Pramod Muthalik: ಸಿದ್ದರಾಮಯ್ಯ ಮಾಂಸ ಸೇವನೆ ಚರ್ಚೆಯ ವಿಷಯವೇ ಅಲ್ಲ; ಪ್ರಮೋದ್ ಮುತಾಲಿಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 22, 2022 | 12:28 PM

‘ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.

Pramod Muthalik: ಸಿದ್ದರಾಮಯ್ಯ ಮಾಂಸ ಸೇವನೆ ಚರ್ಚೆಯ ವಿಷಯವೇ ಅಲ್ಲ; ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)
Follow us on

ಹುಬ್ಬಳ್ಳಿ: ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ. ವಿನಾಕಾರಣ ಅವರ ವಿರುದ್ಧ ಆರೋಪ ಮಾಡುವ ಬಿಜೆಪಿಯ ಕೆಲವರ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ‘ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ‘ಮಾಂಸ ಸೇವನೆಯು ಒಂದು ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಎಳೆದು ತರುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯ ವರ್ತನೆಯ ಅಸಹ್ಯ ತರಿಸುವಂತಿದೆ’ ಎಂದು ಹೇಳಿದರು.

ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರೂ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಹಾಗೂ ಮಡಿಕೇರಿ ಚಲೋ ಚಳವಳಿಯನ್ನು ಖಂಡಿಸಿದರು. ಸಾವರ್ಕರ್ ಬಗ್ಗೆ ಸರಿಯಾಗಿ ತಿಳಿದುಕೊಂಡ ನಂತರ ಅವರು ಮಾತನಾಡಬೇಕು. ಮತಾಂಧ ಟಿಪ್ಪು ಸುಲ್ತಾನನ್ನು ಇವರು ಹೀರೊ ಮಾಡಲು ಹೊರಟಿದ್ದಾರೆ. ನಾವು ಮನೆಮನೆಗೆ ತೆರಳಿ ಸಾವರ್ಕರ್​ ಬಗ್ಗೆ ತಿಳವಳಿಕೆ ನೀಡುತ್ತೇವೆ. ಪ್ರತಿ ಗಣೇಶ ಪೆಂಡಾಲ್​ನಲ್ಲೂ ಸಾವರ್ಕರ್​ ಫೋಟೊ ಇಡುತ್ತೇವೆ ಎಂದರು. ‘ನಮ್ಮಲ್ಲಿ ಎಲ್ಲಾ ರೀತಿಯ ಭಕ್ತರಿದ್ದಾರೆ. ಮಾಂಸ ಸೇವನೆ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ವಿವರಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಹಿ ಸಂಗ್ರಹ ಅಭಿಯಾನ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಲು ಸಹಿ ಸಂಗ್ರಹ ಅಭಿಯಾನಕ್ಕೆ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದರು. ಗಣೇಶೋತ್ಸವಕ್ಕೆ ಅನುಮತಿ ನೀಡಲು ಮಹಾನಗರ ಪಾಲಿಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆ ಸಹಿ ಸಂಗ್ರಹ ಅಭಿಯಾನ ನಡೆಸಿದ ನಂತರ, ಪಾಲಿಕೆಗೆ ಮುತ್ತಿಗೆ ಹಾಕಲು ಹಿಂದುತ್ವ ಪರ ಸಂಘಟನೆಗಳು ನಿರ್ಧರಿಸಿವೆ. ಅನುಮತಿ ನೀಡಲು ಕೋರಿ ಹಿಂದುತ್ವಪರ ಸಂಘಟನೆಗಳು ಗಡುವು ನೀಡಿದ್ದವು. ಗಡುವು ಅಂತ್ಯ ಹಿನ್ನೆಲೆ ಸಹಿ ಸಂಗ್ರಹಿಸಿದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.

ಇದನ್ನೂ ಓದಿ: ರಾತ್ರಿ ಮಾಂಸಾಹಾರ ಸೇವಿಸಿದವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಾದರೆ ಬೆಳಗ್ಗೆ ತಿಂದವನು ಸಾಯಂಕಾಲ ಹೋಗಬಾರದೆ? ಸಿದ್ದರಾಮಯ್ಯ