
ಬೆಂಗಳೂರು/ಗದಗ, ಅಕ್ಟೋಬರ್ 02: ಸಿಗರೇಟ್ ಹಣ ಬಾಕಿ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ಗದಗ (Gadag) ಜಿಲ್ಲೆ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ನಡೆದಿದೆ. ಘಟನೆಯಲ್ಲಿ ಒಟ್ಟು ಆರು ಜನರಿಗೆ ಗಾಯಗಳಾಗಿದ್ದು, ಗದಗ ಜಿಮ್ಸ್ ಆತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹೊಡೆದಾಟದ ವೇಳೆ ಮುಸ್ಲಿಂ ವ್ಯಕ್ತಿಗೆ ಸೇರಿದ ಪೆಟ್ಟಿಗೆ ಅಂಗಡಿ ಧ್ವಂಸಗೊಂಡಿದೆ.
ಅಬ್ದುಲ್ ಘನಿ ಮಾಲಕತ್ವದ ಬೀಡಾ ಅಂಗಡಿಯಲ್ಲಿ ಸಿಗರೇಟ್, ಟೀಯ 2,500 ರೂಪಾಯಿ ಹಣವನ್ನ ದೇವಪ್ಪ ಪೂಜಾರ್ ಎಂಬಾತ ಬಾಕಿ ಉಳಿಸಿಕೊಂಡಿದ್ದ. ಇಂದು ಆ ಅಂಗಡಿ ಬದಲು ಪಕ್ಕದ ಶಾಪ್ ಗೆ ದೇವಪ್ಪ ತೆರಳಿದ್ದು, ಆ ವೇಳೆ ಬಾಕಿ ಹಣ ಕೊಡುವಂತೆ ಅಬ್ದುಲ್ ಕೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಏಟು ತಿಂದಿದ್ದ ದೇವಪ್ಪ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಸಹಚರರು ಗಲಾಟೆ ಮಾಡಿದ್ದು, ಪೆಟ್ಟಿಗೆ ಅಂಗಡಿ ಧ್ವಂಸ ಮಾಡಿದ್ದಾರೆ. ಇದರಿಂದಾಗಿ ಮುಸ್ಲಿಂ ಯುವಕರೂ ರೊಚ್ಚಿಗೆದ್ದಿದ್ದು, ದೇವಪ್ಪ ಸ್ನೇಹಿತರಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ ಎನ್ನಲಾಗಿದೆ. ಮಾರಾಮಾರಿ ವೇಳೆ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್, ವಿರೂಪಾಕ್ಷ ಹಿರೇಮಠ ಎಂಬವರಿಗೆ ಗಾಯಗಳಾಗಿವೆ.
ಇದನ್ನೂ ಓದಿ: ನೀರಿನ ಟ್ಯಾಂಕ್ನಲ್ಲಿ ಕೈಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ
ಘಟನೆ ಬಗ್ಗೆ ಎರಡೂ ಕಡೆಯವರಿಂದ ಪರಸ್ಪರ ಆರೋಪಗಳು ಕೇಳಿಬಂದಿವೆ. ಹಿಂದೂ ಯುವಕರು ಅನ್ನೋ ಕಾರಣಕ್ಕೆ ಹೊಡೆದಿದ್ದಾರೆ ಅಂತಾ ಒಂದು ಗುಂಪು ಆರೋಪಿಸಿದ್ದರೆ, ಹಿಂದೂ ಯುವಕರೇ ಹಲ್ಲೆ ಮಾಡಿದ್ದು ಎಂದು ಅಬ್ದುಲ್ ಪತ್ನಿ ಮುಮ್ತಾಜ್ ದೂರಿದ್ದಾರೆ. ಘಟನೆಯಿಂದಾಗಿ ಬಡಾವಣೆಯಲ್ಲಿ ಕೆಲ ಕಾಲ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ಪೊಲೀಸರ ಮಧ್ಯ ಪ್ರವೇಶದಿಂದಾಗಿ ತಿಳಿಗೊಂಡಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬಾಕಿ ಹಣ ಕೊಡದ ಕಾರಣ ಹಣ್ಣಿನ ವ್ಯಾಪಾರಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ಮೊಹಮ್ಮದ್ ರೆಹಮ್ಮತ್, ಜುಬೈರ್ ಎಂಬಾತನಿಂದ ಹೋಲ್ ಸೆಲ್ ಹಣ್ಣು ಪಡೆದು ವ್ಯಾಪಾರ ಮಾಡುತ್ತಿದ್ದ. ಈವರೆಗೆ 1.25 ಲಕ್ಷ ಹಣವನ್ನು ನೀಡಿದ್ದರೂ ಬಾಕಿ ಹಣಕ್ಕಾಗಿ ಮನೆ ಬಳಿ ತೆರಳಿ ಜುಬೈರ್ ಗಲಾಟೆ ಮಾಡಿದ್ದಾನೆ. ಈ ವೇಳೆ ಜುಬೈರ್ ಹಾಗೂ ಹಿದಾಯತ್ ಎಂಬವರು ಮೊಹಮ್ಮದ್ ರೆಹಮ್ಮತ್ ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ. ಹೊಟ್ಟೆಗೆ ಇರಿದ ಚಾಕು ಬೆನ್ನಿನಿಂದ ಹೊರಬಂದಿದ್ದು, ಗಾಯಾಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.