AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ಈ ಪ್ರಕರಣದಲ್ಲಿ ನಾಮಿನಿಯನ್ನು ಬದಿಗಿಟ್ಟು ಮೃತನ ಪತ್ನಿಗೆ ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ. ಕಾರಣ ವಿಮಾ ಕಂಪನಿಯವರ ಈ ವರ್ತನೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ತಮ್ಮದೇ ವಿಮಾ ನಿಯಮಕ್ಕೆ ವ್ಯತಿರಿಕ್ತವಾಗಿ ಕಂಪನಿ ನಡೆದುಕೊಂಡಿದ್ದನ್ನು ಆಯೋಗ ಒಪ್ಪಿಕೊಳ್ಳೋದಿಲ್ಲ ಅಂತಾ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಹೇಳಿದೆ.

ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ ದಂಡ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Oct 05, 2023 | 7:03 PM

Share

ಹುಬ್ಬಳ್ಳಿಯ ಆನಂದ ನಗರ ನಿವಾಸಿ ಅಲ್ಲಾಭಕ್ಷ ಮುಲ್ಲಾ ಅವರ ಮಗ ಆಸೀಫ್ ಮುಲ್ಲಾ ತನ್ನ ಮೇಲೆ ಸರ್ವ ಸುರಕ್ಷಾ ಲಾಭದ ವಿಮಾ ಪಾಲಸಿಯನ್ನು ಎಚ್.ಡಿ.ಎಫ್.ಸಿ. ಏರ್ಗೋ ವಿಮಾ ಕಂಪನಿಯಿಂದ 2017 ರಲ್ಲಿ ಪಡೆದಿದ್ದರು. ಅದು ರೂ.10 ಲಕ್ಷ ಮೌಲ್ಯದ ಪಾಲಸಿಯಾಗಿತ್ತು. ಅದಕ್ಕೆ ಅವರು ರೂ. 7,646/- ಪ್ರಿಮಿಯಮ್ ಕಟ್ಟಿದ್ದರು. ಆ ಪಾಲಸಿಗೆ ತನ್ನ ತಂದೆಯವರನ್ನು ನಾಮಿನಿಯಾಗಿ ಮಾಡಿದ್ದರು. ಡಿ. 19, 2019 ರಂದು ಗದಗ ತಾಲೂಕಿನ ಹುಲಕೋಟಿ ಹತ್ತಿರ ಹೋಗುವಾಗ ಲಾರಿ ಮತ್ತು ಬೈಕ್ ನಡುವೆ ಅಪಘಾತವಾಗಿ ಆಸೀಫ್ ಮೃತರಾಗಿದ್ದರು. ಈ ಬಗ್ಗೆ ಗದಗ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿತ್ತು. ಆ ಎಲ್ಲ ದಾಖಲೆಗಳನ್ನು ಮೃತ ಆಸೀಫ್ ಅವರ ತಂದೆ ಅಲ್ಲಾಭಕ್ಷ ಮುಲ್ಲಾ ಪಡೆದುಕೊಂಡು, ನಾಮಿನಿಯಾದ ತನಗೆ ವಿಮಾ ಕ್ಲೇಮ್ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಆದರೆ ಕಂಪನಿಯವರು ಅಲ್ಲಾಭಕ್ಷ ಅವರ ಕ್ಲೇಮ್ ಅರ್ಜಿಯನ್ನು ಪರಿಗಣಿಸದೇ ಮೃತನ ಪತ್ನಿ ನೂರ‌ ಜಹಾನಬಿ ಅವರಿಗೆ ರೂ. 10 ಲಕ್ಷ ವಿಮಾ ಹಣ ಸಂದಾಯ ಮಾಡಿದ್ದರು. ಮೃತನ ವಿಮಾ ಪಾಲಿಸಿಗೆ ನಾಮಿನಿಯಿರುವುದರಿಂದ ವಿಮಾ ಹಣವನ್ನು ತಮಗೆ ಕೊಡಬೇಕಾಗಿತ್ತು. ಆದರೆ ವಿಮಾ ಕಂಪನಿಯವರು ತಮ್ಮ ಕ್ಲೇಮ್‌ನ್ನು ನಿರಾಕರಿಸಿ ಮೃತನ ಪತ್ನಿಗೆ ರೂ.10 ಲಕ್ಷ ಕೊಟ್ಟಿರುವುದು ತಪ್ಪು ವಿಮಾ ಕಂಪನಿಯವರು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಮಾಡಿದ್ದಾರೆ ಅಂತಾ ಅಲ್ಲಾಭಕ್ಷ ವಿಮಾ ಕಂಪನಿಯವರ ಮೇಲೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೂರುದಾರ ಮೃತ ಆಸೀಫ್ ಮುಲ್ಲಾ ಅವರ ತಂದೆಯ ವಿಮಾ ಪಾಲಸಿಗೆ ನಾಮಿನಿ ಆಗಿದ್ದಾರೆ. 2015 ರಲ್ಲಿ ಆಗಿರುವ ವಿಮಾ ಕಾಯ್ದೆಯ ತಿದ್ದುಪಡಿಯಂತೆ ವಿಮಾದಾರ ಮೃತನಾದಲ್ಲಿ ವಿಮಾ ಪಾಲಸಿಯ ಹಣ ಪಡೆಯಲು ನಾಮಿನಿ ಮಾತ್ರ ಅರ್ಹರಿದ್ದಾರೆ.

ಆದರೆ ಈ ಪ್ರಕರಣದಲ್ಲಿ ನಾಮಿನಿಯನ್ನು ಬದಿಗಿಟ್ಟು ಮೃತನ ಪತ್ನಿಗೆ ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ. ಕಾರಣ ವಿಮಾ ಕಂಪನಿಯವರ ಈ ವರ್ತನೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ತಮ್ಮದೇ ವಿಮಾ ನಿಯಮಕ್ಕೆ ವ್ಯತಿರಿಕ್ತವಾಗಿ ಕಂಪನಿ ನಡೆದುಕೊಂಡಿದ್ದನ್ನು ಆಯೋಗ ಒಪ್ಪಿಕೊಳ್ಳೋದಿಲ್ಲ ಅಂತಾ ಹೇಳಿದೆ.

Also Read: ಡೆಪಾಸಿಟ್​ ಹಿಂದಿರುಗಿಸದ ಸರಸ್ವತಿ ಕೋ ಆಪ್​​ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್​​

ವಿಮಾ ನಿಯಮದಂತೆ ನಾಮಿನಿ ಅಲ್ಲಾಭಕ್ಷ ಅವರಿಗೆ ಕಂಪನಿಯು ಪಾಲಸಿ ಮೊತ್ತ ರೂ. 10 ಲಕ್ಷ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ. 50 ಸಾವಿರ ಪರಿಹಾರ ಮತ್ತು ರೂ. 5 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ. ಒಂದು ತಿಂಗಳ ಒಳಗಾಗಿ ಈ ಮೊತ್ತ ಕೊಡಲು ವಿಫಲವಾದಲ್ಲಿ ತೀರ್ಪು ನೀಡಿದ ದಿನದಿಂದ ರೂ.10 ಲಕ್ಷ ಮೇಲೆ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ಕಂಪನಿಗೆ ಆದೇಶಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