ರಾಜ್ಯದಲ್ಲಿ ಈ ಬಾರಿ ಮುಂಗಾರು, ಹಿಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಒಂದು ಕಡೆ ರೈತರಿಗೆ ತಮಗೆ ಬೆಳೆ ಬರಲಿಲ್ಲ ಅನ್ನೋ ನೋವು, ಮತ್ತೊಂದು ಕಡೆ ಈ ಬಾರಿ ತಮ್ಮ ನೆಚ್ಚಿನ ಜಾನುವಾರುಗಳನ್ನು ಸಾಕೋದು ಹೇಗೆ ಅನ್ನೋ ಆತಂಕ. ಏಕೆಂದರೆ ಮಳೆ ಇಲ್ಲದಿದ್ದಕ್ಕೆ ಬೆಳೆಯೂ ಇಲ್ಲ, ಇದರಿಂದಾಗಿ ಮೇವೂ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ಬಾರಿ ಬೇಸಿಗೆ ಹೊತ್ತಿಗೆ ಜಾನುವಾರುಗಳಿಗೆ ಮೇವಾದರೂ ಇರಲಿ ಅನ್ನೋ ಕಾರಣಕ್ಕೆ ಧಾರವಾಡದ ರೈತನೊಬ್ಬ ಸಾವಿರಾರು ರೂಪಾಯಿ ಖರ್ಚು ಮಾಡಿ ಹರಸಾಹಸ ಪಡುತ್ತಿದ್ದಾನೆ.
ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ರೈತ ಮಲ್ಲಪ್ಪ ಕಲ್ಲಣ್ಣವರ್ ಅವರಿಗೆ ಇರೋದು 1 ಎಕರೆ ಜಮೀನು. ಈ ಬಾರಿ ಮಳೆ ಬಾರದೇ ಬಿತ್ತಿದ್ದ ಬೆಳೆಯಲ್ಲ ಒಣಗಿ ಹೋಯಿತು. ಕೃಷಿಗಾಗಿ ಸಾಕಿದ್ದ ಜಾನುವಾರುಗಳಿಗು ಕೂಡ ಈ ಬಾರಿ ಮೇವು ಸಿಗೋದಿಲ್ಲ ಅನ್ನೋದನ್ನು ಅರಿತ ಮಲ್ಲಪ್ಪ ತನ್ನ ಜಮೀನಿನ ಪಕ್ಕದಲ್ಲಿದ್ದ ಎರಡು ಎಕರೆ ಜಮೀನನ್ನು ಲಾವಣಿ ತೆಗೆದುಕೊಳ್ಳಲು ನಿರ್ಧರಿಸಿದರು. ಆ ಜಮೀನಿನ ಮಾಲಿಕರನ್ನು ಸಂಪರ್ಕಿಸಿ, ಎಕರೆಗೆ 30 ಸಾವಿರ ರೂಪಾಯಿಯಂತೆ ಲಾವಣಿ ಪಡೆದರು.
