Karnataka Budget 2026 LIVE: 3 ಗಂಟೆ ಐದು ನಿಮಿಷಗಳ ಸುದೀರ್ಘ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
Karnataka Budget 2026 LIVE News in Kannada: ಕರ್ನಾಟಕ ಬಜೆಟ್ 2026: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಮಾರ್ಚ್ 06ರಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ಇಂದು(March 6) ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡನೆ ಶುರು ಮಾಡಿದ್ದಾರೆ.

LIVE NEWS & UPDATES
-
Karnataka Budget LIVE: 3 ಗಂಟೆ ಐದು ನಿಮಿಷಗಳ ಸುದೀರ್ಘ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಅವರು 3 ಗಂಟೆ 5 ನಿಮಿಷಗಳ ಸುದೀರ್ಘ ಬಜೆಟ್ ಮಂಡನೆ ಮಾಡಿದ್ದಾರೆ.
-
Karnataka Budget LIVE: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕರಾವಳಿ ವಿರೋಧಿ: ಸುನೀಲ್ ಕುಮಾರ್
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕರಾವಳಿ ವಿರೋಧಿ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.ವಿಶೇಷವಾಗಿ ಪ್ರವಾಸೋದ್ಯಮಕ್ಕೆ ಪ್ಯಾಕೇಜ್ ನೀಡಿ ಎಂದಿದ್ದೆವು. ಉಡುಪಿಗೆ ಮೆಡಿಕಲ್ ಕಾಲೇಜು ನೀಡಿ ಎಂದು ಮನವಿ ಮಾಡಿದ್ದೆವು.ಬಂದರು ಅಭಿವೃದ್ಧಿಗೆ ಒತ್ತು ನೀಡಿಲ್ಲ, ಮೀನುಗಾರರ ಸಮಸ್ಯೆ ಆಲಿಸಿಲ್ಲ ಎಂದು ಹೇಳಿದ್ದಾರೆ.
-
-
Karnataka Budget LIVE: ಪ್ರಾದೇಶಿಕ ಅಸಮಾನತೆ ಸರಿ ಮಾಡಲು ಯಾವುದೇ ವಿಶೇಷ ಅನುದಾನವಿಲ್ಲ: ಆರ್ ಅಶೋಕ್
ಪ್ರಾದೇಶಿಕ ಅಸಮಾನತೆ ಸರಿ ಮಾಡಲು ಯಾವುದೇ ವಿಶೇಷ ಅನುದಾನವಿಲ್ಲ, ಎಸ್ಸಿ ಸಚಿವರು ರಾಜೀನಾಮೆ ಕೊಡ್ತೀವಿ ಅಂತ ಹೊರಟಿದ್ದಾರೆ, ಹಾಲಿಗೆ ಪ್ರೋತ್ಸಾಹಧನದ ಸುದ್ದಿಯೇ ಇಲ್ಲ, ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಯಥೇಚ್ಛವಾಗಿ ಭರಪೂರ ಕೊಟ್ಟಿದ್ದಾರೆ. ಹೊಸದಾಗಿ ತೆರಿಗೆ ಘೋಷಣೆ ಮಾಡಿಲ್ಲ ಇನ್ನುಮೇಲೆ ಮಾರಿ ಹಬ್ಬ ಇದೆ.ಒಟ್ಟಾರೆ ಈ ಸರ್ಕಾರ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ದುಸ್ಥಿತಿಗೆ ತಂದಿಟ್ಟಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಂದಿಟ್ಟಿದ್ದಾರೆ.
-
Karnataka Budget LIVE: ಸಿದ್ದರಾಮಯ್ಯ ಬಜೆಟ್ ಟಾಪ್-30
- ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 11G ಮಾದರಿ ಆರ್ಥಿಕತೆ ಘೋಷಣೆ
- ಪ್ರಸಕ್ತ ವರ್ಷದಲ್ಲಿ 56 ಸಾವಿರದ 432 ಉದ್ಯೋಗ ನೇಮಕಾತಿ
- ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧಿ ಹೆಸರು
- ಅನ್ನಭಾಗ್ಯ: 5 ಕೆಜಿ ಅಕ್ಕಿ ಜೊತೆ ಇಂದಿರಾ ಕಿಟ್ ವಿತರಣೆ
- ಇಂದಿರಾ ಕಿಟ್ : ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಹೆಸರು ಕಾಳು, ಉಪ್ಪು
- 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್
- 800 ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಶಾಲೆಗಳು ಆರಂಭ
- ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭ
- ಮಹಿಳೆಯರು ಮಕ್ಷಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಆರಂಭ
- ಬೆಂಗಳೂರು, ಧಾರವಾಡದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’
- ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ
- ಕುವೆಂಪು ವಿವಿಯಲ್ಲಿ U.R.ಅನಂತಮೂರ್ತಿ ಅಧ್ಯಯನಪೀಠ ಸ್ಥಾಪನೆ
- ವಿಕ್ಟೋರಿಯಾ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಎಂದು ಮರುನಾಮಕರಣ
- 4.90 ಲಕ್ಷ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ನಿರ್ಧಾರ
- ಬೆಂಗಳೂರು ಅಭಿವೃದ್ಧಿಗೆ ಒಟ್ಟು 7,000 ಕೋಟಿ ರೂ. ಮೀಸಲು
- ಬೆಂಗಳೂರಿನಲ್ಲಿ 40 ಕಿ.ಮೀ ಸುರಂಗ ಮಾರ್ಗ ನಿರ್ಮಾಣ
- ಬೆಂಗಳೂರಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹಲವು ಯೋಜನೆ
- ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಮೈಸೂರನ್ನು ಎರಡನೇ ಐಟಿ ರಾಜಧಾನಿಯಾಗಿ ಬೆಳೆಸಲು ಉತ್ತೇಜನ
- 38 ಲಕ್ಷ ರೈತರಿಗೆ ಸಾಲ ನೀಡಲು 30,000 ಕೋಟಿ ರೂ. ಮೀಸಲು
- ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಆರಂಭ
- ಬೆಂಗಳೂರು, ಬೀದರ್‌ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
- ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ
- 100 ಕೋಟಿ ರೂ.ವೆಚ್ಚದಲ್ಲಿ ಕೃಷಿ ವಿಸ್ತಾರ ಯೋಜನೆ
- ಕೃಷಿ ವೆಚ್ಚ ಕಡಿತಕ್ಕೆ ಹೈಟೆಕ್ ಹಾರ್ವೆಸ್ಟರ್ ಹಬ್, ಕೋಲಾರದಲ್ಲಿ ರೈತ ಮಾಲ್ಅ
- ಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಭಾಗ್ಯ
- ಬಾಣಂತಿಯರಿಗೆ ಬಿಸಿಯೂಟ, ಮರಣ ಪ್ರಮಾಣ ತಗ್ಗಿಸಲು ಕ್ರಮ
- ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್
- ಕಲ್ಯಾಣ ಕರ್ನಾಟಕದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ 1,124 ಕಿ.ಮೀ ಕಲ್ಯಾಣ ಪಥ
- ರಾಜ್ಯಾದ್ಯಂತ 1,250 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್
- ನಿಧಿ ಸಿಕ್ಕ ಲಕ್ಕುಂಡಿಗೆ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ
-
Karnataka Budget LIVE:ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ವಿರುದ್ಧ ಬಿಜೆಪಿ ಆಕ್ರೋಶ
ವಿಧಾನಸೌಧದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಬಿಜೆಪಿ ಪ್ರತಿಭಟನೆ ಮಾಡಿದೆ. ವಿಧಾನಸೌಧದ ಪೂರ್ವ ದ್ವಾರದಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಬಜೆಟ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
-
Karnataka Budget LIVE: ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡಿದ ಸಿದ್ದರಾಮಯ್ಯ
ಕರ್ನಾಟಕ ಬಜೆಟ್ 2026ರಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣ ಮತ್ತು ವಸತಿ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಆಧ್ಯಾತ್ಮಿಕರು ಹಾಗೂ ಸಮದಾಯದವರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ. ಸೇಲಂನ ಬೆನೆಡಿಕ್ಟಿನ್ ಮೊನಾಸ್ಟರಿಯ ಎರಡು ಎಕರೆ ಜಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಇತರ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ಅನುವಾದಿಸಲಾಗುವುದು.
