ಕಾರವಾರ: 2021ರ ರಾಜ್ಯ ಬಜೆಟ್ನಲ್ಲಿ ಪ್ರಸ್ತಾಪವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಉತ್ತರ ಕನ್ನಡದ ಮಲೆನಾಡು ತಾಲೂಕುಗಳಾದ ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಜನ ಸಂಘಟನೆ ಬಲಗೊಳ್ಳುತ್ತಿದೆ. ಶಿರಸಿಯ ಸೋಂದಾ ಸಮೀಪದ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ಮುಂದಾಳತ್ವದಲ್ಲಿ ನದಿ ತಿರುವು ವಿರೋಧಿ ಹೋರಾಟ ನಡೆಯಲು ಸಿದ್ಧತೆ ನಡೆಯುತ್ತಿದೆ. ಬೇಡ್ತಿ ವರದಾ ನದಿ ತಿರುವು ಯೋಜನೆ ವಿರುದ್ಧ ಕೂಗು ಮುನ್ನೆಲೆಗೆ ಬರುತ್ತಿದ್ದಂತೆ ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ರೂಪಿಸಲಾಗಿದ್ದ ವಿಫಲ ಯೋಜನೆಯೊಂದು ಸಾರ್ವಜನಿಕ ವಲಯದಲ್ಲಿ ಪ್ರಸ್ತಾಪವಾಗಿದೆ. 2013ರಲ್ಲಿ ನಿರ್ಮಿಸಲಾಗಿದ್ದ ವರ್ಷದ ಬಹುಕಾಲ ನೀರೇ ಇರದ ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ತರಲು ಬೃಹತ್ ಪೈಪುಗಳನ್ನು ಅಳವಡಿಸಲಾಗಿತ್ತು.
ಯಲ್ಲಾಪುರ ಪಟ್ಟಣಕ್ಕೆ ಬೇಡ್ತಿ ನದಿಯಿಂದ ಕುಡಿಯುವ ನೀರು ತರುವ ಯೋಜನೆಯ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿಬಂದಿತ್ತು. ಬೇಡ್ತಿ ನದಿಯಲ್ಲಿ ವರ್ಷದ ಬಹುಕಾಲ ನೀರೇ ಇರುವುದಿಲ್ಲ. ಇರುವುದು ಸಹ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ತ್ಯಾಜ್ಯವೇ ಹೊರತು ಶುದ್ಧ ನೀರಲ್ಲ. ಇಷ್ಟೆಲ್ಲದರ ನಡುವೆ ಯಾವ ಪುರುಷಾರ್ಥಕ್ಕೆ ಬೇಡ್ತಿಯ ನೀರನ್ನು ಯಲ್ಲಾಪುರಕ್ಕೆ ತರುತ್ತೀರಿ ಎಂದು ಯಲ್ಲಾಪುರ ನಿವಾಸಿಗಳು ಈ ಯೋಜನೆಗೆ ವಿರೋಧಿಸಿದ್ದರು. ನೀರು ತಂದರೂ ನಾವಂತೂ ಕುಡಿಯುವುದಿಲ್ಲ ಎಂದು ಪಟ್ಟಣ ವಾಸಿಗಳು ಬೇಡ್ತಿ ಯೋಜನೆಯನ್ನು ನೈತಿಕವಾಗಿ ಧಿಕ್ಕರಿಸಿದ್ದರು. ಬೇಡ್ತಿಗಿಂತ ಯಲ್ಲಾಪುರ ತಾಲೂಕಿನ ಇನ್ನೊಂದು ನದಿಯಾದ ಕಾಳಿಯ ನೀರನ್ನು ಯಲ್ಲಾಪುರಕ್ಕೆ ತರಬೇಕು ಎಂಬ ಪರ್ಯಾಯ ವಾದ ಬಲಗೊಂಡಿತ್ತು. ಆದರೂ ರಾಜಕೀಯ ಕಾರಣಗಳಿಗಾಗಿ ಬೇಡ್ತಿ ಯೋಜನೆಯನ್ನು ಜಾರಿಗೊಳಿಸಲಾಯಿತು.
