ಧಾರವಾಡ ಕರ್ನಾಟಕ ವಿವಿ ಯಿಂದ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ

| Updated By: ಸಾಧು ಶ್ರೀನಾಥ್​

Updated on: Dec 07, 2023 | 2:05 PM

ಯಾವ ವಿಶ್ವವಿದ್ಯಾಲಯದಿಂದ ಎನ್ಇಪಿ ಆರಂಭಗೊಂಡಿತ್ತೋ ಅಲ್ಲಿಂದಲೇ ಆ ಎನ್ ಇ ಪಿ ತೆಗೆದು ಹಾಕುವ ಅಭಿಯಾನವನ್ನು ರಾಜ್ಯ ಸರಕಾರ ಶುರು ಮಾಡಿದಂತಿದೆ. ಇದಕ್ಕಾಗಿ ರಾಜ್ಯ ಸರಕಾರ ಪಣತೊಟ್ಟಂತೆ ಇದೆ.

ಧಾರವಾಡ ಕರ್ನಾಟಕ ವಿವಿ ಯಿಂದ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ
ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ
Follow us on

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ( karnataka government) ಅಧಿಕಾರಕ್ಕೆ ಬಂದ ಕೂಡಲೇ ಅನೇಕ ಬದಲಾವಣೆಗಳು ನಡೆಯುತ್ತಿವೆ. ಹಿಂದಿನ ಸರಕಾರದ ಅನೇಕ ಕಾಯಿದೆಗಳನ್ನು ಬದಲಾಯಿಸಲು ಹೊಸ ಸರಕಾರ ಹೊರಟಿದೆ. ಅದರಲ್ಲಿ ಪ್ರಮುಖವಾಗಿರುವುದು ರಾಷ್ಟ್ರೀಯ ಶಿಕ್ಷಣ ನೀತಿ. ಇದೀಗ ಈ ಎನ್ಇಪಿಯನ್ನು ತೆಗೆದುಹಾಕಿ ಅದನ್ನು ಕರ್ನಾಟಕ ಶಿಕ್ಷಣ ನೀತಿಯನ್ನು (Karnataka education policy) ಜಾರಿಗೆ ತರಲು ರಾಜ್ಯ ಸರಕಾರ ಹೊರಟಿದೆ. ಯಾವ ವಿವಿಯಿಂದ ಕೇಂದ್ರ ಸರಕಾರ ತನ್ನ ಎನ್ಇಪಿ ಆರಂಭಿಸಿತ್ತೋ ಅಲ್ಲಿಂದಲೇ ತನ್ನ ಕೆಇಪಿಯನ್ನೂ ಆರಂಭಿಸಲು ಸದ್ದಿಲ್ಲದೇ ರಾಜ್ಯ ಕಾಂಗ್ರೆಸ್ ಸರಕಾರ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಎನ್ಇಪಿಯನ್ನು ತಾವೇ ಮೊದಲು ಅಳವಡಿಸಿಕೊಳ್ಳುತ್ತೇವೆ ಅಂತಾ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ದೇಶದಲ್ಲಿಯೇ ಮೊದಲ ಬಾರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ( Karnataka University, Dharwad) ಜಾರಿಗೊಳಿಸಿತ್ತು. ಎನ್ ಇ ಪಿ ಆಧಾರಿತ ಪಠ್ಯಕ್ರಮ, ಬೋಧನೆ, ಪರೀಕ್ಷಾ ವ್ಯವಸ್ಥೆ ಎಲ್ಲವೂ ಇಲ್ಲಿಂದಲೇ ಶುರುವಾಗಿತ್ತು.

ಇಲ್ಲಿ ಅದೆಲ್ಲವೂ ಯಶಸ್ವಿಯಾದ ಬಳಿಕ ದೇಶಾದ್ಯಂತ ಎಲ್ಲ ವಿಶ್ವವಿದ್ಯಾಲಯ ಹಾಗೂ ಪ್ರಾಥಮಿತ ಮತ್ತು ಪಠ್ಯಕ್ರಮದಲ್ಲಿ ಜಾರಿಗೆ ತರಲಾಗಿತ್ತು. ಆಗ ರಾಜ್ಯದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಇದನ್ನು ಕೇಸರಿಕರಣ ಎಂದು ವಿರೋಧಿಸಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಹೀಗಾಗಿ ಎನ್ ಇ ಪಿ ತೆಗೆದು ಕೆಇಪಿ ಅಳವಡಿಸುವುದಕ್ಕಾಗಿಯೇ ಒಂದು ಸಮಿತಿಯನ್ನೂ ಸಿಎಂ ರಚಿಸಿದ್ದಾರೆ. ಆ ಸಮಿತಿ ಇತ್ತೀಚೆಗೆ ಧಾರವಾಡದ ಕರ್ನಾಟಕ ವಿವಿಗೆ ಬಂದು ಮೊದಲ ಹಂತದ ಸಭೆಯನ್ನೂ ಕೂಡ ನಡೆಸಿದೆ.

