ಗದಗ, ಜುಲೈ 27: ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ. ಲಕ್ಕುಂಡಿ ಗ್ರಾಮದಲ್ಲಿ ನೂರಾರು ಮನೆಗಳು ಸೋರುತ್ತಿದೆ. ಈ ಪೈಕಿ ಮನೆಯೊಂದರ ಬಾಣಂತಿ, ಗಂಡನ ಮನೆ ಸೋರುತ್ತಿದ್ದ ಹಿನ್ನೆಲೆ ದೇವಸ್ಥಾನದಲ್ಲಿ ಎರಡು ದಿನ ಆಶ್ರಯ ಪಡೆದು ಇದೀಗ ತವರು ಮನೆಗೆ ತೆರಳಿದ್ದಾರೆ.
ನಿರಂತರ ಮಳೆಗೆ ಲಕ್ಕುಂಡಿ ಗ್ರಾಮದಲ್ಲಿ ಹತ್ತಾರು ಮನೆಗಳು ಸೋರುತ್ತಿದ್ದು, ಬಾಣಂತಿ ಪವಿತ್ರಾ ಅವರ ಗಂಡನ ಮನೆಯೂ ಇದರಲ್ಲಿ ಒಂದಾಗಿದೆ. ಮನೆ ಜರಿಯುವ ಆತಂಕ ಪವಿತ್ರಾಳ ಕುಟುಂಬಸ್ಥರನ್ನು ಕಾಡುತ್ತಿದೆ. ಹೀಗಾಗಿ ಮಳೆ ಕಡಿಮೆಯಾಗುವ ವರೆಗೆ ತವರು ಮನೆಯಲ್ಲೇ ಆಶ್ರಯ ಪಡೆಯುವುದಾಗಿ ಪವಿತ್ರಾ ಹೇಳಿದ್ದಾರೆ. ಇತ್ತ, ಈಕೆಯ ಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡುವಂತಾಗಿದೆ.
ಲಕ್ಕುಂಡಿ ಗ್ರಾಮದ ಅನೇಕ ಕುಟುಂಬಗಳು ಮನೆಗಳು ಸೋರುತ್ತಿರುವ ಸಮಸ್ಯೆ ಎದುರಿಸುತ್ತಿದ್ದಾರೆ. ಮನೆಗಳಲ್ಲಿ ಅಡುಗೆ ಮಾಡಲು ಕೂಡಲು ಕಷ್ಟಸಾಧ್ಯವಾಗುತ್ತಿದೆ. ಹಲವರ ಮನೆಗಳ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಹಾಕಲಾಗಿದೆ. ಆದರೂ ಮನೆಗಳು ಸೋರುತ್ತಿವೆ. ಇಂತಹ ಪರಿಸ್ಥಿತಿ ಎದುರಿಸುತ್ತಿದ್ದರೂ ಜಿಲ್ಲಾಡಳಿತವು ಸ್ಥಳಕ್ಕೆ ಆಗಮಿಸಿಲ್ಲ. ಇನ್ನಾದರೂ ನೆರವಿಗೆ ದಾವಿಸಂತೆ ಗ್ರಾಮಸ್ಥ ವೀರುಪಾಕ್ಷ ಮನವಿ ಮಾಡಿದ್ದಾರೆ. ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆಯುವ ಮೂಲಕ ಜಿಲ್ಲಾಡಳಿತ ಮಾನವೀಯತೆ ತೋರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