ಗದಗ: ಸರ್ಕಾರಿ ಆಸ್ಪತ್ರೆ (Government Hospital)ಹೆರಿಗೆ ವಾರ್ಡ್ನಲ್ಲಿ ಗರ್ಭಿಣಿ ಮಹಿಳೆಯ ನರಳಾಟ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ 3 ಗಂಟೆ ನರಳಾಡಿದರೂ ವೈದ್ಯರು, ಸಿಬ್ಬಂದಿಗಳ ಬೇಜವಾಬ್ದಾರಿ. ಡ್ಯೂಟಿ ಡಾಕ್ಟ್ರರ್ ಆಸ್ಪತ್ರೆಯಲ್ಲಿ ಇಲ್ಲದೇ ಇರೋದರಿಂದ ಗರ್ಭಿಣಿ ನರಳಾಟಕ್ಕೆ ಕಾರಣ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ. ಹೌದು ಈ ಅಮಾನವೀಯ ಘಟನೆ ನಡೆದಿದ್ದು, ಗದಗ(Gadag) ನಗರದ ಕೆಸಿ ರಾಣಿ ರಸ್ತೆಯ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ. ಸರ್ಕಾರ ಗದಗ ಬೆಟಗೇರಿ ಅವಳಿ ನಗರದ ಜನರಿಗೆ ಅನುಕೂಲವಾಗಲಿ ಎಂದು ಕೋಟಿ ವೆಚ್ಚದಲ್ಲಿ ಹೈಟೆಕ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿದೆ. ವೈದ್ಯರು ಸೇರಿ ಎಲ್ಲ ಸೌಲಭ್ಯ ಕೂಡ ಇದೆ. ಆದ್ರೆ, ಗರ್ಭಿಣಿ, ಬಾಣಂತಿಯರಿಗೆ ಮಾತ್ರ ಈ ಆಸ್ಪತ್ರೆ ನರಕವಾಗಿದೆ.
ಗದಗ ಜಿಮ್ಸ್ ಆಸ್ಪತ್ರೆ ಅಡಿಯಲ್ಲಿ ಬರುವ ಈ ಆಸ್ಪತ್ರೆ ವೈದ್ಯರಿಗೆ ಹೇಳುವವರು ಕೇಳುವವರೂ ಯಾರೂ ಇಲ್ಲದಂತಾಗಿದೆ. ಹೌದು ಇಲ್ಲಿ ಗರ್ಭಿಣಿಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂದು(ಏ.21) ಬೆಳಗ್ಗೆ 6.30 ಸುಮಾರಿಗೆ ಗದಗ ನಗರದ ಬಸೀರಾ ಮಹೆಬೂಬ್ ಸಾಬ್ ಜಮಾದಾರ್ ಎನ್ನುವ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಗದಗಿನ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಗರ್ಭಿಣಿ ಮಹಿಳೆ ತೀವ್ರ ನರಳಾಡಿದ್ದಾಳೆ. ಹೆರಿಗೆಗೆ ಬಂದ ಮಹಿಳೆ ಗರ್ಭದಿಂದ ನೀರು ಹೋಗುತ್ತಿದ್ದರೂ ಚಿಕಿತ್ಸೆ ನೀಡದೇ ಡ್ಯೂಟಿ ಡಾಕ್ಟರ್ ನಿರ್ಲಕ್ಷ್ಯ ತೋರಿದ್ದಾರೆ.
ಇದನ್ನೂ ಓದಿ:Delhi: ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು
ಬಳಿಕ ಸ್ಥಿತಿ ಗಂಭೀರ ಇದೆ ಎಂದು ಗದಗ ಜಿಮ್ಸ್ ಆಸ್ಪತ್ರೆಗೆ ಕರೆದ್ಯೊಯುವಂತೆ ಹೇಳಿದ್ದಾರೆ. ನಂತರ ಆ್ಯಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆ ಕಳುಹಿಸುವಂತೆ ಸಂಬಂಧಿಕರು ಮನವಿ ಮಾಡಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ಮೂರು ಆ್ಯಂಬುಲೆನ್ಸ್ ಗಳು ಇದ್ದರೂ ಆ್ಯಂಬುಲೆನ್ಸ್ ಇಲ್ಲ. ಎಲ್ಲವೂ ಕೆಟ್ಟು ಹೋಗಿವೆ ಎಂದಿದ್ದಾರೆ. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಬಸೀರಾ ಎಂಬ ಗರ್ಭಿಣಿ ಮಹಿಳೆಯ ಮೊದಲು ಹೆರಿಗೆಯ ಸಂದರ್ಭದಲ್ಲಿ ಇದೇ ಆಸ್ಪತ್ರೆಗೆ ಕರೆತಂದಿದ್ರು. ಆಗಲೂ ಇಲ್ಲಿನ ವೈದ್ಯರು ನಿರ್ಲಕ್ಷ್ಯ ತೋರಿ ಮಗು ಬಲಿಯಾಗಿದೆಯಂತೆ. ಈಗಲೂ ವೈದ್ಯರು ಮತ್ತೆ ನಿರ್ಲಕ್ಷ್ಯ ತೋರಿದ್ದಾರೆ ಅಂತ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಇವತ್ತು ಸುಮಾರು ಮೂರು ಗಂಟೆಗಳ ಕಾಲ ಗರ್ಭಿಣಿ ಮಹಿಳೆಯ ಗೋಳಾಟ ಇಡೀ ಆಸ್ಪತ್ರೆಯ ವಿವಿಧ ರೋಗಿಗಳ ಸಂಬಂಧಿಕರು ರೊಚ್ಚಿಗೆ ಏಳುವಂತೆ ಮಾಡಿತ್ತು. ಆದರೂ ಸಿಬ್ಬಂದಿ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.
ಎಲ್ಲಿ ಏನ್ ಆಗುತ್ತೋ ಆತಂಕ, ಭಯದಲ್ಲಿ ಮುಂದಿನ ಆಸ್ಪತ್ರೆಗೆ ಹೋಗಲು ಆಗದೆ ಸಂಬಂಧಿಕರು ತೀವ್ರ ಪರದಾಡಿದ್ದಾರೆ. ಸುಮಾರು 3ಗಂಟೆ ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡು ವೈದ್ಯರು, ಸಿಬ್ಬಂಧಿಗಳ ಕಲ್ಲು ಮನಸ್ಸುಗಳು ಕರಗಿಲ್ಲ. ಈ ವಿಷಯ ಕುಟುಂಬಸ್ಥರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಟಿವಿ9 ಆಸ್ಪತ್ರೆಗೆ ಎಂಟ್ರಿ ಆಗುತ್ತಿದ್ದಂತೆ ಓಡೋಡಿ ಬಂದ ವೈದ್ಯರು ಹೆರಿಗೆ ಮಾಡಿಸಿದ್ದಾರೆ ಎಂದು ಗರ್ಭಿಣಿ ತಾಯಿ ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿ:ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ, 600 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕ ಕಳ್ಳಿ
ಈ ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಅಮಾನವೀಯ ವರ್ತನೆ ಗದಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ದರೂ ಕಡಿವಾಣ ಹಾಕುವ ಗಂಭೀರತೆ ಜಿಮ್ಸ್ ಆಡಳಿತಕ್ಕೆ ಇಲ್ಲದಂತಾಗಿದೆ. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