ಯಾವ ವಿಶ್ವವಿದ್ಯಾಲಯದಿಂದ ಎನ್ಇಪಿ ಆರಂಭಗೊಂಡಿತ್ತೋ ಅಲ್ಲಿಂದಲೇ ಆ ಎನ್ ಇ ಪಿ ತೆಗೆದು ಹಾಕುವ ಅಭಿಯಾನವನ್ನು ರಾಜ್ಯ ಸರಕಾರ ಶುರು ಮಾಡಿದಂತಿದೆ. ಇದಕ್ಕಾಗಿ ರಾಜ್ಯ ಸರಕಾರ ಪಣತೊಟ್ಟಂತೆ ಇದೆ. ಏಕೆಂದರೆ ಕೆಇಪಿ ಸಮಿತಿ ರಚನೆಯಾದ ಬಳಿಕ ಬೆಂಗಳೂರು ಮಟ್ಟದಲ್ಲಿ ಒಂದು ಸಭೆಯನ್ನು ಮಾಡಿದ್ದನ್ನು ಬಿಟ್ಟರೆ ಬೇರೆ ಎಲ್ಲಿಯೂ ಭೇಟಿ ನೀಡಿ, ಅಧ್ಯಯನ ವರದಿ ಸಿದ್ಧಪಡಿಸಲಿರಲಿಲ್ಲ.

Also Read: ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಸುಖದೇವ್ ತೋರಟ್‌ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ರಚನೆ: ಸರ್ಕಾರ ಆದೇಶ

ಆದರೆ ಕರ್ನಾಟಕ ವಿವಿಗೆ ಮೊದಲ ಭೇಟಿ ನೀಡಿರೋ ಈ ಸಮಿತಿ, ಇಲ್ಲಿರೋ ಎನ್ ಇ ಪಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ವರದಿ ಮಾಡಿಕೊಂಡು ಹೋಗಿದ್ದಾರೆ. ಈ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದಿಂದಲೇ ಕೆಇಪಿಯನ್ನು ಜಾರಿ ಮಾಡುವುದು ಇದರ ಹಿಂದಿನ ಹಿಡನ್ ಅಜೆಂಡಾ ಅಂತಾ ಹೇಳಲಾಗುತ್ತಿದೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಒಂದು ದೇಶಕ್ಕೆ ಒಂದು ಶಿಕ್ಷಣ ಪದ್ಧತಿ ಇರಲಿ ಅನ್ನೋದು ಬಿಜೆಪಿ ವಾದ. ಅಲ್ಲದೇ ಈ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಮುಂಬರೋ ಜನಾಂಗಕ್ಕೆ ಒಳ್ಳೆಯ ಭವಿಷ್ಯವಿದೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಡಬಾರದು ಅನ್ನೋದು ಬಿಜೆಪಿ ಆಗ್ರಹವಾಗಿದೆ.

ಸದ್ಯ ಬಿಜೆಪಿ ಸರ್ಕಾರ ಮಾಡಿದ್ದ ಒಂದಿಲ್ಲೊಂದು ಯೋಜನೆಯನ್ನು ತೆಗೆದು ಹಾಕಿ, ಅಲ್ಲಿ ತನ್ನದೇ ಛಾಪು ಒತ್ತಲು ಕಾಂಗ್ರೆಸ್ ಮುಂದಾಗಿದೆ. ಆದರೆ ಅದನ್ನು ಕರ್ನಾಟಕ ವಿವಿಯಿಂದಲೇ ಶುರು ಮಾಡೋಕೆ ಮುಂದಾಗುತ್ತಿರೋದು ಕುತೂಹಲ ಮೂಡಿಸಿದೆ. ಇದು ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.