ಧಾರವಾಡ, ಅ.9: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಸದ್ಯ ಈ ಬ್ಯಾಂಕ್ ಎಸ್ಬಿಐಗೆ ವಿಲೀನವಾಗಿದೆ) ವಂಚಿಸಿದ ಪ್ರಕರಣ ಸಂಬಂಧ ಬ್ಯಾಂಕ್ ಅಧಿಕಾರಿ ಸೇರಿದಂತೆ ಇಬ್ಬರು ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1.20 ಲಕ್ಷ ರೂಪಾಯಿ ದಂಡ ವಿಧಿಸಿ ಧಾರವಾಡದ (Dharwad) ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. 2007 ರಲ್ಲಿ ಹೆಸ್ಕಾಂ ಮತ್ತು ಗಣಿ ಇಲಾಖೆಗೆ ಸಂಬಂಧಿಸಿದ ಹಣವನ್ನು ನಕಲಿ ಖಾತೆಗೆ ಜಮಾ ಮಾಡುವ ಮೂಲಕ ವಂಚನೆ ಎಸಗಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಸಿಸ್ಟೆಂಟ್ ಮ್ಯಾನೇಜರ್ ಗುರುರಾಜ ರಾವ್ ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಮಾಲೀಕ ಪ್ರವೀಣ ಕಾಟ್ವಾ ಶಿಕ್ಷೆಗೊಳಗಾದ ಅಪರಾಧಿಗಳು. ಬ್ಯಾಂಕ್‌ಗೆ ವಂಚಿಸಿ ಪ್ರವೀಣಗೆ ಗುರುರಾಜ ಅನುಕೂಲ ಮಾಡಿಕೊಟ್ಟಿದ್ದರು.
ಇದನ್ನೂ ಓದಿ: ಟಿವಿ ದೋಷ ಸರಿಪಡಿಸದ ಝಿಯೋಮಿ ಕಂಪನಿಗೆ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಹೆಸ್ಕಾಂನ ವಿದ್ಯುತ್ ಬಿಲ್ ಮತ್ತು ಗಣಿ ಇಲಾಖೆಯ ರಾಜಧನವನ್ನು ಖಾತೆಗೆ ಜಮಾ ಮಾಡಲು ಡಿಡಿ ಮತ್ತು ಚೆಕ್ ನೀಡಲಾಗಿತ್ತು. ಆದರೆ ಗುರುರಾಜ ಮತ್ತು ಪ್ರವೀಣ ಸೇರಿಕೊಂಡು ಎರಡೂ ಇಲಾಖೆಗೆ ಸೇರಿದ ಒಟ್ಟು 2.70 ಕೋಟಿ ರೂಪಾಯಿಯನ್ನು ನಕಲಿ ಖಾತೆಗೆ ವರ್ಗಾಯಿಸಿದ್ದರು.
ಇತ್ತ, ಖಾತೆಗೆ ಹಣ ಜಮಾ ಆಗದೇ ಇರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಸಂಶಯ ಮೂಡಿದೆ. ಅದರಂತೆ ಹೆಸ್ಕಾಂ ವಿಚಕ್ಷಣ ದಳವು ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ನಡೆಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