-
Karnataka Budget LIVE: ಅಬಕಾರಿ ಇಲಾಖೆ
- ಕರ್ನಾಟಕ ಅಬಕಾರಿ ಕಾಯ್ದೆಯು 60 ವರ್ಷಗಳ ಹಿಂದೆ ಜಾರಿಗೆ ತಂದಿದ್ದು, ಈ ಕಾಯ್ದೆಯ ಹಲವು ನಿಬಂಧನೆಗಳು ಪ್ರಸಕ್ತ ಕಾಲಮಾನಕ್ಕೆ ಹೊಂದಿಕೆಯಾಗುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ, ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವಿವಿಧ ಸನ್ನದುಗಳ ಮಾನ್ಯತೆಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ 7 ಹಂತಗಳಿಗೆ ಸರಳೀಕರಿಸಲಾಗಿದ್ದು, ಎರಡು ದಿನಗಳೊಳಗೆ ಅನುಮೋದನೆ ನೀಡಲಾಗುತ್ತಿದೆ.
- ಅಬಕಾರಿ ಇಲಾಖೆಯಲ್ಲಿ ಜಾರಿಗೊಳಿಸಲಾದ ವರ್ಗಾವಣಾ ನಿಯಮಗಳನ್ವಯ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಮುಖ್ಯ ಪೇದೆ/ಪೇದೆಗಳ ಗ್ರೂಪ್-ಸಿ ವೃಂದದ ನೌಕಾರರ ವರ್ಗಾವಣೆಗಳನ್ನು ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಅಧೀಕ್ಷಕರುಗಳ ವರ್ಗಾವಣೆಯನ್ನು ಸಹ ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲು ಕ್ರಮವಹಿಸಲಾಗುವುದು.
- ರಾಜ್ಯ ಸರ್ಕಾರ ರಚಿಸಿದ ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಹೊಸ ಅಬಕಾರಿ ತೆರಿಗೆ ಮತ್ತು ಮದ್ಯ ನಿಯಂತ್ರಣ ರೂಪುರೇಷೆಗಳನ್ನು ಒಳಗೊಂಡ ಕರಡು ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಪ್ರಸ್ತಾವಿತ ಸುಧಾರಣೆಗಳು ಪಾರದರ್ಶಕತೆಯನ್ನು ಬಲಪಡಿಸಿ, ಮದ್ಯ ನಿಯಂತ್ರಣ ಕ್ರಮಗಳನ್ನು ಕಾಲೋಚಿತವಾಗಿ ಸುಧಾರಿಸಲಿದೆ ಹಾಗೂ ರಾಜ್ಯದಾದ್ಯಂತ ಅಬಕಾರಿ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳನ್ನು ಸರಳೀಕರಿಸಲಿದೆ.
- ಮದ್ಯಪಾನದ ದುಷ್ಪರಿಣಾಮಗಳು ಸಮಾಜದ ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು (Alcohol-in-Beverage – AIB) ಆಧರಿಸಿದ ತೆರಿಗೆ ಪದ್ದತಿಯು gold standard ಆಗಿದೆ. ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
- ಅಬಕಾರಿ ಸುಂಕವು ಏಕರೂಪವಾಗಿರಲಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ex-factory ದರ ಪಟ್ಟಿಗಳ ಆಧಾರದ ಮೇಲೆ ವಿಧಿಸಲಾಗುವುದು. ಇದರಿಂದ ಮದ್ಯ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೆ, ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತ ಪಡಿಸಲಾಗುವುದು.
- ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ನಾವು ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳುತ್ತೇವೆ.
- ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ದರ ನಿಗದಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು.
-
-
Karnataka Budget LIVE: ತೆರಿಗೆ ಪ್ರಸ್ತಾವನೆಗಳು, ವಾಣಿಜ್ಯ ತೆರಿಗೆ
- ಆರ್ಥಿಕ ವರ್ಷ 2025-26ರ ಫೆಬ್ರವರಿ ತಿಂಗಳವರೆಗೆ 74,160 ಕೋಟಿ ರೂ.ಗಳ ಜಿ.ಎಸ್.ಟಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.8 ರಷ್ಟು ಹೆಚ್ಚಳವಾಗಿರುತ್ತದೆ. ಮಾರಾಟ ತೆರಿಗೆ ಮತ್ತು ವೃತ್ತಿ ತೆರಿಗೆ ಒಳಗೊಂಡು, ಒಟ್ಟು ವಾಣಿಜ್ಯ ತೆರಿಗೆಯಿಂದ ಫೆಬ್ರವರಿ 2026ರವರೆಗೆ 1,00,462ಕೋಟಿ ರೂ.ಗಳು ಸ್ವೀಕೃತವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8.1 ರಷ್ಟು ಹೆಚ್ಚಳವಾಗಿರುತ್ತದೆ.
- ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ದ್ರವೀಕೃತ ನೈಸರ್ಗಿಕ ಅನಿಲ (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆ ದರವನ್ನು ಪ್ರಸ್ತುತ ಇರುವ 14.34% ರಿಂದ 5%ಕ್ಕೆ ಇಳಿಸುವುದಕ್ಕೆ ಪ್ರಸ್ತಾಪಿಸಲಾಗಿದೆ.
- ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಅಧಿನಿಯಮ, 1976ರ ಅಡಿಯಲ್ಲಿ, ತೆರಿಗೆದಾಯಕ ವ್ಯಕ್ತಿಯು ವರ್ಷಕ್ಕೆ ಪಾವತಿಸಬೇಕಾದ ಸಂಪೂರ್ಣ ತೆರಿಗೆಯನ್ನು ಸಲ್ಲಿಸಿದ ಸಂದರ್ಭದಲ್ಲಿ, ಆ ವರ್ಷಕ್ಕೆ ಸಂಬಂಧಿಸಿದ ವಿವರಪಟ್ಟಿಕೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ತಿದ್ದುಪಡಿ ತರಲಾಗುವುದು. ಇದಲ್ಲದೆ ವೃತ್ತಿ ತೆರಿಗೆಯಿಂದ ವಿನಾಯಿತಿ ಹೊಂದಿರುವ ವ್ಯಕ್ತಿಗಳಿಗೆ ಕೂಡ ವಿವರಪಟ್ಟಿಕೆ ಸಲ್ಲಿಸುವ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಅಧಿನಿಯಮದಲ್ಲಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು.
- ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಗ್ರೂಪ್-ಎ ವೃಂದದ ಅಧಿಕಾರಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ರಚನಾತ್ಮಕ, ವಸ್ತುನಿಷ್ಠ, ಪಾರದರ್ಶಕವಾದ ಕಾರ್ಯಕ್ಷಮತೆ ಆಧಾರದ ಮೇಲೆ ಮೌಲ್ಯಮಾಪನ ವ್ಯವಸ್ಥೆಯನ್ನು ನಿರ್ದಿಷ್ಠ ಮಾನದಂಡಗಳ ಆಧಾರಗಳ ಮೇಲೆ ಕೈಗೊಳ್ಳಲಾಗುವುದು. ಈ ನೀತಿಯನ್ನು ಅನುಸರಿಸಿ ಇಲಾಖೆಯ ಜಂಟಿ ಆಯುಕ್ತರವರೆಗಿನ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡಲು ಉದ್ದೇಶಿಸಿದೆ.
- 2026-27ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿಯನ್ನು 1,25,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.
-
Karnataka Budget LIVE: ಸಾರಿಗೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
- ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದುವರೆಗೆ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಫಲಾನುಭವಿಗಳು ಪ್ರಯಾಣ ಸೌಲಭ್ಯ ಪಡೆದಿರುತ್ತಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ 2026-27ನೇ ಸಾಲಿಗೆ 5,300 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಹಿಂದಿನ ಸರ್ಕಾರ 01.03.2023 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿದ್ದು, ಅದಕ್ಕೂ ಮೊದಲಿನ ಅವಧಿಯ ವೇತನ ಪರಿಷ್ಕರಣೆಯ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಸದರಿ ಅವಧಿಯ ವೇತನ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ 01.01.2021 ರಿಂದ 28.02.2023 ರವರೆಗಿನ ವೇತನ ಬಾಕಿಯನ್ನು ಪಾವತಿಸಲು ಹಾಗೂ 01.04.2025 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಲು ನಮ್ಮ ಸರ್ಕಾರ ನಿಶ್ಚಯಿಸಿರುತ್ತದೆ. ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮಪಡಿಸಲು 2025-26ನೇ ಸಾಲಿನಲ್ಲಿ ಘೋಷಿಸಿದ 2,000 ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದೂ ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6,596 ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿರುತ್ತದೆ. 2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು.
- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಪಘಾತ ಸ್ಥಳಗಳನ್ನು (Accident Black Spots) ಗುರುತಿಸಲು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಐ.ಐ.ಟಿ. ಮದ್ರಾಸ್ ಮತ್ತು ಎನ್.ಐ.ಸಿ. ರವರ ಸಹಯೋಗದೊಂದಿಗೆ ಡ್ಯಾಶ್ ಬೋರ್ಡ್ ಒಳಗೊಂಡ ಆಧುನಿಕ ತಂತ್ರಾಂಶವನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
- ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ 25 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಡ್ರೈವಿಂಗ್ ಟ್ರ್ಯಾಕ್‌ಗಳು ಹಾಗೂ ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್ ಕಟ್ಟಡಗಳ ಮೇಲ್ಛಾವಣಿಯಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ Roof Top Solar ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ತುಮಕೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
- ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ನೂತನ ಬಸ್ಸು ನಿಲ್ದಾಣಗಳನ್ನು ಹಾಗೂ ತರೀಕೆರೆಯಲ್ಲಿ ಬಸ್ಸು ಡಿಪೋ ಅನ್ನು ನಿರ್ಮಿಸಲಾಗುವುದು.
-
Karnataka Budget LIVE: ಮುಜರಾಯಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನು?
- ಕರ್ನಾಟಕ ರಾಜ್ಯದಿಂದ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ರೂ.ಗಳ ಸಹಾಯಧನವನ್ನು ಡಿ.ಬಿ.ಟಿ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ ಐದು ಕೋಟಿ ರೂ. ಅನುದಾನ ಮೀಸಲಿರಿಸಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯʼ ಮತ್ತು ʻಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯʼಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಿದೆ.
- ಬೆಂಗಳೂರು ನಗರದ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿ ಇಲಾಖೆಗೆ ಸೇರಿದ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (PPP) ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
- ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ (Counselling) ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
- ಆರ್.ವಿ. ದೇಶಪಾಂಡೆರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಸಲ್ಲಿಸಿರುವ 10 ವರದಿಗಳಲ್ಲಿನ 6,031 ಶಿಫಾರಸ್ಸುಗಳ ಪೈಕಿ 2,014 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
- ರಾಜ್ಯದ ಎಲ್ಲಾ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳು ಹಾಗೂ ವಸತಿನಿಲಯಗಳಲ್ಲಿ AI ಆಧಾರಿತ Facial Recognition ಸಾಫ್ಟ್‌ವೇರ್ ಮುಖಾಂತರ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಹಾಗೂ ಪ್ರತಿದಿನದ ಫಲಾನುಭವಿಗಳ ಹಾಜರಾತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.
-
Karnataka Budget LIVE: ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆ
- ಕರ್ನಾಟಕ ಲ್ಯಾಂಡ್ ಸ್ಟಾಕ್ (Land Stack) ಯೋಜನೆʼಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು, ಇ-ಆಸ್ತಿಯಲ್ಲಿರುವ ಜಮೀನು, ಆಸ್ತಿಯ ದತ್ತಾಂಶಗಳನ್ನು GIS-ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಕ್ರೋಢೀಕರಿಸಿ ಏಕರೂಪದಲ್ಲಿ ದಾಖಲೆಗಳನ್ನು ನಿರ್ವಹಿಸಲಾಗುವುದು.
