ಬೀದರ್: ಮಳೆ ಜಾಸ್ತಿಯಾದರೆ ರೈತರಿಗೆ ಖುಷಿಯಾಗುತ್ತದೆ. ಇನ್ನೂ ಜಾಸ್ತಿ ಮಳೆಯಾಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. ಆದರೆ ಬೀದರ್ ಜಿಲ್ಲೆಯ ರೈತರಿಗೆ ಮಾತ್ರ ಮಳೆ ಪ್ರಮಾಣ ಜಾಸ್ತಿಯಾದರೆ ಆತಂಕ ಶುರುವಾಗುತ್ತ. ಸಾಲ ಸೋಲಾ ಮಾಡಿ ಬಿತ್ತನೆ ಮಾಡಿದ ಬೆಳೆ ಹಾಳಾಗುತ್ತದೆ ಎನ್ನುವ ಚಿಂತೆ ಇವರನ್ನು ಕಾಡುತ್ತದೆ ಇದಕ್ಕೆ ಕಾರಣ ಬೀದರ್ ಜಿಲ್ಲೆಯ ಜೀವ ನಾಡಿ ಕಾರಂಜಾ ಡ್ಯಾಂ. ಕೆಲವು ರೈತರಿಗೆ ಈ ಡ್ಯಾಂನಿಂದ ಅನೂಕುಲವಾಗಿದ್ದರೆ, ಇನ್ನೂ ಕೆಲವು ರೈತರಿಗೆ ಈ ಡ್ಯಾಂ ನೀರ್ಮಾಣದಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದಕ್ಕೆ ಪ್ರಮುಖವಾದ ಕಾರಣ ಕಾರಂಜಾ ಡ್ಯಾಂನ ಹಿನ್ನೀರು.
ಈ ಡ್ಯಾಂ ನಿರ್ಮಾಣವಾದಾಗಿನಿಂದ ಡ್ಯಾಂನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರಲಿಲ್ಲ. ಆದರೇ ಈಗ ಕಳೆದ ಮೂರು ವರ್ಷದಿಂದ ನಿರಂತರವಾಗಿ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತಿದ್ದು, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಡ್ಯಾಂನಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ರೈತರ ಜಮೀನಿಗೆ ನೀರು ನುಗ್ಗುತ್ತಿದ್ದು, ಬಿತ್ತದ ಬೆಳೆ ನೀರಿನಲ್ಲಿ ಮುಳುಗಿ ಕಳೆದ ಮೂರು ವರ್ಷದಿಂದ ಈ ಭಾಗದ ರೈತರು ಬೆಳೆ ಹಾಕಿದರು ಅದರಿಂದ ಏನು ಪ್ರಯೋಜನವಾಗುತ್ತಿಲ್ಲ.
ಈ ಡ್ಯಾಂ ನಿರ್ಮಾಣದ ಸಮಯದಲ್ಲಿ ರೈತರಿಂದ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗಿಂತ ಜಾಸ್ತಿ ನೀರು ಸ್ವಾಧೀನ ಪಡಿಸಿಕೊಳ್ಳದ ಜಮೀನಿಗೆ ಬುರುತ್ತಿದ್ದು ರೈತರನ್ನು ಕಂಗಾಲು ಮಾಡಿದೆ. ಪ್ರತಿ ವರ್ಷವೂ ರೈತರ ಹೊಲಕ್ಕೆ ನೀರು ಬಂದಾಗಿ ಜನಪ್ರತಿನಿಧಿಗಳು ಬಂದು ಅದನ್ನ ವಿಕ್ಷಣೆ ಮಾಡಿ ನಿಮಗೆ ಪರಿಹಾರ ಕೊಡಿಸುತ್ತೇವೆಂದು ಹೇಳಿ ಹೋಗುತ್ತಾರೆಯೇ ಹೊರತು ಇನ್ನೂ ನಮಗೆ ಪರಿಹಾರ ಕೊಟ್ಟಿಲ್ಲ ಎಂದು ಗ್ರಾಮದ ರೈತ ಪ್ರಭು ರಂಜೋಳ ತಿಳಿಸಿದ್ದಾರೆ.
ಡ್ಯಾಂ ನಿರ್ಮಿಸುವ ಸಮಯದಲ್ಲಿ 26 ಹಳ್ಳಿಯ ರೈತರ ಸುಮಾರು 15000 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ನಿರಾವರಿ ಇಲಾಖೆಯವರು ಕಡಿಮೆ ಬೆಲೆಗೆ ರೈತರಿಂದ ಜಮೀನನ್ನು ಪಡೆದುಕೊಂಡಿದ್ದಾರೆ. ಕೆಲವು ರೈತರಿಗೆ ಪರಿಹಾರ ಸಿಕ್ಕಿದೆ ಇನ್ನೂ ಕೆಲವು ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ. ಅದು ಹೀಗಿರುವಾಗಲೇ ಸ್ವಾಧೀನ ಪಡಿಕೊಂಡಿರುವ ಜಮೀನಿಗಿಂತ ಹೆಚ್ಚಿನ ಪ್ರಮಾಣದ ಅಂದರೆ 1,200 ಹೆಕರೆಯಷ್ಟು ಸ್ವಾಧೀನ ಪಡಿಸಿಕೊಳ್ಳದ ಜಮೀನಿಗೆ ನೀರು ಬರುತ್ತಿದ್ದು, ಇದು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಬೆಳೆ ನಾಶವಾದರೆ ಪರಿಹಾರವನ್ನು ಕೊಡುತ್ತಿಲ್ಲ. ಇತ್ತ ನಮ್ಮ ಜಮೀನನ್ನು ಸ್ವಾಧೀನ ಸಹ ಮಾಡಿಕೊಳ್ಳುತ್ತಿಲ್ಲ. ಹೀಗಾಗದರೆ ಹೇಗೆ ಎಂದು ಇಲ್ಲಿನ ರೈತರು ಸರಕಾರಕ್ಕೆ ಪ್ರಶ್ನೇಸುತ್ತಿದ್ದಾರೆ.
