ಬೆಂಗಳೂರು, (ಫೆಬ್ರವರಿ 27): ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನಾಸಿರ್ ಹುಸೇನ್ ಅವರ ಬೆಂಬಲಿಗನೋರ್ವ ಶತ್ರು ರಾಷ್ಟ್ರ ಪಾಕಿಸ್ತಾನ ಪರ ಘೋಷಣೆ ಕೂಗಿ ಉದ್ದಟತನ ಮೆರೆದಿದ್ದಾನೆ. ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ರಾಜ್ಯ ಬಿಜೆಪಿ ನಿಯೋಗ ದೂರು ನೀಡಿದೆ. ಇನ್ನು ವಿಧಾನಸೌಧ ಠಾಣೆ ಪೊಲೀಸರು, ಘೋಷಣೆ ಕೂಗಿದ ಅಪರಿಚಿತ ವ್ಯಕ್ತಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕರ್ತವ್ಯ ನಿರತ ಎಎಸ್ಐ ನೀಡಿದ ದೂರಿನ ಅನ್ವಯ ಸೆಕ್ಷನ್ 505(1)(B), 153B ಅಡಿಯಲ್ಲಿ ಕೇಸ್ ದಾಖಲಾಗಿದೆ.
ದಿನಾಂಕ: 27-02-2024 ರಂದು ನಡೆದ ರಾಜ್ಯಸಭಾ ಚುನಾವಣೆ ನಂತರ ಗೆದ್ದ ವ್ಯಕ್ತಿ ಡಾ. ನಾಸೀರ್ ಹುಸೇನ್ ರವರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಸಂಜೆ 6-00 ಗಂಟೆಯಿಂದ 6-30 ರ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ ಎಂಬ ಸುದ್ದಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಬರುತ್ತಿದೆ. ಈ ಸಂಬಂಧವಾಗಿ ಲಭ್ಯವಿರುವ ವಿಡಿಯೋಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ರಾಜ್ಯಸಭಾ ಗೆಲುವಿನ ಸಂಭ್ರಮದ ವೇಳೆ ಮೊಳಗಿದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!
ಇನ್ನು ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ಜ್ಯೋತಿ ಗಣೇಶ್ ಅವರಿದ್ದ ನಿಯೋಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಲ್ಲದೇ ಪಾಕ್ ಪರ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕೆಂದು ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆಯಾಯಿತು. ಆಗ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ವಿಧಾನಸೌಧದ ಲಾಂಜ್ನಲ್ಲಿ ಕಾಂಗ್ರೆಸ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ, ಯುವಕನೋರ್ವ “ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾನೆ.
ರಾಜ್ಯದ ಶಕ್ತಿ ಕೇಂದ್ರದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಬಿಜೆಪಿ ದೂರು ನೀಡುವ ಮುನ್ನವೇ ವಿಷಯ ತಿಳಿದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಘೋಷಣೆ ಕೂಗಿದ್ಯಾರು? ಸಂಭ್ರಮಾಚರಣೆ ವೇಲೆ ಏನಾಯ್ತು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