2019-20ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಣ ಬಾರದೇ ವಿಜಯಪುರ ರೈತರು ಕಂಗಾಲು
2020-2021 ರಲ್ಲಿ ಮುಂಗಾರು ನಲ್ಲಿ 76 ಸಾವಿರ ಜನ ವಿಮೆ ಮಾಡಿಕೊಂಡಿದ್ದಾರೆ. ಹಿಂಗಾರಿನಲ್ಲಿ 9600 ಜನರು ವಿಮೆ ಮಾಡಿಸಿಕೊಂಡಿದ್ದು, ಅವರ ಪರಿಹಾರ ಸಹ ಇನ್ನೂ ಬರಬೇಕಿದೆ. ಮುಂದಿನ ಆಗಸ್ಟ್ ವೇಳೆಗೆ ಹಣ ಸಂದಾಯವಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಶೇಖರ್ ವಿಲಿಯಮ್ಸ ಹೇಳಿದ್ದಾರೆ.
ವಿಜಯಪುರ: ಜಿಲ್ಲೆಯ ರೈತರಿಗೆ ಒಂದಿಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಒಂದೆಡೆ ಅತೀವೃಷ್ಠಿ ಕಾಡಿದರೆ ಇನ್ನೊಂದೆಡೆ ಅನಾವೃಷ್ಠಿ ಕಾಡುತ್ತಿದೆ. ಕಳೆದ ಬಾರಿ ಉತ್ತಮ ಮಳೆಯಾಗಿದ್ದರೂ ಪ್ರವಾಹದಿಂದ ಜಿಲ್ಲೆಯ ಅನ್ನದಾತರ ಮುಂಗಾರು, ಹಿಂಗಾರು ಬೆಳೆಗಳು ಕೊಚ್ಚಿಕೊಂಡು ಹೋಗಿದ್ದವು. ಇದರಿಂದ ಚೇತರಿಸಿಕೊಳ್ಳಲು ರೈತರಿಗೆ ಸಾಧ್ಯವೇ ಆಗಿಲ್ಲ. ಹೀಗಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ 2019-20 ರ ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಣವೂ ಇಲ್ಲಿನ ಸಾವಿರಾರು ರೈತರಿಗೆ ಸಿಗದಂತೆ ಆಗಿದೆ. ಆ ಹಣವಾದರೂ ಬಂದರೆ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಮಾಡಲು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಹಾಯವಾಗಲಿದೆ ಎಂದು ಸದ್ಯ ಈ ಭಾಗದ ರೈತರು ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿನ ಸುಮಾರು 30 ಸಾವಿರಕ್ಕೂ ಆಧಿಕ ರೈತರಿಗೆ 2019-20 ರ ಸಾಲಿನಲ್ಲಿ ಭರಣೆ ಮಾಡಿರುವ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಪರಿಹಾರ ಹಣ ಬಂದಿಲ್ಲ. ಎರಡು ವರ್ಷಗಳ ಹಿಂದೆ ಭೀಕರ ಬರವಿತ್ತು. ಬರಗಾಲದಲ್ಲಿಯೇ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ರೈತರು ಬಿತ್ತನೆ ಕಾರ್ಯ ಮಾಡಿದ್ದರು. ಮುಂಗಾರು ಹಾಗೂ ಹಿಂಗಾರು ಸೇರಿ 10 ಲಕ್ಷ ಹೆಕ್ಟೇರ್ ನಷ್ಟು ಮಳೆಯಾಶ್ರಿತವಾಗಿ ಬಿತ್ತನೆ ಮಾಡಿದ್ದರು. ಆದರೆ ಮಳೆಯ ಕೊರತೆ ಕಂಡು ಬಂದು ಉತ್ತಮ ಬೆಳೆ ಬರಲಿಲ್ಲ.
ಇದೇ ವೇಳೆ 2019-20 ರ ಸಾಲಿನಲ್ಲಿ ಜಿಲ್ಲೆಯಲ್ಲಿ 75 ರಿಂದ 80 ಸಾವಿರ ರೈತರು ಫಸಲ್ ಬೀಮಾ ಯೋಜನೆಗೆ ಹಣ ಭರಿಸಿದ್ದರು. ಮಳೆಯಾಶ್ರಿತ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳದವರೂ ಸಹ ಇದರಲ್ಲಿ ಸೇರಿದ್ದರು. ಕಳೆದ ವರ್ಷ 2019-20 ಸಾಲಿನ ಫಸಲ್ ಬೀಮಾ ಯೋಜನೆಗೆ ಹಣ ಭರಿಸಿದ ಕೇವಲ 30 ಸಾವಿರ ರೈತರಿಗೆ 29 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಇನ್ನುಳಿದ ರೈತರಿಗೆ ಅಂದರೆ ಸುಮಾರು 30 ಸಾವಿರ ರೈತರಿಗೆ ಇಲ್ಲಿಯವರೆಗೂ ಪರಿಹಾರ ಹಣ ಸಿಕ್ಕಿಲ್ಲಾ.
