ಬೆಂಗಳೂರು, ಜ.6: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ ಹಿನ್ನೆಲೆ ರಾಜ್ಯ ಸರ್ಕಾರ ನಿನ್ನೆ ಒಟ್ಟು 105 ಕೋಟಿ ರೂ. ಬರ ಪರಿಹಾರ (Drought Relief) ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಸಿಗಲಿದೆ. ಕಡಿಮೆ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆ ವಿಪಕ್ಷ ಬಿಜೆಪಿ ಟೀಕಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ಬಿಜೆಪಿ (BJP) ರೈತ ಮೋರ್ಚಾ ಪ್ಲಾನ್ ಮಾಡುತ್ತಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, NDRF ನಿಯಮಾನುಸಾರ ಸರ್ಕಾರ ರೈತರಿಗೆ ಯಾಕೆ ಪರಿಹಾರ ನೀಡುತ್ತಿಲ್ಲ. ನಿನ್ನೆ ಬಿಡುಗಡೆ ಮಾಡಿರುವ ಹಣ ಕುಡಿಯುವ ನೀರಿಗೂ ಸಾಲುವುದಿಲ್ಲ. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತ ಮೋರ್ಚಾದಿಂದ ಹೋರಾಟ ಮಾಡುತ್ತೇವೆ. ಈ ಸಂಬಂಧ ನಾಳೆ ರೈತ ಮೋರ್ಚಾ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪ್ರಮುಖರ ಸಭೆ ನಡೆಸಲಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಬಿಡುಗಡೆ ಮಾಡಿದ ಬರ ಪರಿಹಾರವು ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತಿದೆ: ಬಸವರಾಜ ಬೊಮ್ಮಾಯಿ
ಪ್ರತಿ ರೈತರಿಗೆ ಗರಿಷ್ಟ 2000 ರೂ. ಪರಿಹಾರ ಹಣ ಬಿಡುಗಡೆಗೆ ಸರ್ಕಾರ ಅನುಮೋದಿಸಿದ್ದು, ಷರತ್ತಿಗೆ ಒಳಪಟ್ಟು ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ, ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 8500 ರೂ., ನೀರಾವರಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 17,500 ರೂ., ಬಹುವಾರ್ಷಿಕ ಬೆಳೆ ಹಾನಿಗೆ ಹೆಕ್ಟೇರ್ಗೆ 22,500 ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದ್ದು, 18171.44 ಕೋಟಿ ರೂ. ಪರಿಹಾರದ ಆರ್ಥಿಕ ನೆರವು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಲಾಗಿದೆ.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