- ಭೂಮಿ ತಂತ್ರಾಂಶವನ್ನು ಪ್ರಸ್ತುತ ತಂತ್ರಜ್ಞಾನಕ್ಕೆ ತಕ್ಕಂತೆ ಸಮಗ್ರವಾಗಿ ಆಧುನೀಕರಿಸುವುದರ ಮೂಲಕ 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದಿರುವ ಭೂಮಿ-8.0 ಸಾಫ್ಟ್‌ವೇರ್ ಅನ್ನು ಸುಮಾರು 50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
- ಭೂ ವ್ಯಾಜ್ಯಗಳ ಇತ್ಯರ್ಥದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (KAT) ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳ ಕಲಾಪಗಳನ್ನು CCMS ಮತ್ತು RCCMS ತಂತ್ರಾಂಶಗಳನ್ನು ಸಂಯೋಜಿಸಿ, ಇದರೊಂದಿಗೆ ಎಲ್ಲಾ ಕಂದಾಯ ನ್ಯಾಯಾಲಯಗಳ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಮತ್ತು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ.
- ಭೂಮಾಪಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ (Counselling) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
- ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಗಳು 160 ವರ್ಷಕ್ಕೂ ಹೆಚ್ಚು ಹಳೆಯದಾಗಿದ್ದು, ಇವುಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದರಿಂದ ರಾಜ್ಯದ ಎಲ್ಲಾ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳಲ್ಲಿ ನವೀಕೃತ ಅಭಿಲೇಖಾಲಯಗಳನ್ನು 72 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ಇಲಾಖೆಯಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚಿಗೆ ಇರುವ ಟಿಪ್ಪಣಿಗಳು ಮತ್ತು ಎಫ್.ಎಂ.ಬಿ.ಗಳು ಮತ್ತು ಒಂದು ಕೋಟಿಗೂ ಹೆಚ್ಚು ಅಟ್ಲಾಸ್ ಗಳನ್ನು ಆಟೋಕ್ಯಾಡ್ (AutoCAD) ಮತ್ತು ಸರ್ವರ್‌ಗಳನ್ನು ಖರೀದಿಸಿ GIS ತಂತ್ರಾಂಶದ ಮೂಲಕ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.
- ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ʻಅನುಭವ ಮಂಟಪʼ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು.
- ಉಪ ನೋಂದಣಿ ಕಛೇರಿಗಳಲ್ಲಿ ನಾಗರಿಕರಿಗೆ ಉತ್ತಮ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರತಿ ಜಿಲ್ಲೆಯ ಒಂದು ಕಛೇರಿಯನ್ನು ʻನೋಂದಣಿ ಖಾತರಿ ಕೇಂದ್ರವಾಗಿʼ ನವೀಕರಿಸಲಾಗುವುದು. ಅಲ್ಲದೆ, ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐದು ವಿಶ್ವ ದರ್ಜೆಯ ಉಪ ನೋಂದಣಿ ಕೇಂದ್ರಗಳನ್ನು ತೆರೆಯಲಾಗುವುದು.
-
Karnataka Budget LIVE: ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ
- ಉದ್ಯಾನ ನಗರಿ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನ ಒಟ್ಟು 5,676 ಎಕರೆ ವಿಸ್ತೀರ್ಣದ ಪ್ರದೇಶವನ್ನು ʻಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲುʼ ಎಂದು ಘೋಷಿಸಿದ್ದು, ಈ ಪ್ರದೇಶದ ಆವಾಸಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
- ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿಯಲ್ಪಟ್ಟ ಸಂದರ್ಭಗಳಲ್ಲಿ ಅವುಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು.
- ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳನ್ನು 2026-27ನೇ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡುವ ಮೂಲಕ ಇಲಾಖೆಯನ್ನು ಸಬಲೀಕರಣಗೊಳಿಸಲಾಗುವುದು. ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಉದ್ಯಾನವನದ ಕಡೆಗೆ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲತೆಗಾಗಿ PPP ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು.
- ರಾಷ್ಟ್ರೀಯ ಅರಣ್ಯ ನೀತಿಯಂತೆ ರಾಜ್ಯದ ಶೇ.10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ KKRDB ವತಿಯಿಂದ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
- ಬೆಂಗಳೂರು ಉತ್ತರ ತಾಲ್ಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶವನ್ನು ಶ್ವಾಸತಾಣವನ್ನಾಗಿ ಪರಿವರ್ತಿಸಿ, ʻಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನʼವನ್ನು ನಿರ್ಮಿಸಲಾಗುವುದು.
- ವಾಯು ಗುಣಮಟ್ಟ ಮಾಪನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 15 ಹೊಸ ನಿರಂತರ ಪರಿವೇಷ್ಠಿಕ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕರ್ನಾಟಕದ ಪ್ರಸಿದ್ಧ ಪರಿಸರವಾದಿ ವೃಕ್ಷಮಾತೆ ʻಸಾಲುಮರದ ತಿಮ್ಮಕ್ಕʼ ಇವರ ಸ್ಮರಣಾರ್ಥ ಹುಲಿಕಲ್-ಕುದೂರು ಹತ್ತಿರ ಸ್ಮಾರಕವನ್ನು ನಿರ್ಮಿಸಲಾಗುವುದು.
-
Karnataka Budget LIVE: ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
- ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶೇಷ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ʻಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆʼಯನ್ನು ರೂಪಿಸಲಾಗುವುದು. ಈ ತಾಣಗಳಲ್ಲಿ ವಾಯುಯಾನ ಹಾಗೂ ಜಲಸಾಹಸ ಪ್ರವಾಸೋದ್ಯಮ ಭಾಗೀದಾರರ ಸಹಯೋಗದೊಂದಿಗೆ ಸೀ ಪ್ಲೇನ್ ಹಾಗೂ ಹೆಲಿ ಟ್ಯಾಕ್ಸಿಗಳ ಮುಖಾಂತರ ಸಂಪರ್ಕ ಕಲ್ಪಿಸಲಾಗುವುದು. ಜೊತೆಗೆ ಜಾಯ್ ರೈಡ್, ರಿವರ್ ಕ್ರೂಸ್ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು.
- ನಮ್ಮ ರಾಜ್ಯಕ್ಕೆ ಆಗಮಿಸುವ ಎಲ್ಲಾ ಪ್ರವಾಸಿಗಳಿಗೆ ಸುಮಧುರ, ಸಕಾರಾತ್ಮಕ ಅನುಭವವನ್ನು ನೀಡುವ ಸಲುವಾಗಿ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು ಹಾಗೂ ಭದ್ರತಾ ಪೊಲೀಸ್ ಸಿಬ್ಬಂದಿಗಳಿಗೆ ಮೃದು ಕೌಶಲ್ಯ ತರಬೇತಿ ನೀಡುವುದರ ಮೂಲಕ ವೃತ್ತಿಪರತೆಯನ್ನು ವೃದ್ಧಿಗೊಳಿಸಲು ಒಂದು ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಪ್ರವಾಸ ಮಾರ್ಗದರ್ಶಕರಿಗೆ ಆಯ್ದ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ತರಬೇತಿ ನೀಡಲು ಡಿಪ್ಲೋಮಾ ಕೋರ್ಸ್ ಅನ್ನು ಪ್ರಾರಂಭಿಸಲಾಗುವುದು. ಪ್ರಮುಖ ಪ್ರವಾಸಿ ತಾಣವಾದ ಗದಗ-ಕಪ್ಪತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲಾಗುವುದು.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ PPP ಮಾದರಿಯಲ್ಲಿ ರೋಪ್-ವೇ ನಿರ್ಮಿಸಲಾಗುವುದು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯದ ಸಂರಕ್ಷಿತ 844 ಸ್ಮಾರಕಗಳ ಹಾಗೂ 1,000 ಅಸುರಕ್ಷಿತ ಸ್ಮಾರಕಗಳ ರಕ್ಷಣೆ ಮಾಡುವ ಹಿತದೃಷ್ಟಿಯಿಂದ 1,000 ಸ್ಮಾರಕ ಮಿತ್ರರನ್ನು ಗುರುತಿಸಿ ತರಬೇತಿ ನೀಡಲಾಗುವುದು. ಇವರುಗಳನ್ನು ಇಲಾಖೆಯ ಮಾನ್ಯತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು.
- ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರವು ಸಮಗ್ರವಾದ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ರೂಪಿಸಿದೆ. ಭಾರತ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ತೀರುವಳಿ ಹಾಗೂ UNESCO ಸಹಮತಿ ಪಡೆದು ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು.
-
Karnataka Budget LIVE: ಯುವ ಸಬಲೀಕರಣ ಮತ್ತು ಕ್ರೀಡೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
- ಸಶಕ್ತ ಕರ್ನಾಟಕ ಕಾರ್ಯಕ್ರಮದಡಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ, ಹಂಪಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್‌ಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುವುದು. ಇದರೊಂದಿಗೆ 10 ಜಿಲ್ಲಾ ಕೇಂದ್ರಗಳಲ್ಲಿ ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್‌ಗಳನ್ನು ಪ್ರಸಿದ್ಧ ಕ್ರೀಡಾಪಟುಗಳ ಹೆಸರಿನಲ್ಲಿ ಆಯೋಜನೆ ಮಾಡಲಾಗುವುದು.
- ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿರುವ ದಟ್ಟಗಳ್ಳಿಯಲ್ಲಿ ಗುರುತಿಸಲಾದ ಜಾಗದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಲಾಗುವುದು. ಬಂಗಾರಪೇಟೆ, ಮುದ್ದೇಬಿಹಾಳ, ಗುಳೇದಗುಡ್ಡ, ಕನಕಪುರ, ಕುಕನೂರು ಮತ್ತು ಮಸ್ಕಿಯಲ್ಲಿ ತಾಲ್ಲೂಕು ಕ್ರೀಡಾಂಗಣಗಳನ್ನು ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ವಿಜ್ಞಾನ ಸೇವೆಗಳನ್ನು ಒದಗಿಸಲು ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ತುಮಕೂರಿನಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.
- ವಿಜಯನಗರ ಜಿಲ್ಲೆಯಲ್ಲಿರುವ ಕ್ರೀಡಾಂಗಣವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು KMERC ಅನುದಾನದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾ ತರಬೇತಿ ವಸತಿ ನಿಲಯವನ್ನು ವಿರಾಜಪೇಟೆಯಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು.
-
Karnataka Budget LIVE: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ
ಕರ್ನಾಟಕ ರಾಜ್ಯದ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಬಂಜಾರ ವಿಶ್ವಕೋಶ
ಗೋರ್ ಬಂಜಾರ ಸಮುದಾಯದ ಇತಿಹಾಸ, ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ, ಆಹಾರ ಪದ್ದತಿ, ಕಸುಬು ಇತ್ಯಾದಿಗಳನ್ನು ದಾಖಲಿಸಲು ಬಂಜಾರ ವಿಶ್ವಕೋಶವನ್ನು ಪ್ರಕಟಿಸಲಾಗುವುದು. 384. ಮಕ್ಕಳಿಗಾಗಿ ಪಂಪ, ರನ್ನ, ಜನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ ಇತ್ಯಾದಿ ಪ್ರಾಚೀನ ಕವಿಗಳ ಹಾಗೂ ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು.
-
Karnataka Budget LIVE:ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯವು ಭಾರತದ ಐಟಿ ರಫ್ತುಗಳಲ್ಲಿ ಶೇ.43ರಷ್ಟು ಕೊಡುಗೆಯನ್ನು ನೀಡಿದೆ. ಹೊಸ ಐಟಿ ನೀತಿ 2025–30 ಅಡಿಯಲ್ಲಿ 2030ರ ವೇಳೆಗೆ ಸಾಫ್ಟ್‌ವೇರ್ ರಫ್ತು 11.5 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯವು 18 ಸಾವಿರಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿದ್ದು, ಜಾಗತಿಕ ಸ್ಟಾರ್ಟ್‌ಅಪ್ ಪರಿಸರಗಳಲ್ಲಿ ಕಳೆದ ವರ್ಷದ 21ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ.
ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮವು (LEAP) ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು 1,000 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.
-
Karnataka Budget LIVE: ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಕ್ರಮ
ನೇಕಾರರ ಸಮ್ಮಾನ್ ಯೋಜನೆಯಡಿ ಒಟ್ಟು 1.30 ಲಕ್ಷ ನೇಕಾರರಿಗೆ ವಾರ್ಷಿಕ 5,000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ವಿದ್ಯುತ್ ಸಹಾಯಧನ ಯೋಜನೆಯಡಿ 01 ರಿಂದ 10 ಹೆಚ್.ಪಿ. ವರೆಗೆ ಉಚಿತವಾಗಿ ಮತ್ತು 10 ರಿಂದ 20 ಹೆಚ್.ಪಿ. ವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ 20 ಹೆಚ್.ಪಿ.ಯಿಂದ 200 ಹೆಚ್.ಪಿ. ವರೆಗಿನ ವಿದ್ಯುತ್ ಮಗ್ಗ ನೇಕಾರರಿಗೆ ಪ್ರತಿ ಯೂನಿಟ್‌ಗೆ ಶೇ.50ರಷ್ಟು ಸಹಾಯಧನ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ನೇಕಾರರ ಏಳಿಗೆಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 225 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ರಾಜ್ಯದಲ್ಲಿರುವ ಸಹಕಾರಿ ನೂಲಿನ ಗಿರಣಿಗಳನ್ನು ಪ್ರೋತ್ಸಾಹಿಸಲು ಪ್ರತಿ ಯೂನಿಟ್‌ಗೆ 3 ರೂ. ರಂತೆ ವಿದ್ಯುತ್ ಸಹಾಯಧನವನ್ನು ಒದಗಿಸಲಾಗುವುದು. ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪಿ.ಎಂ. ಮಿತ್ರ ಮೆಗಾ ಜವಳಿ ಪಾರ್ಕ್‌ನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು 390 ಕೋಟಿ ರೂ.ಗಳನ್ನು ಅನುಮೋದಿಸಿದೆ. ಈ ಯೋಜನೆಗಾಗಿ 2026-27ನೇ ಸಾಲಿಗೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು.
