ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನಕೂಲ ಆಗ್ಲಿ ಅಂತ ಸರ್ಕಾರ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ಪಾಲಿಟೆಕ್ನಿಕ್ ಕಾಲೇಜ್ (Government Polytechnic College in Ron Taluk Gadag) ನಿರ್ಮಾಣ ಮಾಡಿದೆ. ಕಟ್ಟಡ ಕಾಮಗಾರಿ ಮುಗಿದು ಬರೊಬ್ಬರಿ ಎರಡು ವರ್ಷಗಳಾಗಿವೆ. ಆದ್ರೆ ಇನ್ನೂ ಉದ್ಘಾಟನೆಯಾಗಿಲ್ಲ. ಅದು ಬಿಜೆಪಿ ಅವಧಿಯಲ್ಲಿ ಆಗಿದ್ದು, ಅಂತ ಕಾಂಗ್ರೆಸ್ ಸರ್ಕಾರ ಕ್ಯಾರೇ ಅಂತಿಲ್ಲ. ಹೀಗಾಗಿ ಹೈಟೆಕ್ ಕಾಲೇಜ್ ಸಂಪೂರ್ಣ ಹಾಳಾಗಿ ಹೋಗಿದೆ. ಕಿಡಿಗೇಡಿಗಳು ಕಟ್ಟಡದಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಲೂಟಿ ಮಾಡಿದ್ದಾರೆ. ಆದ್ರೆ, ತಾಂತ್ರಿಕ ಶಿಕ್ಷಣ ಇಲಾಖೆ ಮಾತ್ರ ಕುಂಭಕರ್ಣ ನಿದ್ದೆ ಮಾಡ್ತಾಯಿದೆ. ಸರ್ಕಾರದ ಧೋರಣಗೆ ಜನ್ರು ಕಿಡಿಕಾರಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಅನ್ನೋದು ಕಬ್ಬಿಣದ ಕಡಲೆಯಾಗಿದೆ. ಯಾವುದೇ ಸೌಕರ್ಯ ಇಲ್ದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಹೀಗಾಗಿ ಸರ್ಕಾರ ಗ್ರಾಮೀಣ ಭಾಗದ ಮಕ್ಕಳಿಗೆ ಅನಕೂಲ ಆಗ್ಲಿ ಅಂತ ಬರೊಬ್ಬರಿ 8 ಕೋಟಿ ವೆಚ್ಚದಲ್ಲಿ ಹೈಟೆಕ್ ಡಿಪ್ಲೊಮಾ ಕಾಲೇಜ್ ನಿರ್ಮಾಣ ಮಾಡಿದೆ. ಆದ್ರೆ, ಈಗ 8 ಕೋಟಿ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಎಸ್.. ಈ ಹೈಟೆಕ್ ಕಟ್ಟಡ ನಿರ್ಮಾವಾಗಿದ್ದು, ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ (Ron Taluk Gadag).
ಹೌದು ಉದ್ಘಾಟನೆಗೂ ಮುನ್ನವೇ ಮೂರು ಅಂತಸ್ಥಿನ ಕಟ್ಟಡದ ಕಿಟಕಿಗಳು ಪೀಸ್ ಪೀಸ್ ಆಗಿವೆ. ಅಷ್ಟೇ ಅಲ್ಲ ಕಟ್ಟಡದ ಒಳಗಿನ ಲಕ್ಷಾಂತರ ಮೌಲ್ಯದ ವಿದ್ಯುತ್ ಉಪಕರಣಗಳನ್ನು ಕಿಡಿಗೇಡಿಗಳು ಲೂಟಿ ಮಾಡಿದ್ದಾರೆ. 10ಕ್ಕೂ ಅಧಿಕ ಫ್ಯಾನ್ ಗಳನ್ನು ಕಿಡಿಗೇಡಿಗಳು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಎಲೆಕ್ಟ್ರಿಕಲ್ ವೈರ್ ಗಳು, ಬಟನ್ ಗಳು, ಬೋರ್ಡ್ ಗಳು ಸೇರಿದಂತೆ ಲಕ್ಷ ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ.
