ಗದಗ: ಕೆಎಸ್ಆರ್ಟಿಸಿ ಬಸ್ (KSRTC Bus) ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಗದಗ (Gadag) ತಾಲೂಕಿನ ಹಿರೇಕೊಪ್ಪ ಹಾಗೂ ಹುಯಿಲಗೋಳ ಗ್ರಾಮದ ಮಧ್ಯೆ ನಡೆದಿದೆ. ಗದಗ ನಗರದಿಂದ ಬಳಗಾನೂರ ಗ್ರಾಮಕ್ಕೆ ಬಸ್ ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಸ್ ಪಲ್ಟಿ ಆಗುತ್ತಿದ್ದಂತೆ ಬಸ್ನಿಂದ ಜಿಗಿದು ಚಾಲಕ ಪರಾರಿಯಾಗಿದ್ದಾನೆ. ಗದಗ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪಘಾತ ಭಯಾನಕ ಘಟನೆ ಬಿಚ್ಚಿಟ್ಟ ಅಜ್ಜಿ
ಚಾಲಕ ಹುಯಿಲಗೋಳ ಗ್ರಾಮದಲ್ಲೇ ಬಸ್ ಸಮಸ್ಯೆ ಅಂತ ನಿಲ್ಲಿಸಿದ್ದನು. ಅಲ್ಲೇ ನಿಲ್ಲಿಸಿದ್ದರೇ ಒಳ್ಳೆಯದಿತ್ತು. ಆದರೆ ಚಾಲಕ ಮತ್ತೆ ಸಮಸ್ಯೆ ಇದ್ದ ಬಸ್ ಚಲಾಯಿಸಿ ಅಪಘಾತಕ್ಕೀಡು ಮಾಡಿದ್ದಾನೆ. ಸ್ವಲ್ಪದರಲ್ಲೇ ಬಚಾವ್ ಆದ್ವಿ. ಇನ್ನೂ ಸ್ವಲ್ಪ ಮುಂದೆ ಹೋಗಿದ್ದರೇ ಬಸ್ ಹಳ್ಳಕ್ಕೆ ಬಿಳ್ತಿತ್ತು ಎಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿ ಹೇಳಿದ್ದಾರೆ.
ಆಸ್ಪತ್ರೆಗೆ ಸಚಿವ ಸಿ ಸಿ ಪಾಟೀಲ್ ಹಾಗೂ ಮಾಜಿ ಸಚಿವ ಬಿ ಆರ್ ಯಾವಗಲ್ ಭೇಟಿ
ಘಟನೆಯಲ್ಲಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳದ ಕೂಡಲೆ ಗದಗ ಜಿಮ್ಸ್ ಆಸ್ಪತ್ರೆಗೆ ಸಚಿವ ಸಿ ಸಿ ಪಾಟೀಲ್ ಹಾಗೂ ಮಾಜಿ ಸಚಿವ ಬಿ ಆರ್ ಯಾವಗಲ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಎಕ್ಸಲ್ ಕಟ್ ಆಗಿ ಬಸ್ ಅಪಘಾತವಾಗಿದೆ. 18-20 ಪ್ರಯಾಣಿಕರಿಗೆ ಗಾಯವಾಗಿದೆ. ಓರ್ವ ಗಾಯಾಳುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 17 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಉಳಿದ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವಂತೆ ಜಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಬಸ್ ಅಪಘಾತ ಬಗ್ಗೆ ತನಿಖೆ ಸಾರಿಗೆ ಇಲಾಖೆ ಡಿಸಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Sun, 13 November 22