ಗದಗ: ಜಿಲ್ಲೆಯ ಬೆಟಗೇರಿ ನಗರಸಭೆ ವಾಣಿಜ್ಯ ಮಳಿಗೆಗಳ ಟೆಂಡರ್ ಕರೆಯದೇ 20 ವರ್ಷಗಳೇ ಕಳೆದಿವೆ. ಎರಡು ದಶಕಗಳಿಂದ ಒಂದೇ ಸಮುದಾಯಕ್ಕೆ ವಾಣಿಜ್ಯ ಮಳಿಗೆಗಳ ಬಾಡಿಗೆ ನೀಡಲಾಗಿದೆ. ಇದರಿಂದ ನಗರಸಭೆಗೆ ಕೋಟಿ ಕೋಟಿ ಹಣ ನಷ್ಟ ಆಗುತ್ತಿದೆ. ಹೀಗಾಗಿ ಮರು ಟೆಂಡರ್ ಕರೆಯಲು ಸಾರ್ವಜನಿಕರು ದುಂಬಾಲುಬಿದ್ದಿದ್ದರೂ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಕೆಲ ಅಧಿಕಾರಿಗಳು ಜೇಬು ತುಂಬಿಸಿಕೊಳ್ಳುವುದರಲ್ಲಿಯೇ ನಿರತರತರಾಗಿದ್ದಾರೆ. ಆದರೆ ನಗರಸಭೆಗೆ ಆಡಳಿತಾಧಿಕಾರಿಗಳಾಗಿದ್ದರೂ ಬ್ರಹ್ಮಾಂಡ ಭ್ರಷ್ಟಾಚಾರ ನೋಡಿಯೂ ಜಿಲ್ಲಾಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ-ಬೆಟಗೇರಿ ನಗರಸಭೆಯ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆಗೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆ ಭಾರಿ ಅನುಮಾನಕ್ಕೆ ಕಾರಣವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಕೋಟ್ಯಾಂತರ ಬೆಲೆ ಬಾಳುವ ನಗರಸಭೆ ಕ್ಲಾಥ್ ಮಾರ್ಕೆಟ್, ಗ್ರೇನ್ ಮಾರ್ಕೆಟ್ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಲೀಜ್ ನೀಡಲಾಗಿದೆ. ಆದರೆ ಲೀಜ್ ಅವಧಿ ಮುಗಿದು ನಾಲ್ಕು ವರ್ಷಗಳು ಕಳೆದರೂ ಈತನಕ ನಗರಸಭೆ ಆಸ್ತಿ ತನ್ನ ವಶಕ್ಕೆ ಪಡೆದಿಲ್ಲ. ಜೊತೆಗೆ 40 ವರ್ಷದಿಂದ ಒಬ್ಬರಿಗೆ ಲೀಜ್ ನೀಡಿದ್ದು, ಕೂಡ ಕಾನೂನು ಬಾಹಿರವೇ ಸರಿ.
ಪೌರಾಡಳಿತ ನಿರ್ದೇಶನಾಲಯದ ಪ್ರಕಾರ ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ಮರು ಹಂಚಿಕೆ ಮಾಡಬೇಕು ಎಂದು ಆದೇಶ ನೀಡಿದೆ. ಆದರೂ ಗದಗ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಜತೆಗೆ ಎಲ್ಲ ಸಮೂದಾಯದವರಿಗೂ ಆದ್ಯತೆ ನೀಡಬೇಕು ಎಂದು ಇದೆ. ಆದರೆ ಇದ್ಯಾವ ನಿಯಮ ಕೂಡ ಗದಗ- ಬೆಟಗೇರಿ ನಗರಸಭೆಗೆ ಅನ್ವಯವಾಗಿಲ್ಲ. ಸದ್ಯ ಮಳಿಗೆಯೊಂದಕ್ಕೆ 315 ರೂಪಾಯಿ ತಿಂಗಳ ಬಾಡಿಗೆ ಇದೆ. ಕೆಲ ಮಾಲೀಕರು ಸರ್ಕಾರಕ್ಕೆ 315 ರೂಪಾಯಿ ಬಾಡಿಗೆ ನೀಡಿ ಬೇರೆಯವರಿಂದ 15-20 ಸಾವಿರ ಬಾಡಿಗೆ ವಸೂಲಿ ಮಾಡಿ ಭರ್ಜರಿ ಕಮಾಯಿ ಮಾಡುತ್ತಿದ್ದಾರೆ.
ನಗರದ ಹೃದಯ ಭಾಗವಾಗಿರುವುದರಿಂದ ಈ ಕ್ಲಾಥ್ ಮಾರ್ಕೇಟ್ ಸುತ್ತಲಿನ ಪ್ರದೇಶದಲ್ಲಿ ಕನಿಷ್ಠ 20,000 ವರೆಗೆ ಬಾಡಿಗೆ ಇದೆ. ಇನ್ನು ಲೀಜ್ ಪಡೆದವರೆಲ್ಲ ಬಡ ವ್ಯಾಪಾರಸ್ಥರೇನಲ್ಲ. ಎಲ್ಲರೂ ಕೋಟ್ಯಾಥಿಪತಿಗಳು. ಹೀಗಾಗಿ ಶ್ರೀಮಂತರ ಸಿರಿತನ ಎಂಜಲು ಕಾಸು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಾಯಿಗೆ ಬೀಗ ಹಾಕಿದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕಿಡಿಕಾರಿದ್ದಾರೆ.
