ಗದಗ: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆ! ಖಾಸಗಿ ಮೆಡಿಕಲ್ ಸ್ಟೋರ್​ಗೆ ಮುಗಿಬಿದ್ದ ಬಡರೋಗಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2023 | 4:20 PM

ಸರ್ಕಾರ ಕೋಟ್ಯಾಂತರ ಅನುದಾನ ನೀಡಿದ ಹಿನ್ನಲೆ ಈ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯದಿಂದ ಕೂಡಿದೆ. ಹೀಗಾಗಿ ಆ ಆಸ್ಪತ್ರೆ ಮೂರ್ನಾಲ್ಕು ಜಿಲ್ಲೆಯ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿದೆ. ಆದ್ರೆ, ಈಗ ಆ ಆಸ್ಪತ್ರೆಯಲ್ಲಿ ಸರಿಯಾದ ಔಷಧಿ ಇಲ್ಲದೇ ಬಡ ರೋಗಿಗಳು ಗೋಳಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಿಗುತ್ತೆ ಎಂದು ಬರುವ ಬಡ ರೋಗಿಗಳು ಈಗ ಕಂಗಾಲಾಗಿದ್ದಾರೆ. ಅಷ್ಟಕ್ಕೂ ಯಾವ ಆಸ್ಪತ್ರೆ ಅಂತೀರಾ? ಇಲ್ಲಿದೆ ನೋಡಿ.

ಗದಗ: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆ! ಖಾಸಗಿ ಮೆಡಿಕಲ್ ಸ್ಟೋರ್​ಗೆ ಮುಗಿಬಿದ್ದ ಬಡರೋಗಿಗಳು
ಗದಗ ಜಿಮ್ಸ್​ ಔಷಧಿಗಳಿಲ್ಲದೇ ರೋಗಿಗಳ ಪರದಾಟ
Follow us on

ಗದಗ, ನ.05: ಔಷಧಿ ಕೊರತೆಯಿಂದಲೇ ಕಳೆದ ತಿಂಗಳ ಮಹಾರಾಷ್ಟ್ರ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ದೊಡ್ಡ ದುರಂತವೇ ಸಂಭವಿಸಿದೆ. ಈ ದುರುಂತಕ್ಕೆ ಇಡೀ ದೇಶವೇ ಬೆಚ್ಚಿಹೋಗಿದೆ. ಹೀಗಿದ್ರೂ ಇನ್ನೂ ಸರ್ಕಾರಿ ಆಸ್ಪತ್ರೆ ಆಡಳಿತ ಮಂಡಳಿಗಳು ಎಚ್ಚೆತ್ತುಕೊಂಡಿಲ್ಲ. ಹೌದು, ಗದಗ (Gadag GIMS Hospital) ಜಿಮ್ಸ್ ಆಸ್ಪತ್ರೆಗೆ ಸರ್ಕಾರ  ಕೋಟ್ಯಾಂತರ ಅನುದಾನ ನೀಡುತ್ತಿದೆ. ಆದ್ರೂ ಈ ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ, ಪರದಾಟ, ಒದ್ದಾಟ ಮಾತ್ರ ನಿಲ್ಲುತ್ತಿಲ್ಲ. ಒಂದಿಲ್ಲೊಂದು ಯಡವಟ್ಟು, ಅದ್ವಾನಗಳಿಂದ ರಾಜ್ಯ ಮಟ್ಟದಲ್ಲಿ ಪದೇ ಪದೇ ಸುದ್ಧಿ ಆಗುತ್ತಿದೆ. ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ರೋಗಿಗಳು ಈಗ ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಔಷಧಿ ಸಿಗುತ್ತೆಂದು ಬಂದ ರೋಗಿಗಳು ಈಗ ವಿಲವಿಲ ಅಂತಿದ್ದಾರೆ. ಬಹುತೇಕ ರೋಗಿಗಳು ಔಷಧವನ್ನು ಖಾಸಗಿ ಔಷಧಿ ಅಂಗಡಿಯಲ್ಲಿ ಖರೀದಿ ಮಾಡುವಂತಾಗಿದೆ.

ರೋಗಿಗಳಿಗೆ ಸಂಬಂಧಿಸಿದ ವೈದ್ಯರು ಔಷಧಿ ಚೀಟಿ ಬರೆದುಕೊಡುತ್ತಾರೆ. ಅದರಂತೆ ರೋಗಿಗಳ ಜಿಮ್ಸ್ ಆಸ್ಪತ್ರೆ ಔಷಧಾಲಯಕ್ಕೆ ಹೋದರೆ, ಈ ಔಷಧಿ ನಮ್ಮಲ್ಲಿ ಇಲ್ಲ, ಹೊರಗಡೆ ಹೋಗಿ ಅಂತಿದ್ದಾರೆ. ಹೀಗಾಗಿ ರೋಗಿಗಳ ಅನಿವಾರ್ಯವಾಗಿ ಖಾಸಗಿ ಔಷಧ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಕಡಿಮೆ ದರದ ಔಷಧಿಗಳು ಜಿಮ್ಸ್ ಆಸ್ಪತ್ರೆಯಲ್ಲಿ ದೊರೆಯುತ್ತವೆ. ಆದ್ರೆ, ಕೆಲ ದುಬಾರಿ ಔಷಧಿ, ಇಂಜೆಕ್ಷನ್​ಗಳು ಸಿಗುತ್ತಿಲ್ಲ ಎಂದು ರೋಗಿಗಳು ಕಿಡಿಕಾರಿದ್ದಾರೆ. ಚರ್ಮ ರೋಗಿಯೊಬ್ಬ ಒಂದೊಂದು ಮುಲಾಮುಗೆ 300-400ರೂಪಾಯಿ ಕೊಟ್ಟು ಖಾಸಗಿಯಲ್ಲಿ ಖರೀದಿ ಮಾಡಿ ಗೋಳಾಡುತ್ತಿದ್ದಾನೆ. ಬಡವರು ಸರ್ಕಾರಿ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ, ಔಷಧಿ ಸಿಗುತ್ತೆ ಎಂದು ಬಂದ್ರೆ ಔಷಧಿಯೇ ಸಿಗುತ್ತಿಲ್ಲ. ಹಣ ಕೊಟ್ಟು ಖರೀದಿ ಮಾಡುವಂತ ಸ್ಥಿತಿ ಇದೆಯೆಂದು ಗೋಳಾಡುತ್ತಿದ್ದಾನೆ.

