ಧಾರವಾಡ: ಹಕ್ಕಿಜ್ವರದ ಕುರಿತು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರಕರಣಗಳೂ ವರದಿಯಾಗಿಲ್ಲ. ಆದರೂ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳ ಅನ್ವಯ ಅಗತ್ಯ ಪಶುವೈದ್ಯಕೀಯ ತಂಡಗಳನ್ನು ರಚಿಸಿ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಭಯ ಪಡದೇ ಮುಂಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ರೋಗದ ನಿಯಂತ್ರಣ ಕುರಿತು ಜಿಲ್ಲಾ ಪ್ರಾಣಿಜನ್ಯ ರೋಗಗಳ ನಿರ್ವಹಣಾ ಸಮಿತಿ ಸಭೆ ನಡೆಸಿ ಅವರು ಮಾತನಾಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಹಕ್ಕಿಜ್ವರದ ಆತಂಕ ಹೆಚ್ಚುತ್ತಲೇ ಇದೆ. ಎಲ್ಲ ರಾಜ್ಯಗಳಲ್ಲಿಯೂ ಹಕ್ಕಿ ಜ್ವರದ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹಕ್ಕಿಜ್ವರ ಇದುವರೆಗೂ ಕಾಣಿಸಿಕೊಂಡಿಲ್ಲ ಎನ್ನುವುದು ಸಮಾಧಾನದ ಸಂಗತಿ. ಇದರೊಂದಿಗೆ ಹಕ್ಕಿಜ್ವರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಪಕ್ಷಿಗಳು ಸತ್ತಿದ್ದು ಕಂಡರೆ ಮಾಹಿತಿ ನೀಡಿ
ಕಾಡು, ಹೊಲ, ಗದ್ದೆ, ಹಳ್ಳ, ಕೆರೆ, ಕೊಳ್ಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಂದು ವೇಳೆ ಯಾವುದೇ ತರಹದ ಪಕ್ಷಿಗಳು ಅಥವಾ ಜವಾರಿ ಕೋಳಿ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಕಂಡು ಬಂದರೆ ತಕ್ಷಣ ಹತ್ತಿರದ ಪಶು ಆಸ್ಪತ್ರೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು ಮತ್ತು ಸುರಕ್ಷತಾ ಸಾಧನಗಳಿಲ್ಲದೇ ಅವುಗಳ ಸಮೀಪಕ್ಕೆ ಹೋಗಬಾರದೆಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇನ್ನು, ಹಕ್ಕಿ ಜ್ವರದ ಗುಣಲಕ್ಷಣಗಳು ಮತ್ತು ಅವುಗಳ ಪರೀಕ್ಷೆ, ಚಿಕಿತ್ಸೆ ಮತ್ತು ಹಕ್ಕಿ ಜ್ವರ ರೋಗದ ನಿಯಂತ್ರಣಕ್ಕಾಗಿ ಪಶು ಸಂಗೋಪನಾ ಇಲಾಖೆ ಕೂಡ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ನಿತೇಶ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕಿಗೆ ಅನ್ವಯವಾಗುವಂತೆ ಪಶುವೈದ್ಯಾಧಿಕಾರಿ, ವೈದ್ಯಕೀಯ ಸಹಾಯಕ ಮತ್ತು ಸಹಾಯಕರು ಸೇರಿ ಒಟ್ಟು 5 ಜನ ಸದಸ್ಯರಿರುವ 50 ತಂಡಗಳನ್ನು ರಚಿಸಿ, ಅಗತ್ಯ ತರಬೇತಿಯನ್ನು ನೀಡಿ ಹಕ್ಕಿಜ್ವರ ನಿಯಂತ್ರಣಕ್ಕೆ ಸಿದ್ಧಗೊಳಿಸಲಾಗಿದೆ.
ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ತಿನ್ನಿ
ಕೋಳಿ, ಮಾಂಸ, ಮೊಟ್ಟೆ ಮುಂತಾದವುಗಳನ್ನು ಬಳಸುವವರು ಬೇಯಿಸಿ ತಿನ್ನಬೇಕು. ಕೋಳಿ ಮತ್ತು ಮಾಂಸ ಮಾರಾಟಗಾರರು, ಕಸಾಯಿಖಾನೆಯಲ್ಲಿ ಕೆಲಸ ಮಾಡುವವರು, ಕೋಳಿ ಫಾರಂದಲ್ಲಿ ಕೆಲಸ ಮಾಡುವವರು ಎನ್-95 ಮಾಸ್ಕ್, ಹ್ಯಾಂಡ್‍ಗ್ಲೌಸ್, ಗಮ್‍ಬೂಟ್‍ಗಳನ್ನು ಧರಿಸಿ ಕೆಲಸ ಮಾಡಬೇಕು. ಸಾರ್ವಜನಿಕರು ಅನಗತ್ಯವಾಗಿ ಆತಂಕಪಡದೇ ಮುಂಜಾಗೃತೆ ವಹಿಸಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆಗಳ ನಿಗೂಢ ಸಾವು.. ಹಕ್ಕಿಜ್ವರ ಸಾಧ್ಯತೆ?
Published On - 5:38 pm, Thu, 14 January 21