ಆ ಎರಡು ಎಕರೆ ಜಮೀನಿನಲ್ಲಿ ತಮ್ಮ ಜಾನುವಾರುಗಳಿಗಾಗಿ ಮೇವನ್ನು ಬೆಳೆದರು. ಕೃಷಿಗಾಗಿ ಸಾಕಿರೋ ಜಾನುವಾರುಗಳು ಉಪವಾಸ ಬೀಳಬಾರದು ಅನ್ನೋ ಕಾರಣಕ್ಕೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದ ಮಲ್ಲಪ್ಪ ಕೇವಲ ಒಂದೇ ಒಂದು ಮಳೆಗಾಗಿ ಕಾದು ಕೂತಿದ್ದರು. ಆದರೆ ವರುಣದೇವ ಕೊನೆಯವರೆಗೂ ಕಣ್ಣೇ ಬಿಡಲಿಲ್ಲ. ಇದರಿಂದಾಗಿ ಒಂದು ಅಡಿ ಎತ್ತರಕ್ಕೆ ಬೆಳೆದಿದ್ದ ಮೇವು ಒಣಗಲು ಶುರುವಾಯಿತು. ಇದರಿಂದಾಗಿ ಆತಂಕಗೊಂಡ ರೈತ ಮಲ್ಲಪ್ಪ, ಏನಾದರೂ ಮಾಡಿ ಬೆಳೆಗೆ ನೀರುಣಿಸಲು ನಿರ್ಧರಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಕೆಲವು ಕೊಳವೆಬಾವಿ ಇದ್ದರೂ ಕೆಲವೊಂದರಲ್ಲಿ ನೀರಿರಲಿಲ್ಲ. ಮತ್ತೆ ಕೆಲವು ಕೊಳವೆ ಬಾವಿಯಲ್ಲಿ ನೀರಿದ್ದರೂ ಸರಿಯಾದ ವಿದ್ಯುತ್ ಇಲ್ಲದೇ ನೀರು ಹರಿಸುವಂತೆ ಇರಲಿಲ್ಲ. ಹೀಗಾಗಿ ಮಲ್ಲಪ್ಪ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಒಂದು ಟ್ಯಾಂಕರ್ ನೀರಿಗೆ ಮಲ್ಲಪ್ಪ 500 ರೂಪಾಯಿ ಹಣ ನೀಡಬೇಕು. ಈ ಎರಡು ಎಕರೆ ಭೂಮಿ ನೀರುಣ್ಣಬೇಕೆಂದರೆ ಕನಿಷ್ಟ 50 ಟ್ಯಾಂಕರ್ ನೀರಿನ ಅವಶ್ಯಕತೆ ಇದೆ. ಅಂದರೆ ಸುಮಾರು 25 ಸಾವಿರ ರೂಪಾಯಿ ಬರೀ ನೀರಿಗಾಗಿಯೇ ಹಣ ಖರ್ಚು ಮಾಡಬೇಕಾಗಿದೆ. ತಮ್ಮ ಕೃಷಿ ಕೆಲಸಕ್ಕೆ ಹಾಗೂ ಹೈನುಗಾರಿಕೆಗೆ ಅಂತಾ ಸಾಕಿದ ಜಾನುವಾರುಗಳು ಉಪವಾಸ ಬೀಳಬಾರದು ಅನ್ನೋ ಕಾರಣಕ್ಕೆ ರೈತರು ಇಂಥ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಇದೆಲ್ಲ ಬೇಡ ಅಂತಾ ಜಾನುವಾರುಗಳನ್ನು ಮಾರಾಟ ಮಾಡಲು ಹೋದರೆ ವ್ಯಾಪಾರಿಗಳು ಅತಿ ಕಡಿಮೆ ದರಕ್ಕೆ ಜಾನುವಾರುಗಳನ್ನು ಕೇಳುತ್ತಿದ್ದಾರೆ. ಇದರಿಂದಾಗಿ ಏನಾದರೂ ಮಾಡಿ ಜಾನುವಾರುಗಳನ್ನು ಉಳಿಸಿಕೊಳ್ಳೋದೇ ಉತ್ತಮ ಅನ್ನೋ ನಿರ್ಧಾರಕ್ಕೆ ಬಂದು, ಸಾಲ ಮಾಡಿಯಾದರೂ ಬೆಳೆಗೆ ನೀರುಣಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಅಂತಾ ಘೋಷಿಸಲಾಗಿದೆ. ಆದರೆ ಇದುವರೆಗೂ ಸರಕಾರ ಜಾನುವಾರುಗಳ ಪೋಷಣಗೆ ಎಲ್ಲಿಯೂ ಗೋ ಶಾಲೆಗಳನ್ನು ತೆರೆದಿಲ್ಲ. ಇದರಿಂದಾಗಿ ತಮ್ಮ ಜಾನುವಾರುಗಳನ್ನು ಇಟ್ಟುಕೊಳ್ಳಬೇಕೋ ಅಥವಾ ಮಾರಾಟ ಮಾಡಬೇಕೋ ಅನ್ನೋದು ಗೊತ್ತಾಗದೇ ರೈತರು ಪರದಾಡುತ್ತಿದ್ದಾರೆ. ಕೂಡಲೇ ಜಾನುವಾರುಗಳಿಗಾದರೂ ಸರಕಾರ ಗೋಶಾಲೆಗಳನ್ನು ತೆರೆದು ಇಂಥ ರೈತರ ಸಹಾಯಕ್ಕೆ ಮುಂದಾಗಬೇಕಿದೆ. ಒಟ್ಟಿನಲ್ಲಿ ಎಷ್ಟೇ ಕಷ್ಟವಾದರೂ ತಮ್ಮ ನೆಚ್ಚಿನ ಜಾನುವಾರುಗಳನ್ನು ಉಳಿಸಿಕೊಳ್ಳಲು ಇಂಥ ಪ್ರಯೋಗಗಳಿಗೆ ಮುಂದಾಗುತ್ತಿರೋ ರೈತರನ್ನು ನೋಡಿ ಎಂಥವರೂ ಮರಗುತ್ತಿರೋದು ಸತ್ಯ.
