ಗದಗ, ಆ.24: ಜಿಲ್ಲೆಯಲ್ಲಿ ಹಗಲು ರಾತ್ರಿ ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ (Soil Mafia) ಸಾಗಿದೆ. ಆದರೆ, ಗಣಿ ಇಲಾಖೆ ಮಾತ್ರ ಡೋಂಟ್ ಕೇರ್ ಅಂತಿದೆ. ಅನುಮತಿ ಪಡಿಯುವುದು ಒಂದು ಸರ್ವೇಯಲ್ಲಿ, ಮಣ್ಣು ಹಾಕುವುದು ಇನ್ನೊಂದು ಸರ್ವೇ ನಂಬರ್ ಜಮೀನಿನಲ್ಲಿ. ಹೌದು, ರೈತರಿಗೆ ಹಣದ ಆಮೀಷವೊಡ್ಡಿ ಜಮೀನುಗಳಲ್ಲಿ ಅಪಾರ ಮಣ್ಣನ್ನು ಲೂಟಿ ಮಾಡುತ್ತಿದ್ದಾರೆ. ಇವರು ಜಮೀನು ಸಮತಟ್ಟು ಎಂದು ಗಣಿ ಇಲಾಖೆಯಿಂದ ಅನುಮತಿ ಪಡೆದು, 20ರಿಂದ30 ಅಡಿ ಆಳ ತೆಗೆದು, ಗಣಿ ಇಲಾಖೆ ನಿಯಮ ಗಾಳಿಗೆ ತೂರಿ ಗದಗ(Gadag) ತಾಲೂಕಿನಲ್ಲಿ ಭಾರಿ ಮಣ್ಣು ಗಣಿಗಾರಿಕೆ ಮಾಫಿಯಾ ನಡೆಯುತ್ತಿದೆ.
ಹೌದು, ಲಕ್ಕುಂಡಿ ಗ್ರಾಮದಲ್ಲಿ ವಿರುಪಾಕ್ಷಗೌಡ ಪಾಟೀಲ್ ಎಂಬುವವರಿಗೆ ಸೇರಿದ 1 ಎಕರೆ 20 ಗುಂಟೆ ಇದೆ. ಈ ಜಮೀನನ್ನು ಸಮತಟ್ಟು ಅಂದರೆ ಅಭಿವೃದ್ಧಿ ಮಾಡುವುದಾಕ್ಕಾಗಿ ಗಣಿ ಇಲಾಖೆ ಅನುಮತಿ ನೀಡಿದೆ. ಆದ್ರೆ, ಗಣಿ ಇಲಾಖೆ ನಿಯಮ ಉಲ್ಲಂಘಿಸಿ 20-30 ಅಡಿ ಆಳವಾಗಿ ಅಪಾರ ಪ್ರಮಾಣದಲ್ಲಿ ಮಣ್ಣು ಹೆಕ್ಕಿ ವಿಂಡ್ ಕಂಪನಿಗಳಿಗೆ ಪೂರೈಕೆ ಮಾಡಲಾಗಿದೆಯಂತೆ. ರೈತರ ಹೆಸರಿನಲ್ಲಿ ಅನುಮತಿ ಪಡೆದು ವಿಂಡ್ ಕಂಪನಿಗಳು ತಮಗೆ ಬೇಕಾದ ರೀತಿಯಲ್ಲಿ ಲೂಟಿ ಮಾಡಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಈ ಕುರಿತು ಸ್ಥಳೀಯರು ಗಣಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ರೂ, ಯಾರೂ ಇತ್ತ ತಿರುಗಿ ನೋಡಿಲ್ಲ ಎಂದು ಜನರು ಕಿಡಿಕಾರಿದ್ದಾರೆ. ಇನ್ನೂ ಗಣಿ ಇಲಾಖೆ ನೀಡಿದ ಗಣಿಗಾರಿಕೆ ಆದೇಶದಲ್ಲೂ ಸಾಕಷ್ಟು ಗೊಂದಲವಾಗಿದೆ. ಗಣಿಗಾರಿಕೆ ಆದೇಶದಲ್ಲಿ ಸರ್ವೇ ನಂಬರ್ 215/3ಎ 1 ಎಕರೆ 20 ಗುಂಟೆ ಎಂದು ನಮೂದಿಸಲಾಗಿದೆ. ಆದ್ರೆ, ಅದೇ ಗಣಿ ಇಲಾಖೆ ನೀಡಿದ ಬುಕ್ನಲ್ಲಿ ಸರ್ವೇ ನಂಬರ್ 251/8ಎ ಇದೆ. ಅನುಮತಿ ಪಡೆದ ಸರ್ವೇ ನಂಬರ್ ನ ಜಮೀನೇ ಬೇರೆ, ಇಲ್ಲಿ ಲೂಟಿ ಮಾಡುವ ಜಮೀನೇ ಬೇರೆ. ಅಧಿಕಾರಿಗಳೇ ದಂಧೆಕೋರರಿಗೆ ದಾರಿ ತೋರಿಸ್ತಾಯಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ಕೆಲ ಗಣಿ ಇಲಾಖೆ ಅಧಿಕಾರಿಗಳು 5-10 ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ. ಈ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಾಂತರ ತೆರಿಗೆ ವಂಚನೆ ಆಗ್ತಾಯಿದೆ. ಆದ್ರೆ, ಅಧಿಕಾರಿಗಳ ಖಜಾನೆ ಮಾತ್ರ ಹೆಚ್ಚಾಗುತ್ತಿದೆ ಎಂದು ಗದಗ ಜನರು ಕಿಡಿಕಾರಿದ್ದಾರೆ.
ಲಕ್ಕುಂಡಿ ಬಳಿ ಹಳ್ಳದ ನೈಸರ್ಗಿಕ ಹರಿವು ಅದ್ವಾನ ಮಾಡಿದ್ದಾರೆ. ಇಷ್ಟೇಲ್ಲ ಅಕ್ರಮ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಗೊತ್ತಿದ್ರೂ ಯಾರೂ ಕ್ರಮ ಕೈಗೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿಯೇ ಗದಗ ಜಿಲ್ಲೆ ಅಕ್ರಮ ದಂಧೆಕೋರರಿಗೆ ಸ್ವರ್ಗವೆಂದು ಗದಗ ಜನರು ಹೇಳುತ್ತಿದ್ದಾರೆ. ಇನ್ನು ಸಚಿವ ಎಚ್.ಕೆ ಪಾಟೀಲ್ ಅಕ್ರಮ ದಂಧೆಗೆ ಸಾಥ್ ನೀಡುವಂಥವರಲ್ಲ. ಆದ್ರೆ, ಅವರ ಕ್ಷೇತ್ರದಲ್ಲಿ ಅತೀ ಹೆಚ್ಚು ಅಕ್ರಮ ಮಣ್ಣು ಗಣಿಗಾರಿಕೆ ನಡೀತಾಯಿದೆ. ಆದರೂ ಯಾಕೇ ಮೌನವಾಗಿದ್ದಾರೆ ಎನ್ನುವ ಪ್ರಶ್ನೆ ಜಿಲ್ಲೆಯ ಜನರಿಗೆ ಕಾಡುತ್ತಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