ಲಂಡನ್​ನಿಂದ ಆಗಮಿಸಿದ ಮೊದಲ ಫ್ಲೈಟ್, ದೇವನಹಳ್ಳಿಗೆ ಬಂದಿಳಿದ 240 ಪ್ರಯಾಣಿಕರು

|

Updated on: Jan 10, 2021 | 6:54 AM

ಕಳೆದ ಹಲವು ದಿನಗಳಿಂದ ಬ್ರಿಟನ್​ನಿಂದ ಬಂದ ಪ್ರಯಾಣಿಕರಲ್ಲಿ ರೂಪಾಂತರ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನಲೆ ಇಡೀ ರಾಜ್ಯವೇ ಶಾಕ್ ಹಾಗಿತ್ತು. ರೂಪಾಂತರ ವೈರಸ್ ಭೀತಿಯಿಂದ ಸರ್ಕಾರ ಇಂಗ್ಲೆಂಡ್​ನಿಂದ ಬಂದವರ ಪತ್ತೆಗೆ ತಲೆ ಕೆಡಿಸಿಕೊಂಡಿದೆ. ಇದರ ನಡುವೆ ಮತ್ತೆ ಇಂದು ಇಂಗ್ಲೆಂಡ್​ನಿಂದ ಬೆಂಗಳೂರಿಗೆ ವಿಮಾನಯಾನ ಆರಂಭವಾಗಲಿದ್ದು, ರಾಜ್ಯಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ.

ಲಂಡನ್​ನಿಂದ ಆಗಮಿಸಿದ ಮೊದಲ ಫ್ಲೈಟ್, ದೇವನಹಳ್ಳಿಗೆ ಬಂದಿಳಿದ 240 ಪ್ರಯಾಣಿಕರು
ಕೆಂಪೇಗೌಡ ವಿಮಾನ ನಿಲ್ದಾಣ
Follow us on

ದೇವನಹಳ್ಳಿ: ಕೊರೊನಾ ನಿಯಂತ್ರಣಕ್ಕೆ ಬಂತು ಅಂತಿದ್ದ ಹಾಗೆ ಬ್ರಿಟನ್​ನಲ್ಲಿ ರೂಪ ಬದಲಿಸಿಕೊಂಡು ವಿಶ್ವದ ಜನರ ಮೇಲೆ ಮತ್ತೊಮ್ಮೆ ಅಟ್ಯಾಕ್ ಮಾಡಲು ಮಹಾಮಾರಿ ಸಿದ್ಧವಾಗಿತ್ತು. ಇದನ್ನ ತಡೆಯಲು ಬ್ರಿಟನ್​ನಿಂದ ಬರುವ ವಿಮಾನಗಳಿಗೆ ನಿಷೇಧ ಹೇರಲಾಗಿತ್ತು. ಈಗ ಮತ್ತೆ ಇಂಗ್ಲೆಂಡ್​ನಿಂದ ವಿಮಾನಯಾನ ಆರಂಭವಾಗಿದ್ದು, ಇಂದು ಬೆಳ್ಳಂ ಬೆಳಗ್ಗೆ 4.30ರ ವೇಳೆಗೆ ಬೆಂಗಳೂರಿಗೆ ಲಂಡನ್ ಫ್ಲೈಟ್ ಬಂದಿಳಿದಿದೆ.

ಮೊದಲ ವಿಮಾನದಲ್ಲಿ 250 ರಿಂದ 300 ಜನ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದು, ಯುಕೆಯಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡಲಾಗ್ತಿದೆ. ಈ ಹಿಂದೆ ಬಂದವರ ರೀತಿ ನೇರವಾಗಿ ಮನೆಗೆ ಕಳುಹಿಸದೆ, ಏರ್​ಪೋರ್ಟ್​ನಲ್ಲೇ ಕೊವಿಡ್ ಟೆಸ್ಟ್ ಮಾಡಿ ರಿಪೋರ್ಟ್ ಬಂದ ನಂತರ ಕಳಿಸಲು ನಿರ್ಧರಿಸಲಾಗಿದೆ.

