ಸಿಎಂ ಕನಸಿನ ಕೂಸಿಗೆ ಹಣಕಾಸಿನ ಸಮಸ್ಯೆ: ಬೈಸಿಕಲ್ ಯೋಜನೆಗೆ ಸರ್ಕಾರದ ಬಳಿ ಇಲ್ಲ ಕಾಂಚಾಣ..!

|

Updated on: Jan 23, 2021 | 7:43 AM

ಈ ವರ್ಷ ಅಂದ್ರೆ 2020-2021ನೇ ಸಾಲಿನಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕಿದೆ.

ಸಿಎಂ ಕನಸಿನ ಕೂಸಿಗೆ ಹಣಕಾಸಿನ ಸಮಸ್ಯೆ: ಬೈಸಿಕಲ್ ಯೋಜನೆಗೆ ಸರ್ಕಾರದ ಬಳಿ ಇಲ್ಲ ಕಾಂಚಾಣ..!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಅದು ಮುಖ್ಯಮಂತ್ರಿಗಳ ಕನಸಿನ ಯೋಜನೆ. ಕೊರೊನಾ ಅಟ್ಟಹಾಸದಿಂದ ಮುಖ್ಯಮಂತ್ರಿಗಳ ಕನಸಿನ ಯೋಜನೆಗೆ ಅನುದಾನದ ಕೊರತೆ ಉಂಟಾಗಿದೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಪಯೋಗವಾಗಿದ್ದ ಆ ಯೋಜನೆ 12 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಥಗಿತಗೊಳ್ಳುವ ಲಕ್ಷಣಗಳು ಕಾಣ್ತಿವೆ.

ಬೈಸಿಕಲ್ ಯೋಜನೆಗೆ ಸರ್ಕಾರದ ಬಳಿ ಇಲ್ಲ ಕಾಂಚಾಣ..!
ಬೈಸಿಕಲ್ ಯೋಜನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ಯೋಜನೆ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೈಸಿಕಲ್ ಭಾಗ್ಯ ಜಾರಿ ಮಾಡಿದ್ದರು. ಗ್ರಾಮೀಣ ಭಾಗದ ರಾಜ್ಯ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆ ರೂಪಿಸಿದ್ರು. ಅದರಂತೆ ಕಳೆದ 12 ವರ್ಷಗಳಿಂದಲೂ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗ್ತಿದೆ. ಆದ್ರೆ ಈ ವರ್ಷ ಅಂದ್ರೆ 2020-2021ನೇ ಸಾಲಿನಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕಿದೆ. ಆದ್ರೆ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿಗಳ ಕನಸಿನ ಯೋಜನೆಗೆ ಅನುದಾನ ಇಲ್ಲದಂತಾಗಿದೆ.

ಮುಂದಿನ ಬಜೆಟ್​ನಲ್ಲಿ ಈ ಬಗ್ಗೆ ನಿರ್ಧರಿಸಲಾಗುತ್ತೆ..
ಅಂದಹಾಗೆ ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಆದ್ರೂ ಮಕ್ಕಳಿಗೆ ಸೈಕಲ್ ಸಿಕ್ಕಿಲ್ಲ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವ್ರನ್ನ ಕೇಳಿದ್ರೆ, ಸೈಕಲ್ ಯೋಜನೆ ಬಗ್ಗೆ ಹಣಕಾಸು ಸಚಿವರೇ ನಿರ್ಧಾರ ತೆಗೆದುಕೊಳ್ಳಬೇಕು, ಮುಂದಿನ ಬಜೆಟ್​ನಲ್ಲಿ ಈ ಬಗ್ಗೆ ನಿರ್ಧರಿಸಲಾಗುತ್ತೆ ಅಂತಾ ಹಣದ ಕೊರತೆ ಇರೋದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಸರ್ಕಾರ ನೀಡ್ತಿದ್ದ ಬೈಸಿಕಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜೀವಾಳವಾಗಿತ್ತು. ಕಿಲೋಮೀಟರ್ ಗಟ್ಟಲೇ ನಡೆದು ಶಾಲೆಗೆ ಹೋಗ್ತಿದ್ದ ಮಕ್ಕಳಿಗೆ ಬಹಳ ಪ್ರಯೋಜನವಾಗಿತ್ತು. ಆದ್ರೆ ಕೊರೊನಾ ಕರಿನೆರಳು ಸರ್ಕಾರದ ಯೋಜನೆಯನ್ನೇ ಸ್ಥಗಿತಗೊಳಿಸಿದೆ. ಹೀಗಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ.

ಸದ್ಯಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸೋಕೆ ಮುಂದಾಗಿದೆ. ಆದ್ರೆ ಬೈಸಿಕಲ್ ಯೋಜನೆ ಬಗ್ಗೆ ಮಾತ್ರ ಮಾತಾಡ್ತಿಲ್ಲ. ಮುಂದಿನ ಬಜೆಟ್​ನಲ್ಲಿ ಯಾವ ರೀತಿ ನಿರ್ಧಾರ ತೆಗೆದುಕೊಳ್ತಾರೆ, ಅದೆಷ್ಟು ಹಣ ಮೀಸಲಿಡುತ್ತಾರೆ ಕಾದು ನೋಡಬೇಕಿದೆ.

SSLC ಮಕ್ಕಳಿಗೆ ವರದಾನ.. ಮಕ್ಕಳಿಗೆ ಗಣಿತ ಕಲಿಸಲು ಮಾಯದಂತಹ ಕ್ಯಾಲೆಂಡರ್​ ತಯಾರಿಸಿದ ಶಿಕ್ಷಕ!

Published On - 7:42 am, Sat, 23 January 21