ಮೇಕೆ ದಾಟು ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಜ.9ರಂದು ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುತ್ತಿದೆ. ಜನವರಿ 9ರಿಂದ 19ರವರೆಗೂ ಒಟ್ಟು 11 ದಿನಗಳ ಕಾಲ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದಿಂದ ಆರಂಭವಾಗಿ ಕನಕಪುರ ಮಾರ್ಗವಾಗಿ ರಾಮನಗರಕ್ಕೆ ಬಂದು ಮೈಸೂರು ರಸ್ತೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆ ನಡೆಯಲಿದ್ದು ಒಟ್ಟು 165 ಕಿಲೋ ಮೀಟರ್ ಆಗಲಿದೆ. ಮೊದಲ ದಿನ 15 ಕೀಲೊ ಮೀಟರ್ ಪಾದಯಾತ್ರೆ ನಡೆಯಲಿದೆ. ಕೊನೆಯ ದಿನ ಡಿಸಿಸಿ ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿವರೆಗೂ ಪಾದಯಾತ್ರೆ ನಡೆಸಿ ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೊದಲ ದಿನ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನವೇ ಸುಮಾರು 25 ಸಾವಿರ ಜನರನ್ನ ಸೇರಿಸಿ ಪಾದಯಾತ್ರೆಗೆ ಪ್ಲಾನ್ ಮಾಡಲಾಗಿದ್ದು, ಪ್ರತಿ ದಿನ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಬಂದ ಎಲ್ಲ ನಾಯಕರಿಗೂ ಉಳಿದುಕೊಳ್ಳಲು ಹಾಸ್ಟಲ್, ಸ್ಕೂಲ್ ಸೇರಿದಂತೆ ವಿವಿದೆಡೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಾದಯಾತ್ರೆ ಮಧ್ಯೆ ಪ್ರತಿದಿನ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದ್ದು ಇದಕ್ಕಾಗಿಯೇ ಸುಮಾರು ಒಂದುವರೆ ಎಕರೆ ಪ್ರದೇಶದಲ್ಲಿ ಸಿದ್ಧತೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಬೇರೆ ಬೇರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ರಾತ್ರಿ ಸಭೆಯಲ್ಲಿ ಮೇಕೆದಾಟು ವಿಚಾರವಾಗಿ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ವಿರುದ್ಧ ಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ
ಇನ್ನು ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್ನಿಂದ ರಾಜಕೀಯ ಮಾಡುತ್ತಿದೆ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗಿಮಿಕ್ ಮಾಡುತ್ತಿದ್ದಾರೆ ಅವರದ್ದೇ ಸರ್ಕಾರ ಇದ್ದಾಗ ಯೋಜನೆ ನೆನಪಿಗೆ ಬಂದಿಲ್ವಾ? ಚುನಾವಣೆ ಗಿಮಿಕ್ಗಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ಹಕ್ಕು ಪಡೆಯಲು ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಧಿಕಾರ ಇಲ್ಲದಿದ್ರೂ ಜನರ ಪರವಾಗಿ ಕೆಲಸ ಮಾಡಬೇಕು ಎಂದು ಕಂಗ್ರೆಸ್ ನಾಯಕರ ವಿರುದ್ಧ ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.
ಇನ್ನೂ ಧ್ವನಿಯೆತ್ತದ ಬಿಜೆಪಿ
ಜ.9ರಿಂದ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಲು ಭರದಿಂದ ತಯಾರಿ ನಡೆಸುತ್ತಿದೆ. ಆದರೆ ಪಾದಯಾತ್ರೆ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ಫುಲ್ ಸೈಲೆಂಟ್ ಆಗಿದೆ. ಪಾದಯಾತ್ರೆ ಬಗ್ಗೆ ಇನ್ನೂ ಆಡಳಿತ ಪಾಳಯದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ. ಪಾದಯಾತ್ರೆ ವಿಚಾರವನ್ನು ಬೆಂಗಳೂರು ಗ್ರಾ. ಭಾಗದ ಮುಖಂಡರು ನಾಯಕರ ಗಮನಕ್ಕೆ ತಂದರೂ ಪಕ್ಷದಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಸಂಘಟನಾತ್ಮಕ ಚಟುವಟಿಕೆಗಳೇ ನಡೆಯುತ್ತಿದೆಯೇ ಹೊರತು, ರಾಜಕೀಯ ಚಟುವಟಿಕೆಗಳು ನಡೆಯುತ್ತಿಲ್ಲ. ಕಾಂಗ್ರೆಸ್ನಿಂದ ಪಾದಯಾತ್ರೆಗೆ ಭರದ ತಯಾರಿ ಆಗುತ್ತಿದ್ದರೂ ಬಿಜೆಪಿಯಲ್ಲಿ ಮಾತ್ರ ಯಾವುದೇ ಚರ್ಚೆ ಇಲ್ಲವೆಂದು ಬಿಜೆಪಿಯ ಪದಾಧಿಕಾರಿಗಳು ಬೇಸರಗೊಂಡಿದ್ದಾರೆ.
Published On - 5:39 pm, Sat, 1 January 22