ಇನ್ನು KIA-ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್​ನಲ್ಲಿ ಟೆಸ್ಟಿಂಗ್ ಸ್ಕ್ರೀನಿಂಗ್ ಇಮಿಗ್ರೇಷನ್ ಮತ್ತು ವಿಳಾಸ ನೊಂದಾಣಿಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
30 ಕ್ಕೂ ಅಧಿಕ ಸಿಬ್ಬಂದಿ ಟರ್ಮಿನಲ್ ಒಳಭಾಗದಲ್ಲಿ ನಿಯೋಜನೆಗೊಂಡಿದ್ದಾರೆ. ಬಂದ ಪ್ರಯಾಣಿಕರ ಟೆಸ್ಟಿಂಗ್​ಗೆ 12 ಜನ ಆರೋಗ್ಯ ಇಲಾಖೆ ಸಿಬ್ಬಂದಿ, ವಿಳಾಸ ಬರೆದುಕೊಂಡು ಸ್ಟಾಪಿಂಗ್ ಮಾಡಲು 6 ಜನ ಕಂದಾಯ ಇಲಾಖೆ‌ ಸಿಬ್ಬಂದಿ, ರಿಪೋರ್ಟ್ ಬರುವವರೆಗೂ ಟರ್ಮಿನಲ್​ನಲ್ಲಿ ಅಡ್ಡಾಡದಂತೆ ನೋಡಿಕೊಳ್ಳಲು 5 ಜನ ಪೊಲೀಸರು ನಿಯೋಜನೆಗೊಂಡಿದ್ದಾರೆ.

ಬ್ರಿಟನ್​ನಿಂದ ಬಂದವರ ಕೈ ಮೇಲೆ ಸ್ಟಾಂಪಿಂಗ್
ಕಳೆದ ಹಲವು ದಿನಗಳಿಂದ ಇಂಗ್ಲೆಂಡ್​ನಿಂದ ಬೆಂಗಳೂರಿಗೆ ಬರದೇ ಇದ್ದ ವಿಮಾನಗಳು, ಇಂದಿನಿಂದ ಆಗಮಿಸುತ್ತಿವೆ. ಹೀಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ನಿನ್ನೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದ್ರು. ಸಂಜೆ ಐದು ಗಂಟೆಗೆ ಆರೋಗ್ಯಾಧಿಕಾರಿಗಳ ಜತೆ ಏರ್​ಪೋರ್ಟ್​ಗೆ ಆಗಮಿಸಿದ ಸಚಿವ ಸುಧಾಕರ್ ವಿಮಾನ ನಿಲ್ದಾಣದಲ್ಲಿ ಕೈಗೊಂಡಿರೋ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದ್ರು.

ಇಂಗ್ಲೆಂಡ್​ನಲ್ಲಿ ಕೊರೊನಾ ಟೆಸ್ಟ್ ಮಾಡಿಸಿ ರಿಪೋರ್ಟ್ ತಂದಿದ್ದರೂ, ಇಲ್ಲಿ ಟೆಸ್ಟ್ ಮಾಡಿಸೋದು ಕಡ್ಡಾಯ ಅಂತಾ ಸುಧಾಕರ್ ಹೇಳಿದ್ರು. ಪಾಸಿಟಿವ್ ಬಂದ್ರೆ ಆರೋಗ್ಯ ಇಲಾಖೆ ಗುರುತಿಸಿರುವ ಕಡೆ ಕ್ವಾರಂಟೈನ್ ಆಗಬೇಕು. ಸರ್ಕಾರದ ಕಠಿಣ ಮಾರ್ಗಸೂಚಿಗಳನ್ನ ಪಾಲನೆ ಮಾಡೋ ಜೊತೆಗೆ, ಬ್ರಿಟನ್​ನಿಂದ ಬಂದವರ ಕೈ ಮೇಲೆ ಸ್ಟಾಂಪಿಂಗ್ ಮಾಡೋದಾಗಿ ತಿಳಿಸಿದ್ರು.

ಈ ಹಿಂದೆ ಯುಕೆಯಿಂದ ಬಂದು ನಾಪತ್ತೆಯಾಗಿರೋ ಪ್ರಯಾಣಿಕರನ್ನ ಹುಡುಕಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಯುಕೆಯಿಂದ ಪ್ರಯಾಣಿಕರು ಆಗಮಿಸುತ್ತಿದ್ದು, ಈ‌ ಬಾರಿಯಾದ್ರು ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಲಂಡನ್​ನಿಂದ ಬೆಂಗಳೂರಿಗೆ ಬಂದ ಮೂವರಿಗೆ ಕೊರೊನಾ ದೃಢ