂಚಾರ) ನಡೆಸುವ ಸಂದರ್ಭದಲ್ಲಿ ರಾತ್ರಿ ವೇಳೆ ತಂಗಲು ಸರ್ಕಾರಿ ಶಾಲೆಗಳಲ್ಲಿ ಅಧಿಕೃತ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 99 ಲಕ್ಷ ವೋಟ್ ಡಿಲೀಟ್: ಫಾರ್ಮ್ 7 ವಿವಾದಕ್ಕೆ ವಿಪಕ್ಷಗಳು ಕಾರಣ ಎನ್ನುವುದು ಸ್ಪಷ್ಟ ಎಂದ ಡಿಕೆಶಿ
ಮೊದಲು ಜೈನ ಮತದಾರರು ಹೆಚ್ಚಿರುವ ಕ್ಷೇತ್ರಗಳ ಶಾಸಕರನ್ನು ಭೇಟಿಯಾಗಿ, ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಲಾಗುವುದು. ಲಕ್ಷಾಂತರ ಜೈನ ಸಮುದಾಯದ ಜನರೊಂದಿಗೆ ಚಿಕ್ಕೋಡಿಯಿಂದ ಬೆಳಗಾವಿ ಸುವರ್ಣಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಬೆಳಗಾವಿ ಸುವರ್ಣಸೌಧದ ಎದುರು ಅನ್ನ, ನೀರು ಸಂಪೂರ್ಣವಾಗಿ ತ್ಯಜಿಸಿ ‘ಸಲ್ಲೇಖನ ವ್ರತ’ ಕೈಗೊಳ್ಳುವ ಮೂಲಕ ಪ್ರಾಣತ್ಯಾಗ ಮಾಡಲಾಗುವುದು ಎಂದು ಜೈನಮುನಿಗಳು ಎಚ್ಚರಿಸಿದ್ದಾರೆ. ಜೈನ ಸಮುದಾಯದ ಈ ಹೋರಾಟದ ಎಚ್ಚರಿಕೆಗೆ ಹೇಗೆ ಸ್ಪಂದಿಸಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Tue, 27 October 26