ಈ ಯೋಜನೆ ಜಾರಿಯಾದ ನಂತರವೂ ಬೇಡ್ತಿ ನೀರು ಶುದ್ಧವಾಗಿಲ್ಲ ಎಂಬ ದೂರುಗಳು ಪದೇಪದೇ ಕೇಳಿಬಂದವು. ಬೇಡ್ತಿ ನೀರನ್ನು ಕುಡಿದು ತೃಪ್ತಿಯಾಯಿತು ಎಂದ ಓರ್ವರೂ ಯಲ್ಲಾಪುರ ಪಟ್ಟಣದಲ್ಲಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಯಿತು.
ಹುಬ್ಬಳ್ಳಿ-ಧಾರವಾಡ ನಗರಗಳ ಮಲಿನ ಸೇರಿಸಿಕೊಂಡು ಬೇಡ್ತಿ ನದಿಯ ನೀರು ಆಗಾಗ ಬಣ್ಣ ಬದಲಿಸುತ್ತಿತ್ತು. ಬೇಡ್ತಿ ನೀರು ಬಿಳಿ ನೊರೆ, ಹಸಿರು ಬಣ್ಣವಾದಾಗ ಸಚಿವ, ಶಾಸಕ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ ಶುದ್ಧೀಕರಣ ಘಟಕದ ಬಳಿ ನೀರನ್ನು ಕುಡಿದು, ಮುಂದಿನ ವರ್ಷಗಳಲ್ಲಿ ಹಂತಹಂತವಾಗಿ ಬೇಡ್ತಿ ನೀರನ್ನು ಸಂಪೂರ್ಣವಾಗಿ ಪಟ್ಟಣಕ್ಕೆ ಪೂರೈಸುವ ಕುರಿತು ಮಾತನಾಡಿದ್ದರು. ಆದರೆ ಇದೇ ರೀತಿ ಪದೇಪದೇ ಬಣ್ಣ ಬದಲಾಗುವುದು, ತ್ಯಾಜ್ಯಗಳು ಹೆಚ್ಚಾಗಿ ಕಂಡು ಬರುವುದು ನಡೆಯುತ್ತಲೇ ಇತ್ತು. ಅಲ್ಲದೇ, ಬೇಡ್ತಿ ಸೇತುವೆ ಬಳಿ ಇರುವ ಕುಡಿಯುವ ನೀರಿನ ಬ್ಯಾರೇಜ್ ಬಳಿ ಮರಮುಟ್ಟು, ಕಸತ್ಯಾಜ್ಯ ತೇಲಿಬಂದು ಸಂಗ್ರಹಗೊಂಡಿದ್ದವು. ಇದನ್ನು ತೆರವುಗೊಳಿಸದ ಕಾರಣ ನೀರು ಮತ್ತಷ್ಟು ಮಲೀನವಾಗಿತ್ತು.
ಅಂದಿನಿಂದ ಯಲ್ಲಾಪುರದ ವಾಸಿಗಳು ಬೇಡ್ತಿ ನೀರನ್ನು ಕುಡಿಯಲು ಬಳಸುವುದಿರಲಿ, ಸ್ನಾನಕ್ಕೂ ಬಳಸದ ಸ್ಥಿತಿ ನಿರ್ಮಾಣವಾಗಿತ್ತು. ಬೇಡ್ತಿ ನೀರನ್ನು ಯಲ್ಲಾಪುರದ ವೈಟಿಎಸ್‍ಎಸ್ ಆವರಣದಲ್ಲಿರುವ ಶುದ್ಧೀಕರಣ ಘಟಕದಲ್ಲಿ ಭಾರಿ ರಾಸಾಯನಿಕ ಬಳಸಿ ಶುದ್ಧೀಕರಿಸಲಾಗುತ್ತಿತ್ತು. ಶುದ್ಧೀಕರಣಗೊಂಡು ಟ್ಯಾಂಕ್‍ಗೆ ಹೋಗುವ ನೀರು ಕಾಲುವೆ ಪಾಚಿಗಟ್ಟಿ, ಚರಂಡಿಯಂತೆ ಕಂಡು ಬರುತ್ತಿತ್ತು. ನಿಯಮಾನುಸಾರ ವಾರಕ್ಕೊಮ್ಮೆ ಈ ಕಾಲುವೆಯನ್ನು ಸ್ವಚ್ಛಗೊಳಿಸಬೇಕು. ಆದರೆ ಅದನ್ನೆಲ್ಲ ಗಾಳಿಗೆ ತೂರಿದಂತೆ ಕಂಡು ಬಂದಿತ್ತು. ಒಟ್ಟಿನಲ್ಲಿ ಬೇಡ್ತಿ ನೀರಿನ ಯೋಜನೆ ವರದಾನವಾಗುವ ಬದಲು ಸಮಸ್ಯೆಗಳನ್ನೇ ತಂದೊಡ್ಡಿತ್ತು.