-
Karnataka Budget LIVE: ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್
ಮೈಸೂರಿನಲ್ಲಿ ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸಲು ಮೈಸೂರು ವಿಮಾನ ನಿಲ್ದಾಣದ ಹತ್ತಿರದಲ್ಲಿ ಏರೋಸ್ಪೇಸ್ ಪಾರ್ಕ್ ಅನ್ನು KIADB ವತಿಯಿಂದ ಅಭಿವೃದ್ಧಿಪಡಿಸಲಾಗುವುದು
-
Karnataka Budget LIVE: ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲು
ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ಅನುದಾನ ಮೀಸಲಿಡಲಾಗಿದೆ, ಶಕ್ತಿ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.ಗೃಹಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ರೂ. ಹಣ ಹಣ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
-
Karnataka Budget LIVE: ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
1700 ಕೋಟಿ ಮೊತ್ತದಲ್ಲಿ 158 ಕಿ.ಮೀ. ವರೆಗೆ ರಸ್ತೆ ವೈಟ್ ಟಾಪಿಂಗ್ ಮಾಡಲಾಗುವುದು.1936 ಕೋಟಿ ಮೊತ್ತದಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು.ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಆರ್ ಪುರಂ ಮೆಟ್ರೋ ನಿಲ್ದಾಣದವರೆಗೂ,ಹೊರ ವರ್ತುಲ ರಸ್ತೆಯನ್ನ ಅಭಿವೃದ್ಧಿ ಪಡಿಸುವ 450 ಕೋಟಿಗಳ ಯೋಜನೆಗೆ ಚಾಲನೆ ನೀಡಲಾಗುವುದು.273 ಕೋಟಿ ರೂಪಾಯಿ ಮೊತ್ತದಲ್ಲಿ ರಾಜಕಾಲವೇಗಳ ಮೇಲ್ದರ್ಜೆಗೇರಿಸುವುದು. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಕಾಲೇಜುಗಳಲ್ಲಿ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ
ಕಾಲೇಜುಗಳಲ್ಲಿ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ ಜಾರಿ ಮಾಡಲಾಗುತ್ತದೆ. ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ನಿರ್ಧಾರ ಮಾಡಲಾಗಿದೆ. ಧಾರವಾಡ, ಬೆಂಗಳೂರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಅಧ್ಯಯನ ಕೇಂದ್ರ ನಿರ್ಮಿಸಲಾಗುವುದು.
-
Karnataka Budget LIVE: ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ
ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು, ವಾಯುಯಾನ ಹಾಗೂ ಜಲಸಾಹಸ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸೀ ಪ್ಲೇನ್, ಹೆಲಿಟ್ಯಾಕ್ಸಿ, ಜಾಯ್ ರೈಡ್, ರಿವರ್ ಕ್ರೂಸ್ಗೆ ಪ್ರೋತ್ಸಾಹ ನೀಡಲಾಗುತ್ತದೆ. ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ, ಪೊಲೀಸರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಗದಗ-ಕಪ್ಪತ್ತಗುಂಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿಗೊಳಿಸಲಾಗುವುದು, ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿ ಕೈಮರದವರೆಗೆ ರೋಪ್ ವೇ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಹೊಸ ಕೈಗಾರಿಕಾ ನೀತಿ 2025-30ರಡಿ ಹೆಚ್ಚುವರಿ ಪ್ರೋತ್ಸಾಹ ಧನ
ಹೊಸ ಕೈಗಾರಿಕಾ ನೀತಿ 2025-30ರಡಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅತಿ ಹಿಂದುಳಿದ ಪ್ರದೇಶಗಳಿಗೆ ಶೇ.5ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು, ಹಿಂದುಳಿದ ಪ್ರದೇಶಗಳಿಗೆ ಶೇ.3ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು, ಬೆಂಗಳೂರಿನಿಂದಾಚೆಯೂ ಕೈಗಾರಿಕಾಭಿವೃದ್ಧಿಯನ್ನ ಉತ್ತೇಜಿಸುವ ಗುರಿ ಹೊಂದಲಾಗಿದೆ. ಹೂಡಿಕೆಗೆ ಪೂರಕವಾಗುವಂತೆ ಸುಲಲಿತವಾಗಿ ಉದ್ಯಮ ನಡೆಸಲು ಕ್ರಮ ಕೈಗೊಳ್ಳಲಾಗುವುದು.
-
Karnataka Budget LIVE: ಎಲ್ಲಾ ಜಿಲ್ಲೆಗಳಲ್ಲಿ ಅಕ್ಕ ಪಡೆ ಯೋಜನೆ ಜಾರಿಗೆ ನಿರ್ಧಾರ
ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಯೋಜನೆ ಜಾರಿಗೆ ನಿರ್ಧಾರ ಮಾಡಲಾಗಿದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರ ವಿತರಿಸಲಾಗುವುದು. ಧನಶ್ರೀ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗುವುದು. 30 ಸಾವಿರ ರೂಪಾಯಿಯಿಂದ 45 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು.18 ವರ್ಷದ ಮಕ್ಕಳಿಗಾಗಿ ಮಾದಕ ವ್ಯಸನಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗುವುದು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಬಜೆಟ್ ಮಂಡನೆ ನಂತರ ಚೊಂಬು ಹಿಡಿದು ಪ್ರತಿಭಟನೆ ಮಾಡಲು ಬಿಜೆಪಿ ನಿರ್ಧಾರ
ಬಜೆಟ್ ಮಂಡನೆ ನಂತರ ಚೊಂಬು ಹಿಡಿದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ ಮಾಡಿದೆ. ವಿಧಾನಸೌಧದ ಪೂರ್ವ ದ್ವಾರದಿಂದ ಪಶ್ಚಿಮ ದ್ವಾರದವರೆಗೆ ಮೆರವಣಿಗೆ ಮಾಡಲಿದ್ದಾರೆ.
