
ದಾವಣಗೆರೆ, ಫೆ.8: ಜಿಲ್ಲೆಯಲ್ಲಿ ಉಚ್ಚಾಟನೆ ಪ್ರಹಸನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕೊನೆಹಾಡಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಲ್ಲಿಕಾರ್ಜುನ ಮಾಡಾಳ್ (Mallikarjuna Madal) ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ, ಸಂಸದ ಜಿಎಂ ಸಿದ್ದೇಶ್ವರ (GM Siddeshwar) ಹಾಗೂ ಎಂಪಿ ರೇಣುಕಾಚಾರ್ಯ (MP Renukacharya) ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಇಂದು ವಿಜಯೇಂದ್ರ ತೆರೆ ಎಳೆಯಲಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆ ಆಗಿದ್ದ ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.
ಉಚ್ಚಾಟನೆ ಪ್ರಹಸನಕ್ಕೆ ತೆರೆ ಎಳೆದ ಬೆನ್ನಲ್ಲೇ ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರು ಇಂದು ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ರಾಜಶೇಖರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ಗೆ ಬಂಡಾಯದ ಬಿಸಿ; ಯಡಿಯೂರಪ್ಪ ಭೇಟಿಯಾದ ಮಾಜಿ ಶಾಸಕರ ನಿಯೋಗ
ದಾವಣಗೆರೆ ನಗರದ ಶಾಮನೂರ ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಪದಗ್ರಹಣ ಸಮಾರಂಭ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಗುಂಪಿನ ನಡುವಿನ ಸಂಘರ್ಷಕ್ಕೆ ತೆರೆ ಎಳೆಯಲಿದ್ದಾರೆ. ಟಿಕೆಟ್ ವಿಚಾರವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿರುವುದಾಗಿ ಪ್ರತಿಜ್ಞೆ ಮಾಡಿಸಲಿದ್ದಾರೆ.
ಜಿಎಂ ಸಿದ್ದೇಶ್ವರ ಅವರು ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಟಿಕೆಟ್ ನೀಡಲಾಗಿತ್ತು. ಅದರಂತೆ ಗೆಲುವು ಕೂಡ ಸಾಧಿಸಿದ್ದರು. ಆದರೆ, ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು, ಹೊರ ಜಿಲ್ಲೆಯವರಿಗೆ ನೀಡಬಾರದು ಎಂದು ಸ್ಥಳೀಯ ನಾಯಕರಾದ ಎಂಬಿ ರೇಣುಕಾಚಾರ್ಯ ಮತ್ತಿತರರು ಪಟ್ಟುಹಿಡಿದಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