ಧಾರವಾಡ, ಆಗಸ್ಟ್ 31: ಧಾರವಾಡದ ಆಂಜನೇಯ ನಗರದ ತಂಗೆಮ್ಮ ಎಂಬಾಕೆಯನ್ನು ಕರೆದುಕೊಂಡು ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ತಂಗೆಮ್ಮ ವಾಸವಾಗಿದ್ದ ಮನೆಯ ಎದುರಿಗೆ ಬೆಳಗಾವಿ ಜಿಲ್ಲೆ ರಾಮದುರ್ಗದ ಮುನ್ನಾ ಎಂಬ ವ್ಯಕ್ತಿ ಬಂದು ಕಳೆದ ಆರು ತಿಂಗಳಿನಿಂದ ವಾಸವಾಗಿದ್ದ. ಬಾಡಿಗೆ ಮನೆ ಪಡೆದು ಅಲ್ಲೇ ವಾಸವಿದ್ದ. ಈ ವೇಳೆ ತಂಗೆಮ್ಮಳ ಪರಿಚಯ ಮಾಡಿಕೊಂಡ ಈತ ಆಕೆಯ ಜೊತೆ ಪ್ರೀತಿ, ಪ್ರೇಮದ ಕಥೆ ಕಟ್ಟಿ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ವಿಚಿತ್ರ ಎಂದರೆ ಮುನ್ನಾಗೆ ಈಗಾಗಲೇ ಮದುವೆ ಆಗಿ ಎರಡು ಮಕ್ಕಳು ಸಹ ಇವೆ. ತಂಗೆಮ್ಮಳಿಗೂ ಮದುವೆಯಾಗಿದ್ದು, ಆಕೆಯನ್ನು ಇನ್ನೂ ಗಂಡನ ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಜುಲೈ 11 ರಂದೇ ಉಪನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರೂ ಇದುವರೆಗೂ ಆ ಇಬ್ಬರೂ ಪತ್ತೆಯಾಗಿಲ್ಲ. ಮುನ್ನಾ ತಂಗೆಮ್ಮಳ ತಾಯಿಯ ಬಳಿ ದುಡ್ಡು ಕೂಡ ಪಡೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ದೂರು ದಾಖಲಾಗಿ ಒಂದೂವರೆ ತಿಂಗಳಾದರೂ ತಂಗೆಮ್ಮಳನ್ನು ಪೊಲೀಸರು ಪತ್ತೆ ಮಾಡದ ಹಿನ್ನೆಲೆಯಲ್ಲಿ ತಂಗೆಮ್ಮಳ ಪೋಷಕರು ಶ್ರೀರಾಮ ಸೇನೆಯ ಸಹಾಯದಿಂದ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಮುನ್ನಾನ ಮೇಲೆ ಅಪಹರಣದ ಕೇಸ್ ದಾಖಲಿಸದೇ ಕೇವಲ ಮಿಸ್ಸಿಂಗ್ ಕೇಸ್ ದಾಖಲಿಸಲಾಗಿದೆ. ಅಲ್ಲದೇ ಇದೊಂದು ಲವ್ ಜಿಹಾದ್ ಎಂದು ಪರಿಗಣಿಸಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಇದೇ ರೀತಿ 44 ಸಾವಿರ ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. ಪೊಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ವಾರದ ಅವಧಿಯಲ್ಲಿ ಮುನ್ನಾನನ್ನು ಪತ್ತೆ ಮಾಡಿ, ಆತನ ಮೇಲೆ ಲವ್ ಜಿಹಾದ್ ಪ್ರಕರಣ ದಾಖಲಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹಾಗೂ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹಾರಲಿವೆ ಧಾರವಾಡದ ನೊಣಗಳು; ಏನಿದಕ್ಕೆ ಕಾರಣ?
ಒಂದೂವರೆ ತಿಂಗಳಿಂದ ಇಬ್ಬರೂ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರನ್ನು ಹುಡುಕುವ ಕೆಲಸವನ್ನೂ ಪೊಲೀಸರು ಮಾಡುತ್ತಿಲ್ಲ. ಇತ್ತ ತಂಗೆಮ್ಮಳ ಪತಿ ಮನೆಯವರು ಕೂಡ ಮುಂದೇನು ಮಾಡಬೇಕೆಂದು ತೋಚದೇ ಕೈಚೆಲ್ಲಿ ಕುಳಿತಿದ್ದಾರೆ. ಒಟ್ಟಿನಲ್ಲಿ ಅದಾಗಲೇ ಮದುವೆಯಾಗಿರುವ ಮುನ್ನಾ ಅದೇ ತಾನೇ ಮದುವೆಯಾಗಿದ್ದ ತಂಗೆಮ್ಮಳನ್ನು ಕರೆದೊಯ್ದಿದ್ದು ಎರಡೂ ಕುಟುಂಬಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