-
Karnataka Budget LIVE: ಎನ್ಸಿಸಿಗೆ ಉತ್ತೇಜನ
ಕರ್ನಾಟಕದಲ್ಲಿ NCC ಯನ್ನು ಉತ್ತೇಜಿಸುವ ಸಲುವಾಗಿ ಪ್ರಸ್ತುತ ಇರುವ 96,000 ಎನ್ಸಿಸಿ ಕೆಡೆಟ್ಗಳ ಕಾರ್ಯಬಲವನ್ನು ಮುಂದಿನ ಎರಡು ವರ್ಷಗಳಲ್ಲಿ 10,000 ಗಳಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-
Karnataka Budget LIVE: ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE:ಉತ್ತರ ಕನ್ನಡ ಜಿಲ್ಲೆ ತದಡಿ ಪ್ರದೇಶದಲ್ಲಿ ಪರಿಸರಸ್ನೇಹಿ ವಸತಿ ವ್ಯವಸ್ಥೆ
ಉತ್ತರ ಕನ್ನಡ ಜಿಲ್ಲೆ ತದಡಿ ಪ್ರದೇಶದಲ್ಲಿ ಪರಿಸರಸ್ನೇಹಿ ವಸತಿ ವ್ಯವಸ್ಥೆ ಮಾಡಲಾಗುವುದು, ಪ್ರವಾಸಿ ಮಾಹಿತಿ ಕೇಂದ್ರಗಳು, ಪರಿಸರ ಸ್ನೇಹಿ ವಾಕಿಂಗ್ ಕಾರಿಡಾರ್ ನಿರ್ಮಿಸಲಾಗುವುದು, ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು. ಈ ಪೈಕಿ 7 ರೈಲು ಮಾರ್ಗಗಳಿಗೆ ಭೂಸ್ವಾಧೀನಕ್ಕಾಗಿ 2,950 ಕೋಟಿ ರೂ. ಮೀಸಲಿಡಲಾಗಿದೆ. ನಿರ್ಮಾಣ ಕಾಮಗಾರಿಗಾಗಿ 2,682 ಕೋಟಿ ರೂ. ವೆಚ್ಚ ಮಾಡಲಾಗಿದೆ. 2026-27ನೇ ಆಯವ್ಯಯದಲ್ಲಿ 600 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE:ವಿದ್ಯಾರ್ಥಿ ಸಂಘಗಳ ಚುನಾವಣೆಗೆ ನಿರ್ಧಾರ
ರಾಜ್ಯ ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ನಿರ್ಧಾರ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
-
Karnataka Budget LIVE: ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂ
- ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ
- ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂಪಾಯಿ
- ತರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂಪಾಯಿ ನಿಗದಿ
- ತುಂಗಭದ್ರಾ ಜಲಾಶಯದ 33 ಹೊಸ ಗೇಟ್‌ಗಳ ಅಳವಡಿಕೆ
- ಟಿಬಿ ಜಲಾಶಯದ ಸಾಮರ್ಥ್ಯ ಹೆಚ್ಚಿಸಲು ಸಮತೋಲನ ಜಲಾಶಯ
- ಹನೂರು ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ
- ಭದ್ರಾ ಮೇಲ್ದಂಡೆ ಯೋಜನೆಯಿಂದ 157 ಕೆರೆ ತುಂಬಿಸಲು ಕ್ರಮ
- ಕೊರಟಗೆರೆ ತಾಲೂಕಿನಲ್ಲಿ 1.2 ಟಿಎಂಸಿ ಸಾಮರ್ಥ್ಯದ ಜಲಾಶಯ
- 237 ಕೋಟಿ ವೆಚ್ಚದಲ್ಲಿ 164 ಕೆರೆಗಳ ತುಂಬಿಸುವ ಯೋಜನೆ
- ವೃಷಭಾವತಿ ವ್ಯಾಲಿಯಲ್ಲಿ 650ಕೋಟಿ ವೆಚ್ಚದಲ್ಲಿ 119 ಕೆರೆ ಭರ್ತಿ
-
Karnataka Budget LIVE: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು, AAI ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿಪ್ರಾಯ ಪಡೆಯಲಾಗುವುದು, 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯ ಸಾಧ್ಯತಾ ವರದಿ ಸಲ್ಲಿಸಲಾಗುವುದು, 7 ದೇಶಿಯ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 1,593 ಕೋಟಿ ರೂ. ಮೀಸಲಿಡಲಾಗುವುದು. ಏರ್ಪೋರ್ಟ್ಗಳ ಅಭಿವೃದ್ಧಿಗೆ ಈ ವರ್ಷ 200 ಕೋಟಿ ರೂ. ಅನುದಾನ,ವಿಜಯಪುರ, ಶಿವಮೊಗ್ಗದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಇನ್ಮುಂದೆ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ: ಸಿದ್ದರಾಮಯ್ಯ
ಇನ್ಮುಂದೆ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿಯಾಗಲಿದೆ, ಬೆಲೆ ನಿಗದಿ ಮಾಡುವ ಜವಾಬ್ದಾರಿ ಉತ್ಪಾದಕರ ಹೆಗಲಿಗೆ ಬಿದ್ದಿದೆ, ಮದ್ಯದ ಉತ್ಪಾದಕರಿಗೆ ಹೊಸ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರ ಆಗುವುದಿಲ್ಲ, ಇನ್ಮುಂದೆ ಮದ್ಯದ ಬೆಲೆ ಏರಿಕೆ ಉತ್ಪಾದಕರೇ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಐ.ವಿ.ಎಫ್ ಕೇಂದ್ರಗಳನ್ನು ಸ್ಥಾಪಿಸಲು ಅನುದಾನ
ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐ.ವಿ.ಎಫ್ ಕೇಂದ್ರಗಳನ್ನು ಸ್ಥಾಪಿಸಲು ತಲಾ ಒಂದು ಕೋಟಿ ರೂ. ನೀಡಲಾಗುವುದು.
-
Karnataka Budget LIVE: ತಾಯಂದಿರ ಮರಣ ಪ್ರಮಾಣ ಇಳಿಕೆ
ಕಳೆದ ವರ್ಷ ಪ್ರಾರಂಭಿಸಲಾದ, ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.24ರಷ್ಟು ಇಳಿಕೆಯಾಗಿರುತ್ತದೆ. ಈ ಅಭಿಯಾನದಡಿ ಪ್ರತಿ ತಾಯಂದಿರ ಮರಣವನ್ನು ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಸೇವೆಗಳನ್ನು ನೀಡಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಿಗೆ ಮಾರ್ಗದರ್ಶನ, ಹೆಚ್ಚಿನ ಮಾನವ ಸಂಪನ್ಮೂಲ ಮತ್ತು ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ.
-
Karnataka Budget LIVE: Karnataka Budget LIVE: ಕಲ್ಯಾಣ ಕರ್ನಾಟಕದಲ್ಲಿ ಕಾಲೇಜುಗಳ ಅಭಿವೃದ್ಧಿ
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್ ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್ಗಳ ಬಲವರ್ಧನೆ, ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ADB ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ʻಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆʼ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್ಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ADB ನೆರವಿನೊಂದಿಗೆ 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
-
Karnataka Budget LIVE: ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡ ಪುನರ್ ನಿರ್ಮಾಣ
ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.
-
Karnataka Budget LIVE: 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಣ
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲಾಗಿದೆ.
-
Karnataka Budget LIVE: ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ
ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತದೆ, ಪ್ರಸಕ್ತ ಸಾಲಿನಲ್ಲಿ 15 ಸಾವಿರ ಭೋದಕ ಹುದ್ದೆಗಳ ನೇಮಕಾತಿ ಮಾಡಲಾಗುವುದು, 800 ಶಾಲೆಗಳು ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಕ್ಕೆ ನಿರ್ಧರಿಸಲಾಗುತ್ತದೆ. 800 ಶಾಲೆಗಳ ಉನ್ನತೀಕರಣಕ್ಕೆ 3900 ಕೋಟಿ ರೂ. ಅನುದಾನ ನೀಡಲಾಗುವುದು.ಪ್ರಾಥಮಿ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡಲಾಗುತ್ತದೆ.
