ಗದಗ: ಆತ ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಅವನನ್ನು ಕಂಡ್ರೆ ಸಾಕು ಕ್ರಿಮಿನಲ್ಗಳು ಗಢಗಢ ನಡುಗುತ್ತಿದ್ದರು. ಸಾಹಸ ಮತ್ತು ಚಾಕಚಕ್ಯತೆಗೆ ಹೆಸರು ಮಾಡಿದ್ದ. ಆದ್ರೆ ಆತನನ್ನು ಕಳೆದುಕೊಂಡು ಆ ಜಿಲ್ಲೆಯ ಖಾಕಿ ಪಡೆ ದುಃಖದಲ್ಲಿದೆ.
ಬಾರದ ಲೋಕಕ್ಕೆ ಪ್ರಯಾಣಿಸಿದ ಱಂಬೋ:
ಅಂದಹಾಗೇ ಶ್ವಾನದ ಹೆಸರು ಱಂಬೋ. ಗದಗ ಜಿಲ್ಲೆ ಪೊಲೀಸ್ ಇಲಾಖೆಯ ಅಚ್ಚು ಮೆಚ್ಚಿನ ಶ್ವಾನ. ಆದ್ರೆ ಈ ಧೀರ ಇಂದು ನಮ್ಮ ಜೊತೆ ಇಲ್ಲ, ಹೃದಯಾಘಾತದಿಂದ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾನೆ. ಈ ಱಂಬೋ ಅದೆಷ್ಟೋ ಅಪರಾಧ ಕೃತ್ಯಗಳನ್ನ ಬೇಧಿಸಿದ್ದಾನೆ. ಜಿಲ್ಲೆಯಲ್ಲಿ ಕಳ್ಳತನ, ದರೋಡೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದಂತೆ ಪೊಲೀಸ್ ವಾಹನದಲ್ಲಿ ಸ್ಥಳಕ್ಕೆ ಹೋಗತ್ತಿದ್ದ ಈ ಱಂಬೋ, ಅಪರಾಧಿಗಳನ್ನು ಹಿಡಿಯೋಕೆ ಸಹಾಯ ಮಾಡುತ್ತಿದ್ದ. ಆರೋಪಿಗಳು ಹೋದ ಹಾದಿಯಲ್ಲೇ ಹೋಗಿ ಅವರ ಸುಳಿವು ನೀಡುತ್ತಿತ್ತು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:
ಆದ್ರೆ ಈಗ ಱಂಬೋನನ್ನು ಕಳೆದುಕೊಂಡ ಪೊಲೀಸ್ ಇಲಾಖೆ ದುಃಖದಲ್ಲಿ ಮುಳುಗಿದೆ. ಬೆಟಗೇರಿಯ ಪೊಲೀಸ್ ವಸತಿಗೃಹದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಱಂಬೋ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗಲಿದ ಸಹದ್ಯೋಗಿಗೆ ಹೂಗುಚ್ಛ ವಿಟ್ಟು ಅಂತಿಮ ವಿದಾಯ ಹೇಳಿದರು.
11 ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಣೆ:
ಜುಲೈ 1 2008ರಂದು ಹುಟ್ಟಿದ ಈ ಱಂಬೋ ಗದಗ ಪೊಲೀಸ್ ಇಲಾಖೆಯ ಹೆಮ್ಮೆಯ ಪುತ್ರನಾಗಿದೆ ಬೆಳೆದ. ಜನವರಿ 2009 ರಂದು ಪೊಲೀಸ್ ಸೇವೆಗೆ ಭರ್ತಿಯಾಗಿದ್ದ ಡಾಬರ್ ಮನ್ ತಳಿಯ ಱಂಬೋ ಬರೋಬ್ಬರಿ 10 ತಿಂಗಳ ಪೊಲೀಸ್ ತರಬೇತಿ ಬಳಿಕ 2009 ರಿಂದ ಸತತ 2020 ರ ವರೆಗೆ ಅಂದರೆ 11 ವರ್ಷ 6 ತಿಂಗಳು ಕಾಲ ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾನೆ. 11 ವರ್ಷ 6 ತಿಂಗಳಲ್ಲಿ ಬರೋಬರಿ 190 ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಈ ಱಂಬೋ ಪ್ರಮುಖ ಪಾತ್ರವಹಿಸಿದ್ದಾನೆ.
Published On - 2:09 pm, Mon, 3 February 20