ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಭರಪೂರ ಕೊಡುಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್‌ನಲ್ಲಿ ಡಿಕೆ ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ 7000 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ರಸ್ತೆಗಳ ವೈಟ್ ಟಾಪಿಂಗ್, ಮೂಲಸೌಕರ್ಯ ಸುಧಾರಣೆ, ಸಂಚಾರ ದಟ್ಟಣೆ ನಿವಾರಣೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಕೆರೆಗಳ ಜೀರ್ಣೋದ್ಧಾರ ಸೇರಿದಂತೆ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಬಜೆಟ್ ಬಲ ನೀಡಿದೆ.

ಬೆಂಗಳೂರು, ಮಾರ್ಚ್ 6: ದಾಖಲೆಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 2026–27ನೇ ಸಾಲಿನ ಕರ್ನಾಟಕ ಆಯವ್ಯಯದಲ್ಲಿ (Karnataka Budget 2026) ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಬೆಂಬಲ ನೀಡುವಂತೆ ನಗರ ಅಭಿವೃದ್ಧಿಗೆ ಒಟ್ಟು 7,000 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.
ಬೆಂಗಳೂರು ನಗರದಲ್ಲಿ ರಸ್ತೆ, ಮೂಲಸೌಕರ್ಯ, ಪಾದಚಾರಿ ಮಾರ್ಗ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ನಗರದ ಐದು ನಗರ ಪಾಲಿಕೆಗಳಲ್ಲಿ 1,233 ಕೋಟಿ ರೂಪಾಯಿ ವೆಚ್ಚದಲ್ಲಿ ವಾರ್ಡ್ ಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
1,700 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್
ಇದರ ಜೊತೆಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ 158 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ. ಮತ್ತೊಂದೆಡೆ 1,936 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಮುಖ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ.
ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಔಟರ್ ರಿಂಗ್ ರೋಡ್ಗೆ 450 ಕೋಟಿ ರೂ.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರವರ್ತುಲ ರಸ್ತೆ (Outer Ring Road) ಅಭಿವೃದ್ಧಿಗೆ 450 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಜೊತೆಗೆ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆಗಳ ಅಭಿವೃದ್ಧಿಗಾಗಿ 273 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನ 450 ಕಿಲೋಮೀಟರ್‌ಗೂ ಹೆಚ್ಚು ರಸ್ತೆಗೆ ವೈಟ್ ಟಾಪಿಂಗ್ ಮಾಡುವ ಯೋಜನೆಯೂ ಸರ್ಕಾರದ ಗಮನ ಸೆಳೆದಿದೆ. ಇದಕ್ಕಾಗಿ ಸುಮಾರು 3,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ನಗರದ ಪಾದಚಾರಿಗಳ ಸುರಕ್ಷತೆ ಮತ್ತು ಸೌಲಭ್ಯ ಹೆಚ್ಚಿಸಲು 500 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿದೆ. ಇದೇ ವೇಳೆ ಸಂಚಾರ ಸುಗಮತೆಗೆ ಹಾಗೂ ಸುರಕ್ಷತೆಗೆ 100 ಸ್ಕೈವಾಕ್‌ಗಳನ್ನು ನಿರ್ಮಿಸುವುದಕ್ಕೂ ಸರ್ಕಾರ ನಿರ್ಧರಿಸಿದೆ.
ಇದರ ಜೊತೆಗೆ ನಗರ ಸೌಂದರ್ಯ ಹೆಚ್ಚಳಕ್ಕೂ ಒತ್ತು ನೀಡಲಾಗಿದ್ದು, 175 ಪ್ರಮುಖ ಜಂಕ್ಷನ್‌ಗಳನ್ನು ಆಧುನಿಕವಾಗಿ ಅಭಿವೃದ್ಧಿಪಡಿಸುವ ಯೋಜನೆ ಕೂಡ ಬಜೆಟ್‌ನಲ್ಲಿ ಪ್ರಕಟವಾಗಿದೆ.
ಬೆಂಗಳೂರಿಗೆ ಇನ್ನೂ ಏನೇನು ಕೊಡುಗೆ?
ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಸೆರೆಹಿಡಿದ ಚಿರತೆಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಘೋಷಿಸಲಾಗಿದೆ. ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ಉದ್ಯಾನ ನಿರ್ಮಾಣ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್‌ನಲ್ಲಿ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ
ಒಟ್ಟಾರೆ, ಈ ಬಜೆಟ್‌ನಲ್ಲಿ ಘೋಷಿಸಲಾದ ವಿವಿಧ ಯೋಜನೆಗಳು ಡಿ.ಕೆ. ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಕನಸಿಗೆ ಮತ್ತಷ್ಟು ಬಲ ನೀಡುವಂತೆ ಕಂಡುಬಂದಿವೆ. ರಸ್ತೆ, ಸಂಚಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿರುವ ಹೆಚ್ಚಿನ ಅನುದಾನದಿಂದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ವೇಗ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
