ಎತ್ತಿನಹೊಳೆ ಯೋಜನೆ ಬಗ್ಗೆ ತಿಳಿಯಲೇಬೇಕಾದ ಅಂಶಗಳು
ಹಾಸನ, ಸೆಪ್ಟೆಂಬರ್ 6: ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತ ಕೊನೆಗೂ ಲೋಕಾರ್ಪಣೆಯಾಗಿದೆ. ಬರೊಬ್ಬರಿ 23 ಸಾವಿರ ಕೋಟಿ ವೆಚ್ಚದ ಯೋಜನೆ ಕರ್ನಾಟಕದ ಬಯಲು ಸೀಮೆಯ 7 ಜಿಲ್ಲೆಗಳ ಕೋಟಿ ಕೋಟಿ ಜನರಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ದಶಕಗಳ ಕಾಯುವಿಕೆ, ಹತ್ತು ವರ್ಷದ ಕುತೂಹಲಕ್ಕೆ ತೆರೆಬಿದ್ದ ಈ ಹೊತ್ತಿನಲ್ಲಿ ಯೋಜನೆಯ ಬಗ್ಗೆ ತಿಳಿಯಲೇಬೇಕಾದ ಅಂಶಗಳು ಇಲ್ಲಿವೆ.
ಹಾಸನ ಜಿಲ್ಲೆಯ ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲ ಹಳ್ಳಗಳಿಂದ ನೀರನ್ನು ಮೆಲೆತ್ತಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ.
- ಬರೊಬ್ಬರಿ 23,000 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ.
- ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆ 2014ರಲ್ಲಿ ಆರಂಭಗೊಂಡಿತ್ತು.
- ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನಹೊಳೆ ಭಾಗದ ನೀರು ಹರಿದು ಸಮುದ್ರ ಸೇರುವುದನ್ನು ತಡೆದು 24 ಟಿಎಂಸಿ ನೀರನ್ನು ನದಿಗೆ ವಿರುದ್ಧವಾಗಿ ಪೈಪ್ಲೈನ್ ಹಾಗೂ ಕಾಲುವೆ ಮೂಲಕ ಹರಿಸಿ ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಹಮ್ಮಿಕೊಂಡಿರುವ ಯೋಜನೆ ಇದಾಗಿದೆ.
- ಸಕಲೇಶಫುರ ತಾಲ್ಲೂಕಿನ ದೊಡ್ಡನಗರ ಬಳಿಯ ವಿತರಣಾ ತೊಟ್ಟಿ 3ರ ಬಳಿ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗುತ್ತಿದೆ.
- 2014ರಲ್ಲಿ 8500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ.
- ಒಟ್ಟು 8 ಪೈಪ್ಲೈನ್ ಮೂಲಕ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ಬಂದು ಸೇರುವ ನೀರು 261 ಕಿಲೋಮೀಟರ್ ಹರಿದು ದೊಡ್ಡಬಳ್ಳಾಪುರದ ಸಮನಾಂತರ ಜಲಾಶಯ ಸೇರಿ ಅಲ್ಲಿಂದ ಕುಡಿಯುವ ನೀರು ಹಾಗು ಕೆರೆ ತುಂಬಿಸಲು ಬಳಕೆ ಆಗಲಿದೆ.
- ಒಟ್ಟು 261 ಕಿಲೋಮೀಟರ್ ಪೈಕಿ 162 ಕಿಲೋಮೀಟರ್ ಕೆಲಸ ಸಂಪೂರ್ಣ ಮುಗಿದಿದೆ. 25 ಕಿಲೋಮೀಟರ್ ಕೆಲಸ ಪ್ರಗತಿಯಲ್ಲಿದೆ, ಇನ್ನುಳಿದ 50 ಕಿಲೋಮೀಟರ್ ಪೈಕಿ 19 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಕಾಲುವೆ ಆಗಬೇಕಿದ್ದು ಅದರ ಕಾಮಗಾರಿ ಕೂಡ ನಡೆಯುತ್ತಿದೆ.
- ಮಳೆಗಾಲ ಆರಂಭವಾಗುವ ಜೂನ್ 1ರಿಂದ ಅಕ್ಟೋಬರ್ 31ರ ವರೆಗೆ ಒಟ್ಟು 139 ದಿನಗಳು ನಿತ್ಯ 1500 ಕ್ಯುಸೆಕ್ ನೀರಿನಂತೆ 24 ಟಿಎಂಸಿ ನೀರು ಹರಿಸಲು ಉದ್ದೇಶಿಸಲಾಗಿದೆ.
- ಈ ವರ್ಷ ಹಾಸನ ಜಿಲ್ಲೆಯ ಒಳಗೆ 42 ಕಿಲೋಮೀಟರ್ ವರೆಗೂ ಕಾಮಗಾರಿಸಂಪೂರ್ಣ ಮುಗಿದಿದೆ. ಆದರೆ, ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಆಗದ ಕಾರಣ 32ನೇ ಕಿಲೋಮೀಟರ್ನಲ್ಲಿ ನೀರನ್ನು ಹಳೆಬೀಡು ಕರೆಯತ್ತ ತಿರುಗಿಸಿ ಅಲ್ಲಿಂದ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಯತ್ತ ಹರಿಸಿ ವೇದಾವತಿ ನದಿ ಕೂಲಕ 132 ಕಿಲೋಮೀಟರ್ ದೂರದ ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ.
- ಇಂದಿನಿಂದ (ಸೆಪ್ಟೆಂಬರ್ 6) ಒಟ್ಟು 60 ದಿನ ನಿರಂತವಾಗಿ ನೀರು ಹಸಿರಿ ಸುಮಾರು 5 ಟಿಎಂಸಿನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸುವ ಉದ್ದೇಶವಿದೆ.
- ಈ ಯೋಜನೆಯಿಂದ ಮುಖ್ಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಜನರಿಗೆ ಪ್ರಯೋಜನವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