2015ರಲ್ಲೇ ಕಾಮಗಾರಿ ಪೂರ್ಣಗೊಂಡಿದ್ದರೂ ಯಲ್ಲಾಪುರ ಪಟ್ಟಣಕ್ಕೆ ಈವರೆಗೂ ಬೇಡ್ತಿ ನೀರು ಬರಲೇ ಇಲ್ಲ. ಮಳೆಗಾಲ ಮುಗಿದು ಕೆಲ ದಿನಗಳಷ್ಟೇ ನೀರು ಇರುವ ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗಿರಲಿಲ್ಲ. ಮಾಡಿದ್ರೂ ಅದು ಕೆಲವೇ ವಾರ್ಡ್ಗಳಿಗೆ ಸೀಮಿತವಾಗಿತ್ತು. ಎಲ್ಲಾ ವಾರ್ಡ್ಗಳಿಗೂ ಪೂರೈಕೆಯಾಗುವ ಮುನ್ನವೇ ಯೋಜನೆ ಹಳ್ಳ ಹಿಡಿದಿತ್ತು. ಅಲ್ಲದೇ, 2020ರಲ್ಲಿ ಯಲ್ಲಾಪುರ ಪಟ್ಟಣಕ್ಕೆ ಹೊಸದಾಗಿ ಪೈಪ್ಲೈನ್ ಅಳವಡಿಸಲಾಗಿತ್ತು. ಹಳೆ ಪೈಪ್ಗಳಲ್ಲಿ ನೀರು ಬರದೆ ಮತ್ತೊಮ್ಮೆ ಹೊಸ ಪೈಪ್ಗಳನ್ನು ಅಳವಡಿಸಲಾಗಿತ್ತು.
ಇದೀಗ ಇದೇ ಬೇಡ್ತಿ ನದಿ ಮತ್ತು ವರದಾ ನದಿ ಸೇರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಮಲೆನಾಡಿನ ಕೆಲ ಹಳ್ಳಗಳಲ್ಲಿ ಇರುವಷ್ಟೂ ನೀರು ಇರದ ಬೇಡ್ತಿ ನದಿಯನ್ನು ವರದೆಗೆ ಜೋಡಿಸುವುದು ಸ್ಥಳೀಯ ಪರಿಸರ ಒಡಲಿಗೆ ಕೊಡುವ ಪೆಟ್ಟೇ ಹೊರತು ಮತ್ತೇನಲ್ಲ. ನೀರೇ ಇರದ ಬೇಡ್ತಿಗೆ ಆಣೆಕಟ್ಟು ಕಟ್ಟುವ ‘ಕುಡಿಯುವ ನೀರಿನ’ ಯೋಜನೆ ಎಷ್ಟು ಯಶ ಕಾಣುತ್ತದೆ ಎಂಬುದನ್ನು ಇನ್ನಷ್ಟು ಪ್ರತ್ಯೇಕವಾಗಿ ಹೇಳಬೇಕೆ?
ಮಾಹಿತಿ ಕೃಪೆ: ಶ್ರೀಧರ ವೈದಿಕ
ಇದನ್ನೂ ಓದಿ: ಬೇಡ್ತಿ-ವರದಾ ನದಿ ಜೋಡಣೆ: ಕುಡಿಯುವ ನೀರಿನ ಯೋಜನೆಯೋ? ಪರಿಸರ ನಿರ್ನಾಮದ ತಂತ್ರವೋ?
ಇದನ್ನೂ ಓದಿ: ಘಂಟೆ ಗಣಪತಿ, ಸಾತೊಡ್ಡಿ ಜಲಪಾತ.. ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?
Published On - 6:00 pm, Sun, 21 March 21