
ಬೆಂಗಳೂರು, ಡಿಸೆಂಬರ್ 20: ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು (Decent Clothes) ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು, ಸರ್ಕಾರಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗುವಾಗ ಹೇಗಿರಬೇಕು, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಕೆಲಸಗಳನ್ನು ಪಟ್ಟಿ ಮಾಡಿದೆ.
ಕೆಲವು ನೌಕರರು ಅಸಭ್ಯವಾಗಿ ಉಡುಗೆ ತೊಟ್ಟುಕೊಂಡು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸಾರ್ವಜನಿಕರು ಮತ್ತು ಕೆಲವು ಸಂಸ್ಥೆಗಳಿಂದ ಇಲಾಖೆಗೆ ದೂರುಗಳು ಬಂದಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನೌಕರರಿಗೆ ಯೋಗ್ಯವಾದ ಬಟ್ಟೆಗಳನ್ನು ಧರಿಸಲು ಹೇಳಲಾಗಿದ್ದರೂ, ಅನೇಕರು ಸೂಚನೆಗಳನ್ನು ಪಾಲಿಸುತ್ತಿಲ್ಲ. ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕಾರ್ಪೊರೇಟ್ ಕಚೇರಿಗಳಂತೆ ಸರ್ಕಾರಿ ನೌಕರರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದಾಗ್ಯೂ, ಕೆಲವರು ಕಾಲೇಜು ಹೋಗುವವರು ಧರಿಸುವಂತಹ ಉಡುಗೆ ತೊಡುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಹರಿದ ಜೀನ್ಸ್, ಸ್ಲೀವ್ಲೆಸ್ ಡ್ರೆಸ್ ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸ್ವಾಗತಿಸಿದ್ದಾರೆ. ಸರ್ಕಾರಿ ನೌಕರರು ಧರಿಸುವ ಉಡುಗೆ ತೊಡುಗೆ ಇತರರಿಗೆ ಮುಜುಗರ ಉಂಟುಮಾಡಬಾರದು. ಸರ್ಕಾರಿ ಕಚೇರಿಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ ವಿಧೇಯಕ ರಿಜೆಕ್ಟ್ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ?
ಸರ್ಕಾರಿ ನೌಕರರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಸರ್ಕಾರ ಲೆಡ್ಜರ್ಗಳು ಮತ್ತು ಮೂವ್ಮೆಂಟ್ ರಿಜಿಸ್ಟರ್ ಅನ್ನು ಅಳವಡಿಸಿದೆ. ಸರ್ಕಾರಿ ನೌಕರರು ಕಚೇರಿಗೆ ಪ್ರವೇಶಿಸುವಾಗ ಮತ್ತು ಹೊರಡುವಾಗ ಈ ಲೆಡ್ಜರ್‌ಗಳಲ್ಲಿ ನಮೂದು ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಅನೇಕರು ಈ ನಿಯಮವನ್ನು ಪಾಲಿಸುತ್ತಿಲ್ಲ. ಉದ್ಯೋಗಿಯೊಬ್ಬರು ಬೆಳಿಗ್ಗೆ 10:10 ರೊಳಗೆ ಕಚೇರಿಯಲ್ಲಿರಬೇಕು ಮತ್ತು ಕೆಲಸದ ಸಮಯ ಮುಗಿಯುವವರೆಗೆ ತಮ್ಮ ಸ್ಥಾನದಲ್ಲಿರಬೇಕು. ಅವರು ಅಧಿಕೃತ ಕರ್ತವ್ಯದ ಮೇಲೆ ಹೊರಗೆ ಹೋಗುತ್ತಿದ್ದರೆ, ಅದನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.