ಧಾರವಾಡ: ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವೇ ಇರಬೇಕು ಎನ್ನುವ ನಿಯಮವಿದೆ. ಅಲ್ಲದೇ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎನ್ನುವ ನಿಯಮವೂ ಇದೆ. ಹೀಗಿರುವಾಗ ಕನ್ನಡ ಬಳಸುವ ಅನೇಕ ಕಡೆಗಳಲ್ಲಿ ಸಿಬ್ಬಂದಿ ತಪ್ಪು ಮಾಡುವುದು ಕಂಡು ಬರುತ್ತಿರುವುದು ಹೊಸದೇನಲ್ಲ. ಆದರೆ ಇದೀಗ ಧಾರವಾಡ ಜಿಲ್ಲಾಡಳಿತ ಸ್ವತಃ ತಾನೇ ಕನ್ನಡದ ಕಗ್ಗೊಲೆ ಮಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಗ್ರಾಮ ಪಂಚಾಯತಿ ಚುನಾವಣೆಗಾಗಿ ಪತ್ರಕರ್ತರಿಗೆ ನೀಡಲಾಗಿರುವ ಪಾಸ್ಗಳು.
ಮಾಧ್ಯಮದವರಿಗೆ ನೀಡಿದ ಪಾಸ್ಗಳಲ್ಲಿ ಕನ್ನಡದ ಕಗ್ಗೊಲೆ:
ಹೌದು ಪಾಸ್ ಮೇಲೆ ಬರೆದಿರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಬದಲಿಗೆ ‘ಚುಣಾವಣಿ‘ ಎಂದು ಮುದ್ರಿತವಾಗಿದೆ. ಇನ್ನು ಪಾಸ್ನ ಹಿಂಬದಿಯಲ್ಲಿ ಮುದ್ರಿತವಾದ ಷರತ್ತುಗಳಲ್ಲಿ ಮತದಾನದ ದಿನ ಎನ್ನುವುದನ್ನು ಮೇಲಿಂದ ಮೇಲೆ ಎರಡು ಬಾರಿ ಮುದ್ರಿಸಲಾಗಿದೆ. ಈ ರೀತಿ ಮಾಡಲು ಕಾರಣವೇನು ಎನ್ನುವುದು ಮಾತ್ರ ಗೊತ್ತಾಗಿಲ್ಲ. ಇನ್ನು ಮತಗಟ್ಟೆಗಳಲ್ಲಿ ಎನ್ನುವ ಪದ ‘ಮತಟ್ಟೆಗಗಳಲ್ಲಿ‘ ಎಂದು ಮುದ್ರಿತವಾಗಿದೆ
ಇದಲ್ಲದೇ ಚಿತ್ರವನ್ನು ತೆಗೆಯಲು ಎಂಬ ಪದದ ಬದಲು ‘ತಗೆಯಲು‘ ಎಂದು ಮುದ್ರಿಸಿದ್ದಾರೆ. ಇನ್ನು ‘ಪೂರ್ವಸಿದ್ಧತೆ‘ ಎನ್ನುವ ಪದ ‘ಪೂರ್ವಸಿದ್ದತೆ‘ ಆಗಿದೆ. ‘ಛಾಯಾಚಿತ್ರ‘ ಎನ್ನುವ ಪದ ‘ಛಾಯಚಿತ್ರ‘ ಆಗಿದೆ. ಹೀಗೆ ಒಂದೆರಡು ಪ್ಯಾರಾಗಳಲ್ಲಿಯೇ ಇಷ್ಟೊಂದು ತಪ್ಪುಗಳನ್ನು ಮಾಡಲಾಗಿದ್ದು, ಜಿಲ್ಲಾಡಳಿತದ ಈ ಕನ್ನಡ ಕಗ್ಗೊಲೆ ನೋಡಿ ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಮೊದಲೇನಲ್ಲ!
ಧಾರವಾಡ ಜಿಲ್ಲಾಡಳಿತ ಹೀಗೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಧಾರವಾಡದಲ್ಲಿ ನಡೆದಿದ್ದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಸಮ್ಮೇಳನದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಬ್ಯಾನರ್ಗಳಲ್ಲಿಯೇ ಅನೇಕ ತಪ್ಪುಗಳಿತ್ತು.
ಕನ್ನಡ ಭಾಷೆಯ ಉಳಿವಿಗಾಗಿ ಮಾಡುತ್ತಿರುವ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ನಂತರದಲ್ಲಿ ಈ ಬಗ್ಗೆ ಟಿವಿ 9 ವರದಿ ಮಾಡಿದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸಲಾಗಿತ್ತು. ಇದೀಗ ಚುನಾವಣೆಯಂತಹ ಗಂಭೀರ ವಿಚಾರದಲ್ಲಿಯೂ ಜಿಲ್ಲಾಡಳಿತ ಇಂತಹ ತಪ್ಪುಗಳನ್ನು ಮಾಡಿರುವುದು ವಿಪರ್ಯಾಸ ಸಂಗತಿಯಾಗಿದೆ.
ಕನ್ನಡ ಭಾಷಾ ಬೆಳವಣಿಗೆಗೆ ಚಲನಶೀಲ ಪಾರಿಭಾಷಿಕ ಕೋಶ ನಡೆಸುವ ಪ್ರಾಧಿಕಾರ ಬೇಕು