ಉಚಿತ ಗ್ಯಾರಂಟಿ ನಂಬಿ ಅಧಿಕಾರ ಕೊಟ್ಟ ಜನರಿಗೆ ಈ ಬಜೆಟ್ ನಲ್ಲಿ ಸಿಕ್ಕಿದ್ದು “ಬೆಲೆ ಏರಿಕೆಯ ಗ್ಯಾರಂಟಿ” ಮಾತ್ರ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

|

Updated on: Jul 07, 2023 | 10:55 PM

ಚುನಾವಣೆಯ ಸಂಧರ್ಭದಲ್ಲಿ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳ ಆಮಿಷ ಒಡ್ಡಿ ಗ್ಯಾರಂಟಿ ಕಾರ್ಡ್ ನೀಡಿದಾಗ ಆ ಕಾರ್ಡ್ ನಲ್ಲಿ ಎಲ್ಲಿಯೂ ಸಹ ಜನರನ್ನು ಸಾಲದ ಕೂಪಕ್ಕೆ ತಳ್ಳಿ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿ ಫ್ರೀ ಯೋಜನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿರಲಿಲ್ಲ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಉಚಿತ ಗ್ಯಾರಂಟಿ ನಂಬಿ ಅಧಿಕಾರ ಕೊಟ್ಟ ಜನರಿಗೆ ಈ ಬಜೆಟ್ ನಲ್ಲಿ ಸಿಕ್ಕಿದ್ದು ಬೆಲೆ ಏರಿಕೆಯ ಗ್ಯಾರಂಟಿ ಮಾತ್ರ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us on

ಧಾರವಾಡ : ಹಾಲಿನ ದರವೂ ಏರಿಕೆ, ಆಲ್ಕೋಹಾಲಿನ ದರವೂ ಏರಿಕೆ, ಆಸ್ತಿ ತೆರಿಗೆ ಏರಿಕೆ, ನೋಂದಣಿ ಹಾಗೂ ಮುದ್ರಾಂಕ ತೆರಿಗೆ ಏರಿಕೆ, ಕಾರುಗಳ ಬೆಲೆ ಏರಿಕೆ, ಕಡೆಗೆ ಜನಸಾಮಾನ್ಯರು ಓಡಿಸುವ ಬೈಕ್ ಗಳ ಬೆಲೆಯೂ ಏರಿಕೆ… ಹೀಗೆ ಜನಸಾಮಾನ್ಯರ ಮೇಲೆ ದರ ಏರಿಕೆಯ ಬರೆ ಹಾಕಿರುವುದೇ ಸಿದ್ದರಾಮಯ್ಯನವರ ಬಜೆಟ್ ನ ಏಕೈಕ ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇಂದು ಮಂಡಿಸಿದ ಬಜೆಟ್ (Karnataka Budget 2023) ಅನ್ನು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ಮೊದಲೇ ಬಳಲಿ ಬೆಂಡಾಗಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯನವರು ಇಂದು ಮಂಡಿಸಿರುವ ತಮ್ಮ ಬಜೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ತೆರಿಗೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗ ಭಾರೀ ಬೆಲೆ ಏರಿಕೆ ಮತ್ತೊಂದು ಗ್ಯಾರಂಟಿ ಕೊಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ನಿಜವಾಗಿಯೂ ಜಾರಿಗೆ ಬಂದಿರುವ ಹಾಗೂ ಮುಂದೆಯೂ ಜನರ ಪಾಲಿಗೆ ಮಾರಕವಾಗಿ ಪರಿಣಮಿಸಲಿರುವ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆಯ ಗ್ಯಾರಂಟಿ. ಇದನ್ನು ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ಕೂಡ ಖಾತ್ರಿ ಮಾಡಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೂರು ಲಕ್ಷದ 27 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ತಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಶೇಕಡಾ 26ರಷ್ಟು ಪ್ರಮಾಣದ ಹಣವನ್ನು ಸಾಲ ಮಾಡಿ ಹೊಂದಿಸೋದಾಗಿ ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲಿ ರಾಜ್ಯದ ಜನರನ್ನು, ಇಡೀ ರಾಜ್ಯವನ್ನೂ ಸಾಲದ ಸುಳಿಗೆ ಸಿಲುಕಿಸುವೆ ಎಂಬ ಅಧಿಕೃತ ಘೋಷಣೆ ಮಾಡಿದಂತೆಯೇ ಸರಿ.