ಇದನ್ನೂ ಓದಿ:ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ನರಳಾಟ; ಪೊಲೀಸರೇ ಬಂದರೂ ನಿಮ್ಹಾನ್ಸ್ ವೈದ್ಯರು ಜಸ್ಟ್​ ಡೋಂಟ್​ ಕೇರ್!

ಗದಗ ಜಿಮ್ಸ್ ಯಡವಟ್ಟು ನಿಲ್ಲುತ್ತಿಲ್ಲ. ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದ್ರೂ ರೋಗಿಗಳ ಗೋಳು ಮಾತ್ರ ತಪ್ಪುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಔಷಧಿ ಸಿಗುತ್ತೆ ಎಂದು ಬಂದ ರೋಗಿಗಳಿಗೆ ಬರೆ ಎಳೆಯಲಾಗುತ್ತಿದೆ. ಜಿಮ್ಸ್ ಆಡಳಿತದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳ ಮುಸುಕಿನ ಗುದ್ದಾಟದಲ್ಲಿ ರೋಗಿಗಳ ವಿಲವಿಲ ಎನ್ನುವಂತಾಗಿದೆ. ಇನ್ನು ಈ ಕುರಿತು ಜಿಮ್ಸ್ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಡೆಂಟ್ ಡಾ. ರೇಖಾ ಅವ್ರನ್ನು ಕೇಳಿದ್ರೆ, ‘ನಮ್ಮ ಔಷಧಾಲಯದಲ್ಲಿ ಇದ್ದ ಔಷಧಿಗಳು ಮಾತ್ರ ಬರೆಯುವಂತೆ ವೈದ್ಯರಿಗೆ ಈಗಾಗಲೇ ಸೂಚಿಸಲಾಗಿದೆ. ಹೊರಗಡೆ ಮಾತ್ರೆ ಬರೆಯದಂತೆ ಲಿಖಿತವಾಗಿ ಹೇಳಲಾಗಿದೆ. ಆದ್ರೂ ಹೊರಗಡೆ ಬರೆದುಕೊಡುತ್ತಾರೆ ಎಂದರೆ, ನಿರ್ದೇಶಕರಿಗೆ ಕೇಳಬೇಕು. ಔಷಧಿ ಕೊರತೆ ಬಗ್ಗೆ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ನನ್ನ ಹಂತದಲ್ಲಿ ಏನೂ ಮಾಡಬೇಕು ಮಾಡಿದ್ದೇನೆ. ಮುಂದಿನದ್ದು ನಿರ್ದೇಶಕರದ್ದು ಎಂದು ಹೇಳುತ್ತಿದ್ದಾರೆ.

ಹೊರಗಡೆ ಔಷಧಿ ಬರೆದುಕೊಟ್ರೆ ನಿರ್ದಾಕ್ಷ್ಯಣ ಕ್ರಮ; ಜಿಮ್ಸ್ ನಿರ್ದೇಶಕ

ಈ ಕುರಿತು ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಮಾತನಾಡಿ ‘ಔಷಧಿಯ ಯಾವುದೇ ಸಮಸ್ಯೆ ಇಲ್ಲ, ಕೆಲವಂದಿಷ್ಟು ವಾರ್ಡ್ ಇಂಡೆಂಟ್ ಹಾಕುವುದು ಫಾರ್ಮಸಿಸ್ಟ್ ಗೊತ್ತಾಗುತ್ತಿಲ್ಲ. ಅದನ್ನೆಲ್ಲಾ ಇಲೆಕ್ಟ್ರಾನಿಕ್ ಇಂಡೆಂಟ್ ವ್ಯವಸ್ಥೆ ಮಾಡಿದ್ದು, ಸಮಸ್ಯೆ ಬಗೆಹರಿದಿದೆ. ಹೊರಗಡೆ ಯಾರಾದ್ರೂ ಬರೆದುಕೊಟ್ರೆ ನಿರ್ದಾಕ್ಷ್ಯಣ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಔಷಧಿಗಳು ಲಭ್ಯ ಇದೆ ಎಂದು ಹೇಳಿದ್ದಾರೆ. ಏನೇ ಇರಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಿಗುತ್ತೆ ಎಂದು ಬಂದ ರೋಗಿಗಳಿಗೆ ಗದಗ ಜಿಮ್ಸ್ ಆಡಳಿತ, ಖಾಸಗಿ ಬರೆ ನೀಡುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ವೈದ್ಯಕೀಯ ಇಲಾಖೆ ಎಚ್ಚೆತ್ತುಕೊಂಡು ಜಿಮ್ಸ್ ಆಡಳಿತಕ್ಕೆ ಚಿಕಿತ್ಸೆ ನೀಡುವ ಮೂಲಕ ಬಡ ರೋಗಿಗಳ ಕಣ್ಣೀರು ಒರೆಸಬೇಕಿದೆ.

ರಾಜ್ಯದ ಮತ್ತಷ್ಟುಬ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