Dharwad News: ದೋಷಯುಕ್ತ ಮೊಬೈಲ್ ಸರಬರಾಜು: ಆಸಿಸ್ ಕಂಪನಿಗೆ ರೂ. 78 ಸಾವಿರ ದಂಡ
ಓರ್ವ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸಕ್ಕಾಗಿ ರೂ. 57,999 ನೀಡಿ ಆಸಿಸ್ ರಾಗ್-5 ಮೊಬೈಲ್‌ನ್ನು ಖರೀದಿಸಿದ್ದರು. ಆದರೆ ಖರೀದಿಸಿದ 6 ತಿಂಗಳ ಒಳಗೆ ಅದರಲ್ಲಿ ದೋಷಗಳು ಕಂಡು ಬಂದಿವೆ. ಹಾಗಾಗಿ ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ್ದಾರೆ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದು, ಪರಿಹಾರ ನೀಡುವಂತೆ ಆಯೋಗ ತಿಳಿಸಿದೆ.
ಧಾರವಾಡ: ದೋಷಯುಕ್ತ ಮೊಬೈಲ್ (Mobile) ಸರಬರಾಜು ಮಾಡಿದ ಆಸಿಸ್ ಕಂಪನಿಗೆ 78 ಸಾವಿರ ರೂ. ದಂಡ ಮತ್ತು ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ. ನಗರದ ಸರಸ್ವತಪುರದ ವಾಸಿ ಕೇತನ ಚಿಕ್ಕಮಠ ಎಂಬ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸಕ್ಕಾಗಿ ರೂ. 57,999 ನೀಡಿ ಉತ್ತಮ ಸೌಲಭ್ಯ ಇದೆ ಅನ್ನುವ ಆಸಿಸ್ ಕಂಪನಿಯ, ಆಸಿಸ್ ರಾಗ್-5 ಮೊಬೈಲ್‌ನ್ನು 2021 ರ ಜೂನ್ 5ರಂದು ಖರೀದಿಸಿದ್ದರು. ಮೊಬೈಲ್ ಖರೀದಿಸಿದ 6 ತಿಂಗಳ ಒಳಗೆ ಅದರಲ್ಲಿ ದೋಷಗಳು ಕಂಡು ಬಂದವು.
ಅಲ್ಲದೇ ಮೊಬೈಲ್ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಅದಕ್ಕಾಗಿ ಕೇತನ್ ಮೊಬೈಲ್‌ನ್ನು ಆಸಿಸ್ ಕಂಪನಿಯ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಆಸಿಸ್ ಸರ್ವಿಸ್ ಸೆಂಟರ್‌ಗೆ ಪರಿಶೀಲನೆ ಮತ್ತು ದುರಸ್ತಿಗಾಗಿ ಹಲವಾರು ಬಾರಿ ಕೊಟ್ಟಿದ್ದರು. ಆದರೆ, ಮೊಬೈಲ್ ಪರಿಶೀಲಿಸಿ ಅದರ ಮದರ್ ಬೋರ್ಡ್ ಬದಲಾಯಿಸಿ ಕೊಟ್ಟರೂ ಕೆಲವೇ ದಿನಗಳಲ್ಲಿ ಮತ್ತೆ ದೋಷ ಕಾಣಿಸಿಕೊಂಡಿತು. ಆದ್ದರಿಂದ ದೂರುದಾರ ಆಸಿಸ್ ಕಂಪನಿಯ ಉತ್ಪಾದಕರು ತನಗೆ ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ್ದಾರೆ ಹಾಗೂ ಸರ್ವಿಸ್ ಸೆಂಟರ್ನವರು ಸೂಕ್ತ ಸೇವೆ ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: 24 ಗಂಟೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಬದಲಾವಣೆ: ರಾಜ್ಯ ಸರ್ಕಾರ ಆದೇಶ
ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಮೊಬೈಲ್‌ನಲ್ಲಿ ಉತ್ಪಾದನಾ ದೋಷ ಮೇಲ್ನೊಟಕ್ಕೆ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ. ಮೊಬೈಲ್‌ನಲ್ಲಿ ಉತ್ಪಾದನಾ ದೋಷ ಕಂಡುಬಂದಿದ್ದರಿಂದ ಅದನ್ನು ತಯಾರಿಸಿದ ಆಸಿಸ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹೊಸ ಮೊಬೈಲ್ ದೂರುದಾರರಿಗೆ ಕೊಡಬೇಕು.
ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ
ಒಂದು ತಿಂಗಳ ಒಳಗಾಗಿ ಮೊಬೈಲ್ ಬದಲಾವಣೆ ಮಾಡಿಕೊಡಲು ವಿಫಲರಾದಲ್ಲಿ ಮೊಬೈಲ್‌ನ ಬೆಲೆ ರೂ. 57,999 ಹಾಗೂ ಅದರ ಮೇಲೆ ಶೇ.8 ರಂತೆ ಈ ತೀರ್ಪು ನೀಡಿದ ದಿನದಿಂದ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಹಾಗೂ ಮಾನಸಿಕ ತೊಂದರೆಗಾಗಿ ದೂರುದಾರ/ಉತ್ಪಾದಕರು ರೂ. 15,000 ಪರಿಹಾರ ಹಾಗೂ ರೂ. 5,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಸಿಸ್ ಮೊಬೈಲ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 pm, Fri, 7 July 23