
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ನೊಂದ ದಂಪತಿಗಳಾದ ಸವಿತಾ ಹಾಗೂ ಸಂತೋಷ ನಾಯಕ ಅವರ ಏಳು ತಿಂಗಳ ನವಜಾತ ಶಿಶುವಿಗೆ ಗದಗ ಜಿಮ್ಸ್ ಆಸ್ಪತ್ರೆಯ ವೈದ್ಯರು ಉದರ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಗದಗ ಜಿಮ್ಸ್. ಏಳು ತಿಂಗಳ ನವಜಾತ ಶಿಶು ಹಾಲು ಸೇವನೆ ಮಾಡಿದರು ಹಾಲು ಹೊಟ್ಟೆ ಒಳಗೆ ಹೋಗುವ ಮುನ್ನವೇ ರಕ್ತ ಮಿಶ್ರಿತ ಭೇದಿಯನ್ನು ಮಾಡಿಕೊಳ್ಳುತ್ತಿತ್ತು. ಗದಗ ಜಿಮ್ಸ್ ಆಸ್ಪತ್ರೆಗೆ ಬಂದ್ ಕೂಡಲೇ ಇಲ್ಲಿನ ವೈದ್ಯರು ಹತ್ತಾರು ತಪಾಸಣೆ ಮಾಡಿದಾಗ ಕರುಳಿನ ಸಮಸ್ಯೆಯಾಗಿದ್ದು, ಸಣ್ಣ ಕರುಳು ಹಾಗೂ ದೊಡ್ಡ ಕರಳು ಸುತ್ತು ಹಾಕಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ನಂತರ ಪೋಷಕರು ಪರವಾನಗಿ ಪಡೆದುಕೊಂಡ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಕೆಲವು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನವಜಾತ ಶಿಶು ಆರೋಗ್ಯವಾಗಿದ್ದು, ಈವಾಗ ಸುಧಾರಣೆಯಾಗುತ್ತಿದೆ. ಬೆಡ್ ಮೇಲೆ ನಗು ನಗುತಾ ನಲಿಯುತ್ತಿದೆ. ಇದೊಂದು ಅಪರೂಪದ ಚಿಕಿತ್ಸೆ, ನಮ್ಮ ಜಿಮ್ಸ್ ಆಸ್ಪತ್ರೆಯಲ್ಲಿ ಯಾರು ಮಾಡಿರಲ್ಲಿಲ್ಲ, ಮೊದಲ ಬಾರಿಗೆ ಯಶಸ್ವಿಯಾಗಿದ್ದೇವೆ ಎಂದು ವೈದರು ಹೇಳುತ್ತಿದ್ದಾರೆ.
ತುರ್ತು ಚಿಕಿತ್ಸೆ ನಡೆಸದೇ ಇದ್ದರೆ ಕರುಳಿನ ಗ್ಯಾಂಗ್ರೀನ್ ಆಗುವ ಸಂಭವವಿತ್ತು. ಮಗುವಿನ ಪ್ರಥಮ ಚಿಕಿತ್ಸೆಯ ನಂತರ ಮಗುವಿಗೆ ಉದರ ಶಸ್ತ್ರ ಚಿಕಿತ್ಸೆಯನ್ನು, ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಕರಾದ ಡಾ. ಜಯರಾಜ್ ಪಾಟೀಲ್, ವಿನಯಕುಮಾರ ತೇರದಾಳ ಶಸ್ತ್ರಚಿಕಿತ್ಸಕರಾದ ಡಾ.ಜ್ಯೋತಿ ಕರೆಗೌಡರ್, ಡಾ: ಜಮೀರ್, ಅರವಳಿಕೆ ತಜ್ಞರಾದ ಡಾ. ವಿನಾಯಕ, ಡಾ. ಪ್ರೀಯಾ, ಅವರ ತಂಡ ಯಶಸ್ವಿಯಾಗಿ ಆಪರೇಷನ್ ಮಾಡಿದ್ದಾರೆ.
ಅಷ್ಟೊಂದು ಅತ್ಯಾಧುನಿಕ ಸೌಕರ್ಯ ಇಲ್ಲದಿದ್ದರು, ನವಜಾತ ಶಿಶುವಿನ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಮೊದಲೇ ಬಡ ಕುಟುಂಬದ ದಂಪತಿಗಳು ಮಗುವಿನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯ ಖರ್ಚು ಮಾಡಬೇಕಾಗಿತ್ತು. ವೈದ್ಯರು ಒಂದು ಪೈಸೆ ಹಣ ಇಲ್ಲದೆ ನನ್ನ ಮಗುವನ್ನು ಬದುಕಿಸಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಮಗುವಿನ ತಂದೆ ತಾಯಿ ಹೇಳುತ್ತಾರೆ.
ಇದನ್ನೂ ಓದಿ:ಗದಗ: ರಸ್ತೆ ಬದಿ ಜೀವಂತ ಶಿಶು ಪತ್ತೆ, ಕಂದಮ್ಮನ ರಕ್ಷಿಸಿದ ಶಿರಹಟ್ಟಿ ತಹಶೀಲ್ದಾರ್
ನವಜಾತ ಶಿಶುವಿನ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವೇ, ಅತ್ಯಾಧುನಿಕ ಸೌಕರ್ಯ ಇರುವ ಹೈಟೆಕ್ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆದರೆ ಗದಗದ ಜಿಮ್ಸ್ ಆಸ್ಪತ್ರೆಯ ವೈದ್ಯರು ನಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವ ಹಾಗೇ ಆಪರೇಷನ್ ಮಾಡಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಜಿಮ್ಸ್ ವೈದ್ಯರ ಕಾರ್ಯಕ್ಕೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