ಗದಗ, ಜೂ.25: ಉತ್ತರ ಕರ್ನಾಟಕ ಪ್ರಸಿದ್ಧ ಮಠ ವೀರೇಶ್ವರ ಪುಣ್ಯಾಶ್ರಮ. ಶ್ರೀಮಠದ ಲಿಂಗೈಕ್ಯ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿಗವಾಯಿ(Puttaraj Gawai)ಗಳು ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯದ ಜನರ ಪಾಲಿನ ನಡೆದಾಡುವ ದೇವರು. ಲಕ್ಷಾಂತರ ಅಂಧ, ಅನಾಥ ಮಕ್ಕಳ ಬಾಳಿಗೆ ಬೆಳಕು ನೀಡಿದ ಮಹಾಚೇತನ. ಈ ಮಹಾಚೇತನ 2010ರಲ್ಲಿ ಲಿಂಗೈಕ್ಯ ಆಗಿದ್ದಾರೆ. ಹೀಗಾಗಿ ಗದಗ(Gadag) ನಗರದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಲ್ಲಿ ಸ್ಮಾರಕ ಭವನ ನಿರ್ಮಾಣ ಆಗಬೇಕು ಎಂದು ಭಕ್ತರ ಒತ್ತಾಯವಾಗಿತ್ತು. ಅದರಂತೆ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರು 5 ಕೋಟಿ ಅನುದಾನ ಘೋಷಣೆ ಮಾಡಿದ್ದರು.
ಮಾರ್ಚ್ 25, 2011ರಂದು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಮಾಡಿತ್ತು. ಗದಗ ಶಾಸಕ ಎಚ್ ಕೆ ಪಾಟೀಲ್ 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5ಕೋಟಿ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಮೂಲದ ಶಿರ್ಕೆ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದ್ರೆ, 7 ವರ್ಷಗಳು ಕಳೆದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ಸ್ಮಾರಕ ಭವನದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. 5 ಕೋಟಿಯ ಅನುಮೋದ ನೀಡಿದ್ದ ಕಟ್ಟಡ 6.25 ಕೋಟಿ ಖರ್ಚು ಮಾಡಿದ್ರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಕ್ಕೆ ಕಾಮಗಾರಿ ನಿಂತು ಹೋಗಿದೆ. ಇದು ಶ್ರೀಮಠದ ಪೀಠಾಧಿಪತಿಗಳಾದ ಕಲ್ಲಯ್ಯಜ್ಜನವರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಅನುದಾನ ನೀಡಿ ಸ್ಮಾರಕ ಪೂರ್ಣಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ವಿಷ್ಣು ಸ್ಮಾರಕಕ್ಕೆ ಸ್ಥಳ ಕೋರಿ ಅರ್ಜಿ: ಅಭಿಮಾನಿಗಳಿಗೆ ಹಿನ್ನಡೆ
ಕನ್ನಡ ಮತ್ತು ಸಂಸ್ಕೃತ ಇಲಾಖೆ, ಲೋಕೋಪಯೋಗಿ ಇಲಾಖೆಗೆ ಅನುದಾನ ನೀಡುವಂತೆ 5 ಸರಣಿ ಪತ್ರಗಳು ಬರೆದರೂ ಪ್ರಯೋಜನವಾಗಿಲ್ಲ. ಹಿಂದಿನ ಸರ್ಕಾರದಲ್ಲಿ ಗದಗ ಜಿಲ್ಲೆಯವರೇ ಆದ ಶಾಸಕ ಸಿ ಸಿ ಪಾಟೀಲ್ ಲೋಕೋಪಯೋಗಿ ಸಚಿವರಾಗಿದ್ದರೂ ಸ್ಮಾರಕ ಭವನಕ್ಕೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗಲಿಲ್ಲ ಎನ್ನುವ ಅಸಮಾಧಾನ ಭಕ್ತರಲ್ಲಿ ಇದೆ. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸ್ಥಳೀಯ ಶಾಸಕರೂ ಆದ ಸಚಿವ ಎಚ್ ಕೆ ಪಾಟೀಲ್ ಕಳೆದ ವರ್ಷ ಪ್ರವಾಸೋದ್ಯಮ ಸಚಿವರಾದ ಬಳಿಕ ಶ್ರೀಮಠಕ್ಕೆ ಭೇಟಿ ನೀಡಿ ಶೀಘ್ರವೇ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ರು. ಆದ್ರೆ, ವರ್ಷ ಕಳೆದ್ರೂ ಕಾಮಗಾರಿ ಮುಗಿಯುವುದಿರಲಿ, ಆರಂಭ ಕೂಡ ಆಗಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಟ್ಟಡದ ಅನುದಾನದ ಬಗ್ಗೆಯೇ ಸಾಕಷ್ಟು ಅನುಮಾನ ಮೂಡುತ್ತಿದೆ. ಆರಂಭದಲ್ಲಿ ಕಟ್ಟಡ ಪೂರ್ಣಗೊಳ್ಳಲು 5 ಕೋಟಿ ಎಸ್ಟಿಮೆಟ್ ಮಾಡಲಾಗಿತ್ತು. ಆ ಮೇಲೆ 1.25 ಕೋಟಿ ಹೆಚ್ಚುವರಿ ಹಣ ನೀಡಲಾಗಿದೆ. ಆದ್ರೆ, ಈಗ ಮತ್ತೆ 5 ಕೋಟಿ ಹಣ ಬೇಕು ಎಂದು ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದೆಲ್ಲವೂ ನೋಡಿದ್ರೆ ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರೀಗಳ ಸ್ಮಾರಕ ಹೆಸರಿನಲ್ಲಿ ಹಣ ಲೂಟಿಗೆ ಇಳಿದಿದ್ದಾರಾ? ಎಂದು ಭಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಮಾರಕ ಭವನದಲ್ಲಿ ಕಾಮಗಾರಿ ಅನುದಾನ ಭಾರಿ ಭ್ರಷ್ಟಾಚಾರದ ವಾಸನೆ ಇದೆ. ತನಿಖೆ ಮಾಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