2019 -20 ರಲ್ಲಿ ಫಸಲ್ ಬೀಮಾ ಯೋಜನೆಗಾಗಿ ಸಾಲ ಸೋಲ ಮಾಡಿ ಹಣ ಭರಿಸಿದ್ದೇವೆ. ಆದರೆ ಬಹಳಷ್ಟು ರೈತರಿಗೆ ಹಣ ಬಂದಿಲ್ಲ. ಕಳೆದ ವರ್ಷ ಪ್ರವಾಹ ಎಲ್ಲವನ್ನೂ ಕೊಚ್ಚಿಕೊಂಡು ಹೋಯ್ತು. ಈ ಬಾರಿ ಬಿತ್ತನೆ ಮಾಡಲೂ ನಮ್ಮ ಬಳಿ ಕಾಸಿಲ್ಲ. ಫಸಲ್ ಬೀಮಾ ಯೋಜನೆಯ ಹಣವನ್ನಾದರೂ ನೀಡಿದರೆ ನಮ್ಮ ಮುಂದಿನ ಕೃಷಿ ಚಟುವಟಿಕೆ ಹಾಗೂ ಬದುಕು ನಡೆಸಲು ಅನಕೂಲವಾಗುತ್ತದೆ ಎಂದು ರೈತ ರಮೇಶ ಜಮಖಂಡಿ ತಿಳಿಸಿದ್ದಾರೆ.
2019-2020 ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 80 ಸಾವಿರ ಜನ ಬೆಳೆ ಹಾನಿ ಪರಿಹಾರದ ವಿಮೆ ಮಾಡಿಕೊಂಡಿದ್ದರು. ಆ ವರ್ಷದಲ್ಲಿ 31 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿತ್ತು, ಅದೆಲ್ಲವೂ ಹಾಳಾಗಿತ್ತು. 80 ಸಾವಿರ ರೈತರ ಪೈಕಿ 23,840 ಜನರಿಗೆ 29 ಕೋಟಿ ಈಗಾಗಲೇ ಪರಿಹಾರ ಬಂದಿದೆ. ಇನ್ನು ಅಂದಾಜು 30 ಸಾವಿರ ಜನರಿಗೆ ಬೆಳೆ ವಿಮೆ ಬರಬೇಕು, ಕ್ರಾಪ್ ಸರ್ವೇ ಮಿಸ್ ಮ್ಯಾಚ್ ಮಾಡಿದ್ದೆ ಪರಿಹಾರ ಬರದಿರಲು ಕಾರಣ ಎಂದು ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ ತಿಳಿಸಿದ್ದಾರೆ.
ಕ್ರಾಪ್ ಸರ್ವೆನಲ್ಲಿ ತೊಗರಿ ಎಂದು ಮುಂಗಾರಿನಲ್ಲಿ ಹಾಕಿಕೊಂಡು, ಅದು ಬೆಳೆ ಸರಿಯಾಗಿ ಬರದ ಸಮಯದಲ್ಲಿ ಹಿಂಗಾರಿನಲ್ಲಿ ಕಡಲೆ ಹಾಕಿಕೊಂಡು ಅದಕ್ಕೆ ಇನ್ಸುರೆನ್ಸ ಮಾಡಿಸಿ ಆ ಬೆಳೆಗೆ ಪೊಟೋ ತೆಗೆದು ಹಾಕಿಲ್ಲ. ಮೊದಲ ಬೆಳೆಯ ಪೊಟೋ ಮುಂದುವರಿಕೆ ಆಗಿರುವ ಕಾರಣ ಅವರಿಗೆ ಪರಿಹಾರ ಬಂದಿಲ್ಲ. ಈ ಸಮಸ್ಯೆಯನ್ನು ಪರಿಹಾರ ಮಾಡಿದ ಬಳಿಕ ರೈತರಿಗೆ ಹಣ ಬರುತ್ತದೆ. ಆ ನಿಟ್ಟಿನಲ್ಲಿ ಕೃಷಿ ಇಲಾಖೆ ಕೆಲಸ ಮಾಡುತ್ತಿದೆ. ಆದಷ್ಟು ಬೇಗಾ 2019-20 ರ ಸಾಲಿನ ಫಸಲ್ ಬೀಮಾ ಯೋಜನೆಯ ಹಣವನ್ನು ರೈತರಿಗೆ ನೀಡಲಾಗುತ್ತದೆ. ಜೊತೆಗೆ 2020-2021 ರಲ್ಲಿ ಮುಂಗಾರು ನಲ್ಲಿ 76 ಸಾವಿರ ಜನ ವಿಮೆ ಮಾಡಿಕೊಂಡಿದ್ದಾರೆ. ಹಿಂಗಾರಿನಲ್ಲಿ 9600 ಜನರು ವಿಮೆ ಮಾಡಿಸಿಕೊಂಡಿದ್ದು, ಅವರ ಪರಿಹಾರ ಸಹ ಇನ್ನೂ ಬರಬೇಕಿದೆ. ಮುಂದಿನ ಆಗಸ್ಟ್ ವೇಳೆಗೆ ಹಣ ಸಂದಾಯವಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಶೇಖರ್ ವಿಲಿಯಮ್ಸ ಹೇಳಿದ್ದಾರೆ.
ಇದನ್ನೂ ಓದಿ:
ರಾಜ್ಯದಲ್ಲಿ ಮುಂಗಾರು ಬಿತ್ತನೆ ಆರಂಭವಾಗಿದೆ, ದ್ವಿದಳ ಧಾನ್ಯ ಬೆಳೆಯುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ -ಬಿ.ಸಿ.ಪಾಟೀಲ್
ಪ್ರಧಾನಿ ಮೋದಿಯವರಿಂದ ಅಯೋಧ್ಯೆ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ; ರೂಪುರೇಷೆ, ಕಾರ್ಯಪ್ರಗತಿ ವಿವರಿಸಿದ ಸಿಎಂ ಯೋಗಿ