ಇನ್ನು ಈ ಬಗ್ಗೆ ಟಿವಿ 9 ಡಿಜಿಟಲ್ ಜೊತೆ ಮಾತನಾಡಿದ ರೈತ ಮಲ್ಲಪ್ಪ ಕಲ್ಲಣ್ಣವರ್ ಅವರು ನಾವು ಮನುಷ್ಯರು. ಹೇಗಾದರೂ ಬದುಕಿ ಬಿಡುತ್ತೇವೆ. ಆದರೆ ಜಾನುವಾರುಗಳು ಹೇಗೆ ಬದುಕಬೇಕು? ಹೊರಗಡೆ ಎಲ್ಲಿಯೂ ಮೇವು ಸಿಗುತ್ತಿಲ್ಲ. ಅಲ್ಲದೇ ಮಳೆ ಕೂಡ ಆಗದೇ ಎಲ್ಲ ಕಡೆ ಒಣಗಿದ ಪ್ರದೇಶವೇ ಕಾಣುತ್ತಿದೆ. ಹೀಗಾದರೆ ಅವುಗಳ ಹೊಟ್ಟೆ ತುಂಬೋದಾದರೂ ಹೇಗೆ? ಇದೇ ಕಾರಣಕ್ಕೆ ಹಣ ಹೋದರೂ ಪರವಾಗಿಲ್ಲ, ಮೇವು ಬೆಳೆದು ಈ ಬಾರಿಯ ಬೇಸಿಗೆಗೆ ಜಾನುವಾರುಗಳು ಪರದಾಡದಂತೆ ನೋಡಿಕೊಳ್ಳಲು ನಿರ್ಧರಿಸಿದ್ದೇನೆ. ಎಷ್ಟೇ ಖರ್ಚಾದರೂ ಸರಿ, ಮೇವಿನ ಬೆಳೆಯನ್ನು ಉಳಿಸಿಕೊಳ್ಳುತ್ತೇನೆ ಎನ್ನುತ್ತಾರೆ.
ಇನ್ನು ಈ ಬಗ್ಗೆ ಟಿವಿ 9 ಜೊತೆಗೆ ಮಾತನಾಡಿದ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪ್ರವೀಣ ಕಂಬಳಿ, ರೈತರಿಗೆ ಸರಿಯಾದ ವೇಳೆ ಸರಕಾರ ವಿದ್ಯುತ್ ನೀಡುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ಧಾರೆ. ಇನ್ನು ಸರಕಾರ ಬರ ಪರಿಹಾರವನ್ನೂ ನೀಡಿಲ್ಲ. ಹೀಗಾದರೆ ಸಣ್ಣ ರೈತರ ಗತಿ ಏನು? ಕೂಡಲೇ ಸರಕಾರ ಈ ಕಡೆ ಗಮನ ಹರಿಸಿ, ರೈತರಿಗೆ ಬರ ಪರಿಹಾರವನ್ನು ನೀಡಬೇಕು. ಇಲ್ಲದಿದ್ದರೆ ಈ ಬಾರಿ ರಾಜ್ಯದಲ್ಲಿ ಮತ್ತೆ ರೈತ ಆತ್ಮಹತ್ಯೆಯ ಸರಣಿ ಶುರುವಾಗೋದು ಗ್ಯಾರಂಟಿ ಅಂತಾ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