ಸರ್ಕಾರದ ಕೋಟಿ ಕೋಟಿ ವೆಚ್ಚದ ಆಸ್ತಿ ಹಗಲು ದರೋಡೆ ನಡೆದ್ರೂ ಸಂಬಂಧಪಟ್ಟ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಕ್ಯಾರೇ ಅಂತಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣ ಕನಸು ನುಚ್ಚುನೂರಾಗಿದೆ. ಈ ಕಟ್ಟಡ ಬಿಜೆಪಿ ಸರ್ಕಾರ ಅವಧಿಯಲ್ಲಿ ನಿರ್ಮಾಣ ಆಗಿದೆ. ಹೀಗಾಗಿ ಉದ್ಘಾಟನೆಗೆ ಈಗಿನ ಸರ್ಕಾರ ವಿಳಂಬ ಮಾಡ್ತಿದೆ ಅನ್ನೋ ಮಾತು ಕೇಳಿ ಬರ್ತಾಯಿದೆ. ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಹೈಟೆಕ್ ಡಿಪ್ಲೊಮಾ ಕಾಲೇಜ್ ಕಟ್ಟಡ ಸಂಪೂರ್ಣ ಪಾಳು ಬಿದ್ದಿದೆ. ಇದು ರೋಣ ತಾಲೂಕಿನ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಉದ್ಘಾಟನೆ ಮಾಡಿ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಅಂತ ಒತ್ತಾಯಿಸಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಅನಕೂಲ ಆಗ್ಲಿ ಆಂತ ಸರ್ಕಾರ ಕೋಟ್ಯಾಂತರ ಖರ್ಚು ಮಾಡಿ ಮೂರು ಅಂತಸ್ತಿನ ಹೈಟೆಕ್ ಡಿಪ್ಲೋಮ ಕಾಲೇಜ್ ನಿರ್ಮಾಣ ಮಾಡಿದೆ. ಸರ್ಕಾರದ ಆಸ್ತಿ ಲೂಟಿ ಆಗ್ತಾಯಿದ್ರೂ ತಾಂತ್ರಿಕ ಶಿಕ್ಷಣ ಇಲಾಖೆ ಕುಂಭಕರ್ಣ ನಿದ್ದೆ ಮಾಡ್ತಾಯಿದೆ. ಇನ್ನು ಜಿಲ್ಲಾಡಳಿತ ಕೂಡ ಸರ್ಕಾರಿ ಆಸ್ತಿ ಬಗ್ಗೆ ನಿರ್ಲಕ್ಷ್ಯ ತೋರ್ತಾಯಿದೆ ಅಂತ ಜನ್ರು ಆರೋಪಿಸಿದ್ದಾರೆ. ಈಗ ಹೈಟೆಕ್ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿದೆ. ಕುಡುಕರ ಅಡ್ಡಾ ಆಗಿ ಬದಲಾವಣೆಯಾಗಿದೆ ಅಂತ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗದಗ ಜಿಲ್ಲೆಯ ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಮಹಾಂತೇಶ್ ಅವ್ರನ್ನು ಕೇಳಿದ್ರೆ, ಎಂಟು ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮೂಲದ ರೈಟ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷವಾಗಿದೆ. ಇನ್ನೂ ಹಸ್ತಾಂತರ ಆಗಿಲ್ಲ. ಈಗಾಗಲೇ ಕಾಲೇಜ್ ಕಟ್ಟಡ ಪರಿಶೀಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಅಂತ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಮನಸ್ಸು ಮಾಡಿದ್ರೆ ಸರ್ಕಾರಕ್ಕೆ ಒಳ್ಳೆಯ ಹೆಸರೂ ತರಬಹುದು. ಕೆಟ್ಟ ಹೆಸರೂ ತರಬಹುದು ಅನ್ನೋದಕ್ಕೆ ಈ ಕಟ್ಟಡವೇ ತಾಜಾ ಉದಾಹರಣೆ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ಸರ್ಕಾರದ ಕೋಟ್ಯಾಂತರ ಮೌಲ್ಯದ ಆಸ್ತಿ ಉಳಿಸಿಕೊಳ್ತಾರೋ ಅಥವಾ ಇನ್ನಷ್ಟು ಲೂಟಿ ಅವಕಾಶ ಮಾಡಿ ಕೊಡ್ತಾರೋ ಅನ್ನೋದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Fri, 16 February 24