ನಗರಸಭೆ, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ನಗರಸಭೆ ಖಜಾನೆಗೆ ಕೋಟಿ ಕೋಟಿ ಹಾನಿಯಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿ ಲೀಜ್ ನೀಡುವಲ್ಲಿ ಭಾರಿ ಗೋಲಮಾಲ್ ಮಾಡಿದ್ದಾರೆ. ಒಳ ಒಪ್ಪಂದ ಮಾಡಿಕೊಂಡು ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡಿ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಇದೆ. ಆದರೆ ಈ ನಗರಸಭೆಗೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರನ್ನು ಆಡಳಿತಾಧಿಕಾರಿಗಳನ್ನಾಗಿ ಸರಕಾರ ನೇಮಿಸಿದೆ.
ಇಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಜಿಲ್ಲಾಧಿಕಾರಿಗಳ ಗಮನಕ್ಕೂ ಇದೆ. ಯಾಕೆಂದರೆ ಇಲ್ಲಿನ ಭ್ರಷ್ಟಾಚಾರದ ಹಿನ್ನಲೆ ನಗರಸಭೆ ಆಯುಕ್ತ ರಮೇಶ್ ಜಾಧವ್ ಮತ್ತು ಇತರೆ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದೇ ವಿಚಾರವಾಗಿ ರಮೇಶ್ ಜಾಧವ್ ಅವರಿಗೆ ದೀರ್ಘ ರಜೆ ಮೇಲೆ ಮನೆಗೆ ಕಳಿಸಲಾಗಿದೆ. ಆದರೆ ಸದ್ಯ ರಮೇಶ್ ವಟಗಲ್ ಎನ್ನುವ ಪ್ರಭಾವಿಯನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಆದರೆ ಇವರು ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನುತ್ತಿದ್ದಾರೆ.
ಈ ಬಗ್ಗೆ ಗದಗ ಡಿಸಿ ಸುಂದರೇಶಬಾಬು ಅವರನ್ನು ಪ್ರಶ್ನೆ ಮಾಡಿದರೆ ಹೌದು ಇದು ಬಹಳ ದಿನದಿಂದ ಹೀಗೆ ಇದೆ. ಇದನ್ನು ಪರಿಶೀಲನೆ ಮಾಡುತ್ತೇನೆ. ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು 2017-18 ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದ್ಯ ಇರುವ ವ್ಯಾಪಾರಸ್ಥರಿಗೆ ಲೀಜ್ ಮುಂದುವರೆಸಲು ಠರಾವ್ ಮಾಡಲಾಗಿತ್ತು. ಇಗಿರುವ ವ್ಯಾಪಾರಸ್ಥರು ಸಣ್ಣ ವ್ಯಾಪಾರಸ್ಥರಾಗಿರುವುದರಿಂದ ಈ ವ್ಯಾಪರದಿಂದಲೇ ಬದುಕು ಕಟ್ಟಿಕೊಂಡಿದ್ದಾರೆಂದು ಠರಾವ್ನಲ್ಲಿ ಹೇಳಲಾಗಿತ್ತು. ಆದರೆ ನಗರಸಭೆಯ ಠರಾವ್ ಅನ್ನು ಪೌರಾಡಳಿತ ನಿರ್ದೇಶನಾಲಯ ತಳ್ಳಿ ಹಾಕಿತ್ತು.
ಪೌರಾಡಳಿತದ ಅಧಿನಿಯಮ 1999 ನಿಯಮ 2000 ರಂತೆ ಬಹಿರಂಗ ಹರಾಜ್ ಮೂಲಕವೇ ಲೀಜ್ ಕೊಡಬೇಕು ಎಂದು ಸ್ಪಷ್ಟ ಆದೇಶ ನೀಡಿತು. ಈ ಆದೇಶ ಬಂದು ನಾಲ್ಕು ವರ್ಷವಾದರೂ ಮಳಿಗೆಗಳು ಖಾಲಿ ಮಾಡಿಸುವ ಗೋಜಿಗೆ ಹೋಗಿಲ್ಲ. ಮಳಿಗೆಗಳು ಖಾಲಿ ಮಾಡಿದರೆ ಎಲ್ಲ ಅಧಿಕಾರಿಗಳ ಜೇಬಿಗೆ ಬೀಳುವ ಆದಾಯಕ್ಕೆ ಖೋತಾ ಆಗುತ್ತದೆ ಎಂದು ಸುಮ್ಮನಿದ್ದಾರೆ ಎಂಬ ಆರೋಪವಿದೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ:
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ; ಮತದಾರರ ಪಟ್ಟಿಯಲ್ಲಿ ತಮ್ಮನ್ನು ಸೇರಿಸಿಲ್ಲವೆಂದು ಸ್ಥಳೀಯ 1,540 ನಿವಾಸಿಗಳಿಂದ ಪ್ರತಿಭಟನೆ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಸ್ಮಾರ್ಟ್ ಯೋಜನೆ; ನಗರದಲ್ಲಿ ಹೆಚ್ಡಿಪಿಇ ಮೂತ್ರಿ ಅಳವಡಿಸಲು ನಿರ್ಧಾರ