1972ರಲ್ಲಿ ಈ ಡ್ಯಾಂ ನಿರ್ಮಾಣ ಮಾಡುವಾಗ ಒಟ್ಟು ಹದಿನೈದು ಸಾವಿರ ಎಕರೆ ಪ್ರದೇಶವನ್ನು ಮುಳುಗಡೆ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆಗ ಸಮರ್ಪಕ ಜಮೀನು ಸರ್ವೇ ನಡೆಸಿ 15 ಸಾವಿರ ಎಕರೆಯಷ್ಟೂ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೇ ಈಗ ಸರ್ವೇ ಮಾಡಿದ್ದಕ್ಕಿಂತ ಹೆಚ್ಚು ನೀರು ರೈತರ ಹೊಲದಲ್ಲಿ ನುಗ್ಗುವ ಭೀತಿ ಎದುರಾಗಿದೆ. ಇದು ರೈತರ ಆತಂಕ ಹೆಚ್ಚಿಸುವಂತೆ ಮಾಡಿದೆ.
7.691 ಟಿಎಂಸಿ ಸಾಮರ್ಥ್ಯದ ಡ್ಯಾಂ ಇದಾಗಿದ್ದು, ಡ್ಯಾಂ ನಿರ್ಮಾಣ ಮಾಡಿದಾಗಿನಿಂದ ಇಷ್ಟೂ ಪ್ರಮಾಣದಲ್ಲಿ ನೀರು ಡ್ಯಾಂನಲ್ಲಿ ಸಂಗ್ರಹವಾಗುತ್ತಿರಲಿಲ್ಲ. ಆದರೆ ಕಳೆದು ಮೂರು ವರ್ಷದಲ್ಲಿ ಡ್ಯಾಂನಲ್ಲಿ ಹೆಚ್ಚಿನ ನೀರು ನಿಲ್ಲಿಸಲಾಗುತ್ತಿದೆ. ಹೋದ ವರ್ಷವೂ ಕೂಡ ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲಿಸಿದ್ದರಿಂದ ಎರಡು ಸಾವಿರ ಎಕರೆಷ್ಟು ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿತ್ತು. ಈ ವರ್ಷವೂ ಕೂಡಾ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮತ್ತೆ ರೈತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ ಅಗತ್ಯಕ್ಕಿಂತ ಹೆಚ್ಚಿನ ನೀರು ನಿಲ್ಲಿಸಬೇಡಿ ಎಂದು ಹೋರಾಟಗಾರ ಚಂದ್ರಕಾಂತ್ ಮನವಿ ಮಾಡಿದ್ದಾರೆ.
ಸದ್ಯ ಬೀದರ್ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೆಳೆಯೂ ಕೂಡಾ ಚೆನ್ನಾಗಿ ಬಂದಿದೆ. ರೈತರು ಕೂಡಾ ಖುಷಿಯಾಗಿದ್ದಾರೆ. ಆದರೆ ಕಾರಂಜಾ ಡ್ಯಾಂ ಹಿನ್ನೀರಲ್ಲಿ ಬರುವ ರೈತರ ಪರಿಸ್ಥಿತಿ ಒಂದು ಮಟ್ಟಿಗೆ ಈಗ ಚೆನ್ನಾಗಿದೆ. ಆದರೇ ಮಳೆ ಜಾಸ್ತಿಯಾಗಿ ಡ್ಯಾಂ ನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಿದರೆ ಅವರ ಬದುಕು ದುಸ್ಥರವಾಗುವುದು ಗ್ಯಾರಂಟಿ. ಹೀಗಾಗಿ ಜಿಲ್ಲಾಡಳಿತ ಈ ರೈತರ ಸಮಸ್ಯೆಯ ಕಡೆಗೂ ಸ್ವಲ್ಪ ಗಮನ ಹರಸಬೇಕಾಗಿದೆ.
ಇದನ್ನೂ ಓದಿ:
ದುಸ್ಥಿತಿಯಲ್ಲಿರುವ ವರದಾ ನದಿ ಸೇತುವೆ; ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಲು ಹಾವೇರಿ ಜನರಿಂದ ಮನವಿ
2019-20ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಣ ಬಾರದೇ ವಿಜಯಪುರ ರೈತರು ಕಂಗಾಲು