ಬೆಂಗಳೂರು: ವೈದ್ಯರಾಗಿದ್ದರೂ ತನ್ನ ತಂದೆ-ತಾಯಿಗೆ ಚಿಕಿತ್ಸೆಕೊಡಿಸಲಾಗದೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಕರುಳು ಹಿಂಡುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಜೀವ ಉಳಿಸೋ ಪುಣ್ಯ ಕಾರ್ಯ ಮಾಡುವ ಡಾ.ಅಶ್ವಿನಿ ಸ್ವತಃ ತಮ್ಮ ಪೋಷಕರ ಜೀವವನ್ನೇ ಉಳಿಸಿಕೊಳ್ಳಲಾಗಲಿಲ್ಲ. ತಂದೆ ತಾಯಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ.
ಡಾ.ಅಶ್ವಿನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಡಾ.ಅಶ್ವಿನಿ ಖಾಸಗಿ ಆಸ್ಪತ್ರೆಗೆ ತಮ್ಮ ಪೋಷಕರನ್ನು ದಾಖಲಿಸಲು ಪರದಾಡಿದ್ದಾರೆ. ಬೆಡ್ ಸಿಗದೆ, ರೆಮ್ಡಿಸಿವಿರ್ ಸಿಗದೆ ಡಾಕ್ಟರ್ ಅಶ್ವಿನಿ ತಂದೆ ತಾಯಿ ಕೊರೊನಾಗೆ ಬಲಿಯಾಗಿದ್ದಾರೆ. ಮೂರು ದಿನದ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ವೈದ್ಯೆ, ನಿನ್ನೆ ತಾಯಿಯನ್ನೂ ಕಳೆದುಕೊಂಡಿದ್ದಾರೆ. ಏಪ್ರಿಲ್ 13 ರಂದು ಡಾ.ಅಶ್ವಿನಿ ತಂದೆಯವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿತ್ತು. ಈ ವೇಳೆ 70 ವರ್ಷ ವಯಸ್ಸಿನ ತನ್ನ ತಂದೆಗೆ ಚಿಕಿತ್ಸೆ ಕೊಡಿಸಲು ಅಶ್ವಿನಿ ಪರದಾಡಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಹುಡುಕಿ ಹುಡಕಿ ನರಳಾಡಿದ್ದರು.
ಕೊನೆಗೆ ತಮ್ಮ ಪರಿಚಯದವರಿಗೆ ಹೇಳಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಪಡೆದು ನಂತರ ತನ್ನ ತಂದೆಗೆ ರೆಮ್ಡಿಸಿವಿರ್ ಇಂಜೆಕ್ಷನ್ ಕೊಡಿಸಲು ಹರಸಾಹಸ ಪಟ್ಟಿದ್ದರು. ಕೊನೆಗೂ ಚಿಕಿತ್ಸೆ ಫಲಿಸದ ಅಶ್ವಿನಿ ತಂದೆ ಮೃತಪಟ್ಟಿದ್ದರು. ನಿನ್ನೆ ತಾಯಿ ಕೂಡಾ ಕೊರೊನಾಗೆ ಬಲಿಯಾಗಿದ್ದಾರೆ. ರೆಮ್ಡಿಸಿವಿರ್ ಇಂಜೆಕ್ಷನ್ ಸಿಕ್ಕಿದ್ರೆ ತಂದೆಯನ್ನ ಉಳಿಸಿಕೊಳ್ಳಬಹುದಿತ್ತು. ಆದರೆ ಸಿಗಲಿಲ್ಲ, ತಂದೆನೂ ಉಳಿಲಿಲ್ಲ ಎಂದು ಡಾ.ಅಶ್ವಿನಿ ಕಣ್ಣೀರು ಹಾಕಿದ್ದಾರೆ.
ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಭೀಕರವಾಗಿದೆ. ದೇಹ ಸೇರಿದವರ ಜೀವ ಹಿಂಡುತ್ತಿದೆ. ಜನ ಆದಷ್ಟು ಕಾಳಜಿವಹಿಸಬೇಕು. ಈ ಬಾರಿಯ ಕೊರೊನಾ ಸೋಂಕಿನ ಲಕ್ಷಣಗಳು ಜನರನ್ನು ನಿರ್ಲಕ್ಷಿಸುವಂತೆ ಮಾಡುತ್ತವೆ. ಸಾಮಾನ್ಯ ಶೀತ, ಜ್ವರ ಎಂದು ಸುಮ್ಮನಿದ್ದರೇ ಭಾರಿ ದಂಡ ವಿಧಿಸಬೇಕಾಗುತ್ತೆ. ಹಾಗಾಗಿ ಯಾವುದನ್ನೂ ನಿರ್ಲಕ್ಷಿಸಬೇಡಿ ಕೊರೊನಾದ ಮಾರ್ಗಸೂಚಿಗಳನ್ನು ಪಾಲಿಸಿ.