ಚುನಾವಣೆಯ ಸಂಧರ್ಭದಲ್ಲಿ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳ ಆಮಿಷ ಒಡ್ಡಿ ಗ್ಯಾರಂಟಿ ಕಾರ್ಡ್ ನೀಡಿದಾಗ ಆ ಕಾರ್ಡ್ ನಲ್ಲಿ ಎಲ್ಲಿಯೂ ಸಹ ಜನರನ್ನು ಸಾಲದ ಕೂಪಕ್ಕೆ ತಳ್ಳಿ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿ ಫ್ರೀ ಯೋಜನೆ ನೀಡುತ್ತೇವೆ ಎಂದು ಹೇಳಿರಲಿಲ್ಲ.

ಆದರೆ ಈಗ ಬಜೆಟ್ ನಲ್ಲಿ ಶೇ. 26ರಷ್ಟು ಪ್ರಮಾಣದ ಹಣ ಸಾಲ ಮಾಡಿ ಹೊಂದಿಸೋದಾಗಿ ಹೇಳಿರುವುದು ಜನರ ಕಣ್ಣಿಗೆ ಮಣ್ಣೆರೆಚಿ ಮಾಡುತ್ತಿರುವ ಮಹಾ ಮೋಸ ಎಂದು ಜೋಶಿಯವರು ಟೀಕಿಸಿದ್ದಾರೆ‌.

ರಾಷ್ಟ್ರ ಹಿತದ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಹಾಗೂ ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಆದ್ಯತೆಯ ಮೇರೆಗೆ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಸೇರಿದಂತೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನಹಿತದ ಕಾಯ್ದೆಗಳನ್ನು ರದ್ದು ಮಾಡೋದಾಗಿ ಬಜೆಟ್ ನಲ್ಲಿ ಘೋಷಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಯೊಂದನ್ನೂ ಹಳದಿ ಕಣ್ಣಿನೊಂದಿಗೆ ನೋಡುತ್ತಿದೆ ಹಾಗೂ ದ್ವೇಷದ ಆಡಳಿತಕ್ಕೆ ಮುಂದಾಗಿದೆ ಎಂಬುದಕ್ಕೆ ಸಾಕ್ಷಿ ಎಂದಿದ್ದಾರೆ.

ಬಿಜೆಪಿ ಸರ್ಕಾರ ಗೋವುಗಳ ಸಂರಕ್ಷಣೆಗಾಗಿ ಜಾರಿಗೆ ತಂದಿದ್ದ “ಜಿಲ್ಲೆಗೊಂದು ಗೋಶಾಲೆ ಯೋಜನೆ” ಯನ್ನೂ ಕೈಬಿಡಲಾಗಿದೆ.‌ ರಾಜ್ಯ ಸರ್ಕಾರದ ಈ ನಡೆ ದ್ವೇಷದ ರಾಜಕೀಯಕ್ಕೆ ಗೋಮಾತೆಯನ್ನು ಬಲಿಪಡೆಯುವ ದುರುದ್ದೇಶದ ನಡೆಗೆ ಹಿಡಿದ ಕೈಗನ್ನಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ನ ಉದ್ದಕ್ಕೂ ಕೇಂದ್ರದ ವಿರುದ್ಧ ಆರೋಪಗಳನ್ನು ಮಾಡಿರುವುದು ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗದಿದ್ದಾಗ ಮುಂದೆ ಕೇಂದ್ರದ ಮೇಲೆ ಗೂಬೆ ಕೂರಿಸಲು ಮುಂಗಡ ತಯಾರಿ ಮಾಡಿಕೊಂಡ ಮುಂಗಡಪತ್ರದಂತೆ ಇದು ಗೋಚರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆ ಮಾಡಿದ್ದ ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ಈಗ ಮೇಕೆದಾಟು ಯೋಜನೆಗೆ ಒಂದೇ ಒಂದು ರೂಪಾಯಿ ಹಣವನ್ನು ಮೀಸಲಿಟ್ಟಿಲ್ಲ.

ಕೇವಲ ಮೇಕೆದಾಟು ಯೋಜನೆ ಅಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನರ ಬಹು ವರ್ಷಗಳ ಬೇಡಿಕೆಯ ಮಹಾದಾಯಿ ಯೋಜನೆಗೂ ಸಹ ಈ ಬಜೆಟ್ ನಲ್ಲಿ ಒಂದೇ ಒಂದು ರೂಪಾಯಿ ಹಣವನ್ನು ಸಹ ಕಾಂಗ್ರೆಸ್ ಸರ್ಕಾರದ ಈ ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಕೈಬಿಟ್ಟಿರುವುದು ಮಹಿಳಾ ವಿರೋಧಿ ಹಾಗೂ ಹೆಣ್ಣುಮಕ್ಕಳ ಕಲ್ಯಾಣದ, ಪ್ರಗತಿಯ ವಿರೋಧಿ ನಡೆಯಾಗಿದ್ದು, ರಾಜ್ಯ ಸರ್ಕಾರ ಈ ನಡೆಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ‌.

ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ನೀಡಿರುವುದರ ಅರ್ಥ ಏನು? ಜನರಿಗೆ ಹೆಚ್ಚು ಮದ್ಯ ಕುಡಿಸಿ ಅವರ ಆರೋಗ್ಯ, ಸಂಸಾರ ಹಾಗೂ ಬದುಕು ಹಾಳು ಮಾಡುವ ದುರುದ್ದೇಶವೇ? ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾದ ಗ್ಯಾರಂಟಿಗಳ ಘೋಷಿಸಿ ಈಗ ಅದನ್ನು ಅನುಷ್ಠಾನ ಮಾಡಲೂ ಆಗದ ಕಾರಣ ಅದಕ್ಕಾಗಿ ಜನರಿಗೆ ಹೆಚ್ಚು ಮದ್ಯ ಕುಡಿಸುವ ಉದ್ದೇಶ ಜನರಿಗೆ ವಿಷ ಉಣಿಸಿದಂತೆ ವಿನಃ ಬೇರೇನೂ ಅಲ್ಲ ಎಂದು ಪ್ರಲ್ಹಾದ ಜೋಶಿಯವರು ರಾಜ್ಯ ಸರ್ಕಾರದ ಬಜೆಟ್ಟನ್ನು ಟೀಕಿಸಿದ್ದಾರೆ.

Also Read:  ವಿಧಾನಸಭೆ ಚುನಾವಣೆ 2023 – ರಾಜಸ್ಥಾನ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ನೇಮಕ

ಬಜೆಟ್ ನಲ್ಲಿ ಕೇಂದ್ರದ ವಿರುದ್ಧ ಸರಣಿ ಆರೋಪಗಳ ಮಾಡಿರುವ ಸಿದ್ದರಾಮಯ್ಯನವರು, ಈಗ ಜನರಿಗೆ ನೀಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ನೀಡುತ್ತಿರುವುದು ಅಂತ ಬಜೆಟ್ ನಲ್ಲಿ ಕಡೆಗೂ ಒಪ್ಪಿಕೊಂಡಿರುವುದರಿಂದ, ಜನರಿಗೆ ಇಷ್ಟು ದಿನ ಹಾಗೂ ಈ ಹಿಂದೆ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದ 10 ಕೆಜಿ ಅಕ್ಕಿ ನೀಡುವ ಸುಳ್ಳು ಭರವಸೆಯ ಹಿಂದಿನ ವಾಸ್ತವವೇನು ಎಂಬುದನ್ನು ಬಟಾಬಯಲು ಮಾಡಿದಂತಾಗಿದೆ‌.

ಕೇಂದ್ರ ಸರ್ಕಾರ ಕೊಡುತ್ತಿರುವ 5kg ಅಕ್ಕಿಯನ್ನಷ್ಟೇ ರಾಜ್ಯ ಸರ್ಕಾರ ಜನರಿಗೆ ನೀಡುತ್ತಿದೆ ನೀಡುತ್ತಿದೆ ಎಂಬುದರ ಅರಿವು ಎಲ್ಲರಿಗೂ ಇದೆ. ಈ ಕಾಂಗ್ರೆಸ್ ಸರ್ಕಾರ ಸುಳ್ಳಿನ ತಳಹದಿಯ ಮೇಲೆ ನಿರ್ಮಾಣವಾಗಿರುವ ಮಹಾಮೋಸದ ಸರ್ಕಾರ ಎಂಬುದನ್ನು ಈ ಬಜೆಟ್ಟೇ ಬಯಲು ಮಾಡಿದೆ. ಒಟ್ಟಾರೆ ಸಿದ್ದರಾಮಯ್ಯನವರು ಇಂದು ಮಂಡಿಸಿರುವ ಬಜೆಟ್ ಅವರ ಸುಳ್ಳಿನ ಸರಣಿಯ ಮುಂದುವರೆದ ಭಾಗವೇ ವಿನಃ ಇದರಿಂದ ರಾಜ್ಯದ ಜನರಿಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಭಿಪ್ರಾಯಪಟ್ಟಿದ್ದಾರೆ.

Published On - 10:45 pm, Fri, 7 July 23