ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಸೇವಾ ಪಾಕ್ಷಿಕದ ಹೆಸರಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಹಮ್ಮಿಕೊಳ್ಳಲಾಗಿದ್ದು, ಗಿನ್ನಿಸ್ ದಾಖಲೆ ಬರೆಯುವ ಗುರಿ ಹೊಂದಲಾಗಿದೆ. ಧಾರವಾಡ ಜಿಲ್ಲೆಯ ಹಲವೆಡೆ ಬಿಜೆಪಿ ಕಾರ್ಯಕರ್ತರು, ಮೋದಿ ಅವರ ಅಭಿಮಾನಿಗಳು ಸ್ವ ಇಚ್ವೆಯಿಂದ ರಕ್ಷದಾನ ಮಾಡುತ್ತಿದ್ದಾರೆ. ಧಾರವಾಡದ ಸೋಮವಾರಪೇಟೆ ಬಳಿಯ ರಕ್ತದಾನ ಶಿಬಿರ ಕೇಂದ್ರಕ್ಕೆ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೇಟಿ ನೀಡಿದರು. ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶ್ರೇಷ್ಠ ನಾಯಕನಿಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿರುವ ಬಗ್ಗೆ ಪ್ರಲ್ಹಾದ್ ಜೋಶಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಿಗೆ ಸ್ಪೂರ್ತಿ ನೀಡಿದರು. ಇನ್ನೊಂದಡೆ ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ನಡೆದ ಗಣಿತ ಮೇಳಕ್ಕೆ ಚಾಲನೆ ನೀಡಲಾಯಿತು. ಮಕ್ಕಳಿಗೆ ವಿಶೇಷವಾಗಿ ಗಣಿತವನ್ನು ಆಟದ ಮೂಲಕ ಕಲಿಸುವ ವಿನೂತನ ಕಾರ್ಯಕ್ರಮಕ್ಕೆ ಸಚಿವ ಪ್ರಲ್ಹಾದ್ ಜೋಶಿ ಪ್ರಶಂಸೆ ವ್ಯಕ್ತಪಡಿಸಿದರು. ಇದು ದೇಶದಲ್ಲೇ ಒಂದು ಅಪರೂಪದ ಕಾರ್ಯಕ್ರಮವಾಗಿದ್ದು, ನಿಜಕ್ಕೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ಹಾಗೂ ಎಂಎಲ್ಸಿ ಬಸವರಾಜ್ ಹೊರಟ್ಟಿ, ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಶ್ರೀ ಅಮೃತ ದೇಸಾಯಿ, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ದೇಶ ಕಂಡ ಅಪ್ರತಿಮ ರಾಜಕಾರಣಿ ಮೋದಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದಾರೆ. ದೇಶದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಮೋದಿಯವರು ಸ್ವಚ್ಛ, ಸುಸ್ಥಿರ ಸಮರ್ಥ ಆಡಳಿತ ಕೊಟ್ಟವರು. ಏಕಕಾಲಕ್ಕೆ ಕಠೋರ ನಿರ್ಣಯಗಳನ್ನು ತೆಗೆದುಕೊಂಡವರು. ರಾಜಕೀಯವಾಗಿ ನಮ್ಮ ಹಿತಕ್ಕೆ ಇಲ್ಲದಾಗಲೂ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಭ್ರಷ್ಟಾಚಾರರಹಿತ ಆಡಳಿತ ಕೊಟ್ಟವರು ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ @narendramodi ಯವರ ಜನುಮದಿನದ ಪ್ರಯುಕ್ತ ನಡೆದ ಧಾರವಾಡದ ಸೋಮವಾರಪೇಟೆ ಬಳಿ ನಡೆದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಲಾಯಿತು.
ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದು ಶ್ರೇಷ್ಠ ನಾಯಕನಿಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿದ್ದಾರೆ.#RaktdaanAmritMahotsav #HappyBdayModiji pic.twitter.com/plbakFZ9Wt
— Pralhad Joshi (@JoshiPralhad) September 17, 2022
ಧಾರವಾಡದಲ್ಲಿ ಹೇಳಿಕೆ ನೀಡಿದ ಅವರು, ಮೋದಿ ಜನ್ಮದಿನದಂದು ಅನೇಕರು ವಿವಿಧ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನನಾಯಕನನ್ನ ಜನರು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುವುದಕ್ಕೆ ಇದು ಉದಾಹರಣೆಯಾಗಿದೆ. ಕರ್ನಾಟಕದ ಪರವಾಗಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ. ನೂರು ವರ್ಷಕ್ಕೂ ಹೆಚ್ಚು ಕಾಲ ಮೋದಿಯವರು ಬಾಳಲಿ. ಆ ಮೂಲಕ ದೇಶಕ್ಕೆ ನೇತೃತ್ವ ಕೊಡಲಿ ಎಂದು ಹಾರೈಸುತ್ತೇನೆ ಎಂದರು.
ಹಲವು ವರ್ಷಗಳ ಕಾಲ ಕರ್ತವ್ಯದ ಹಾದಿಯಲ್ಲಿ ನಡೆಯಲಿ
ಮೋದಿ ಜನ್ಮದಿನಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (H.D.Devegowda) ಅವರು ಕೂಡ ಶುಭಕೋರಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ನಾನು ನನ್ನ ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತೇನೆ. ನಮ್ಮ ಶ್ರೇಷ್ಠ ಮತ್ತು ವೈವಿಧ್ಯಮಯ ರಾಷ್ಟ್ರದ ಸೇವೆಯಲ್ಲಿ ಇನ್ನೂ ಹಲವು ವರ್ಷಗಳ ಕಾಲ ಕರ್ತವ್ಯದ ಹಾದಿಯಲ್ಲಿ ನಡೆಯಲು ದೇವರು ಅವರಿಗೆ ಶಕ್ತಿಯನ್ನು ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:31 pm, Sat, 17 September 22