ಕಲಬುರಗಿ: ಹೆಣ್ಣು ಗರ್ಭಿಣಿಯಾದಾಗ ಹುಟ್ಟುವ ಮಗುವಿನ ಬಗ್ಗೆ ಸಾವಿರಾರು ಕನಸು ಕಂಡಿರುತ್ತಾರೆ. ಮಗುವನ್ನು ಹಾಗೆ ನೋಡಿಕೊಳ್ಳಬೇಕು.. ಹೀಗೆ ನೋಡಿಕೊಳ್ಳಬೇಕು ಅಂತೆಲ್ಲ ಗಂಡ- ಹೆಂಡತಿ ಯೋಚಿಸುತ್ತಾರೆ. ಆದರೆ ಮಹಾಮಾರಿ ಕೊರೊನಾ ಇಂತಹ ಸಂತೋಷದ ಘಳಿಗೆಯನ್ನು ಕಿತ್ತುಕೊಂಡಿದೆ. ಹುಟ್ಟಿದ ಮಗುವಿನ ಮುಖ ನೋಡಕ್ಕೂ ಆಗದೆ ತಂದೆ ಸಾವನ್ನಪ್ಪಿದ್ದಾರೆ. ಹುಟ್ಟಿದ ಮೂರೇ ದಿನಕ್ಕೆ ಅಪ್ಪನನ್ನು ಕಳೆದುಕೊಂಡ ಕೂಸು ತಬ್ಬಲಿಯಾಗಿದೆ.
ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 32 ವರ್ಷದ ವ್ಯಕ್ತಿಯೊರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 3 ದಿನದ ಹಿಂದೆ ಮೃತನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಗುಣಮುಖರಾದ ಬಳಿಕ ತಂದೆ ಮಗು ನೋಡಲು ನಿರ್ಧರಿಸಿದ್ದರು. ಆದರೆ ಮಗುವನ್ನು ನೋಡುವುದಕ್ಕೂ ಮುನ್ನವೇ ಇಂದು (ಮೇ 23) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಭಾಷ್ ತಾವರಖೇಡ ಸೋಂಕಿಗೆ ಬಲಿಯಾದ ವ್ಯಕ್ತಿ. ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ನಿವಾಸಿ. ವಾರದ ಹಿಂದೆ ಸುಭಾಷ್ಗೆ ಕೊರೊನಾ ಸೋಂಕು ದೃಢವಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ಬೈ ಎಲೆಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕ ಸಾವು
ಬೆಳಗಾವಿ: ಬೈ ಎಲೆಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸಿದ್ದ 56 ವರ್ಷದ ಶಿಕ್ಷಕ ರಾಜಶೇಖರ ತಳವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರಾಜಶೇಖರ ತಳವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಶಿಕ್ಷಕ ರಾಜಶೇಖರ ಸವದತ್ತಿ ಮತಕ್ಷೇತ್ರದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಚುನಾವಣೆ ಕರ್ತವ್ಯ ಮುಗಿಸಿ ಬಂದ ಬಳಿಕ ಶಿಕ್ಷಕ ಜ್ವರದಿಂದ ಬಳಲುತ್ತಿದ್ದರು. ಆ ನಂತರ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ
ಕೊರೊನಾಕ್ಕೆ ತಾಯಿ ಕಳೆದುಕೊಂಡ ಹುಡುಗಿಯ ಭಾವುಕ ಪತ್ರ: ಅಮ್ಮನ ಮೊಬೈಲ್ ಸಿಕ್ಕರೆ ಹಿಂದಿರುಗಿಸಿ
(father who has not seen the baby face has died of corona infection in kalaburagi)