ಬೆಂಗಳೂರು, ಸೆಪ್ಟೆಂಬರ್ 6: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಡಿಸ್ಚಾರ್ಜ್ ಆಗಿ, ಆರೋಗ್ಯ ಚೇತರಿಕೆ ಬಳಿಕ ಮೊದಲ ಸಭೆ ಮಾಡಿದ್ದಾರೆ. ಜೆ.ಪಿ.ನಗರದ ನಿವಾಸದಲ್ಲಿಯೇ ಸಭೆ ಮಾಡಿದ್ದು, ಮಾಜಿ ಪ್ರಧಾನಿ ಹೆಚ್ಡಿ ದೇವೆಗೌಡರು ಸೇರಿದಂತೆ ಶಾಸಕರು, ಪಕ್ಷದ ಪ್ರಮುಖರು, ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಜಾತ್ಯತೀತ ಜನತಾದಳ ಪಕ್ಷ ಸಂಘಟನೆ ಕುರಿತು ಶಾಸಕರ ಜೊತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಭೆ ಬಳಿಕ ಮಾಧ್ಯದವರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಇಂದು ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲಾ ಮುಖಂಡರು ಸಭೆ ಸೇರಿದ್ದೆವು. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ನಿರ್ಧಾರ ಮಾಡಿದ್ದು, ಸೆಪ್ಟೆಂಬರ್10 ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಶಿವರಾಮ್ ಹೆಬ್ಬಾರ್, ಎಲ್ಆರ್ ಶಿವರಾಮೇಗೌಡ; ಕುತೂಹಲ ಮೂಡಿಸಿದ ಭೇಟಿ
ಸಭೆ ಯಶಸ್ವಿ ಮಾಡಲು ನಿರ್ಧಾರ ಮಾಡಿದ್ದು, ಈ ಹಿನ್ನೆಲೆ ಜಿಟಿಡಿ ನೇತೃತ್ವದಲ್ಲಿ ಮಾಡಿರುವ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಬೇಕು. ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯುವುದು, ಅವರ ಅಭಿಪ್ರಾಯ ಕೋರ್ ಕಮಿಟಿಗೆ ನೀಡಿ ಅಭ್ಯರ್ಥಿ ಅಂತಿಮ ಮಾಡುವುದು ಎಂದು ಸಭೆಯಲ್ಲಿ ಪ್ರಮುಖರು ಮಾತಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ; ಮಾಜಿ ಸಿಎಂ ಡಿಸ್ಚಾರ್ಜ್: ಪುನರ್ಜನ್ಮ ಸಿಕ್ಕಿದೆ, ಪಾರ್ಶ್ವವಾಯು ಬಗ್ಗೆ ನಿರ್ಲಕ್ಷ್ಯ ಮಾಡ್ಬೇಡಿ ಎಂದು ಕುಮಾರಸ್ವಾಮಿ ಮನವಿ
ಜನತಾದಳ ಹೊಡೆಯುತ್ತಿದೆ ಅಂತ ಹೇಳುತ್ತಿದ್ದಾರೆ. ಆ ರೀತಿ ಯಾವುದೂ ಆಗಲ್ಲ. ಹೆಚ್ಡಿ ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ ಮುಂದಿನ ತಿಂಗಳು ಅವರು ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಕಳೆದ ಬುಧವಾರ ರಾತ್ರಿ ಬಿಡದಿಯ ಫಾರ್ಮ್ಹೌಸ್ನಲ್ಲಿದ್ದ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಲಘು ಸ್ಟ್ರೋಕ್ ಆಗಿತ್ತು. ಕೂಡಲೇ ಅವರನ್ನ ಬೆಂಗಳೂರಿನ ಜಯನಗರದ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಐದು ದಿನಗಳ ಚಿಕಿತ್ಸೆ ಬಳಿಕ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿತ್ತು. ಸೆಪ್ಟೆಂಬರ್ 03 ರಂದು ಹೆಚ್ಡಿ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿದ್ದರು. ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಹೆಚ್ಡಿ ಕುಮಾರಸ್ವಾಮಿ 64 ವರ್ಷದಲ್ಲಿ ನಾನು ಮೂರು ಬಾರಿ ಮರುಜನ್ಮ ಪಡೆದಿದ್ದೇನೆ ಎಂದು ಹೇಳದ್ದರು.
ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರು ಮನವಿ ಮಾಡಿದ್ದು, ಹಾಗಾಗಿ ಒಂದು ತಿಂಗಳುಗಳ ಕಾಲ ಹೆಚ್ಡಿ ಕುಮಾರಸ್ವಾಮಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.