1ರಿಂದ 10ನೇ ತರಗತಿಯವರೆಗೆ ಉಚಿತ ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗುತ್ತದೆ.565 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 75 ಕೋಟಿ ರೂ. ಮೀಸಲು, ಶಾಲಾ-ಕಾಲೇಜು ನಿರ್ವಹಣೆಗಾಗಿ 125 ಕೋಟಿ ರೂ. ಅನುದಾನ ನೀಡಲಾಗುವುದು, ಶಿಕ್ಷಕರ ಇಂಗ್ಲಿಷ್ ಭಾಷಾ ತರಬೇತಿ 24 ಕೋಟಿ ರೂ. ಅನುದಾನ, 8ರಿಂದ 12ನೇ ತರಗತಿಗೆ AI ಆಧಾರಿತ ಕಲಿಕಾ ಸೌಲಭ್ಯ, ವಿದ್ಯಾರ್ಥಿಗಳ ಒತ್ತಡ ನಿವಾರಣೆಗೆ ಆರೋಗ್ಯ ಸಲಹೆಗಾರರ ನೇಮಕ ಮಾಡಲಾಗುವುದು.
-
Karnataka Budget LIVE: ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ
ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೆ.ಆರ್.ಪುರಂನಿಂದ ಮೈಸೂರು ರಸ್ತೆ ವರೆಗೆ 40 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. 40 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ 17 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಿಸಲಾಗುತ್ತದೆ. ಹೆಬ್ಬಾಳ-ಸಿಲ್ಕ್ ಬೋರ್ಡ್ವರೆಗೂ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ 17,780 ಕೋಟಿ ರೂಪಾಯಿ ಮೊತ್ತಕ್ಕೆ ಟೆಂಡರ್ ಕರೆಯಲಾಗುತ್ತದೆ. ಹೆಬ್ಬಾಳ-ಮೇಕ್ರಿ ಸರ್ಕಲ್ವರೆಗೂ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ.ಸುರಂಗ ಮಾರ್ಗ ಹಾಗೂ ಮೇಲ್ಸೇತುವೆ ರಸ್ತೆಗೆ 2,250 ಕೋಟಿ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಜಿಎಸ್ಸಿಟಿ ಸಂಗ್ರಹಣೆಯಲ್ಲಿ ಕುಸಿತದಿಂದ ಹಣಕಾಸು ಒತ್ತಡ
ಜಿ.ಎಸ್.ಟಿ ಸಂಗ್ರಹಣೆಯಲ್ಲಿನ ಕುಸಿತದಿಂದ ರಾಜ್ಯಗಳಲ್ಲಿ ಹೆಚ್ಚಿನ ಹಣಕಾಸು ಒತ್ತಡ ಉಂಟಾಗಿದೆ. ತೆರಿಗೆ ರಚನೆಯಲ್ಲಿನ ಬದಲಾವಣೆ ಮತ್ತು ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಾಗಿ ರಾಜ್ಯಗಳ ರಾಜಸ್ವ ಸಂಗ್ರಹಣೆಯ ಮೇಲೆ ನೇರವಾಗಿ ಪ್ರಭಾವ ಬೀರಿದೆ. ರಾಜ್ಯಗಳು ರಾಜಸ್ವ ನಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮಾದಕ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳ ಮೇಲೆ ಸೆಸ್ ಮತ್ತು ಇತರೆ ತೆರಿಗೆಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ರಾಜಸ್ವವನ್ನು ಸಂಗ್ರಹಿಸುತ್ತಿದ್ದು, ಈ ಆದಾಯದ ಸಂಪೂರ್ಣ ಮೊತ್ತವು ಕೇಂದ್ರ ಸರ್ಕಾರದ ಬೊಕ್ಕಸವನ್ನು ಸೇರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE:ಜೈವಿಕ ತಂತ್ರಜ್ಞಾನ, ಸ್ಟಾರ್ಟ್ಅಪ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಕ್ಷೇತ್ರಗಳಲ್ಲಿ ಹೂಡಿಕೆ: ಸಿದ್ದರಾಮಯ್ಯ
ಕರ್ನಾಟಕದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಸ್ಟಾರ್ಟ್ಅಪ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಕ್ಷೇತ್ರಗಳಲ್ಲಿನ ಸಾಧನೆಗಳು ಜಾಗತಿಕ ಹೂಡಿಕೆ ಮತ್ತು ಪ್ರತಿಭೆಗಳನ್ನು ಸೆಳೆಯುತ್ತಿವೆ. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಹೆಚ್ಚಿನ ಬಂಡವಾಳವನ್ನು ಆಕರ್ಷಿಸುತ್ತಿದೆ. ರಾಜ್ಯವು ರೂಪಿಸಿರುವ ಹೊಸ ಕೈಗಾರಿಕಾ ನೀತಿಯಿಂದ ಹಂತ-2 ಮತ್ತು ಹಂತ-3 ನಗರಗಳಲ್ಲಿಯೂ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಮನೆ ಇಲ್ಲದವರಿಗೆ ಮನೆ, ಕೆಲಸ ಇಲ್ಲದವರಿಗೆ ಕೆಲಸ
ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ಒತ್ತು: ಸಿದ್ದರಾಮಯ್ಯ
ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ಕಳೆದ ವರ್ಷ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ವನ್ನು ಜಾರಿಗೊಳಿಸಿ 8,600 ಕೋಟಿ ರೂ. ಗಳ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರ 2ನೇ ಹಂತವಾಗಿ 2026-27ನೇ ಸಾಲಿನಲ್ಲಿ 4,000 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ವಿವಿಧ ಇಲಾಖೆಗಳಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವೆಷ್ಟು?
- ಶಿಕ್ಷಣ ಇಲಾಖೆಗೆ 47,224 ಕೋಟಿ ರೂ. ಅನುದಾನ ಹಂಚಿಕೆ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ರೂ.
- ಇಂಧನ ಇಲಾಖೆಗೆ 29,947 ಕೋಟಿ ರೂ. ಅನುದಾನ ಹಂಚಿಕೆ
- ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,559 ಕೋಟಿ ರೂ. ಅನುದಾನ
- ಜಲಸಂಪನ್ಮೂಲ ಇಲಾಖೆಗೆ 22,436 ಕೋಟಿ ರೂ. ಅನುದಾನ
- ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ ರೂ.
- ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 23,100 ಕೋಟಿ ರೂ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,817 ಕೋಟಿ ರೂ.
- ಕಂದಾಯ ಇಲಾಖೆಗೆ 19,843 ಕೋಟಿ ರೂ. ಅನುದಾನ ಹಂಚಿಕೆ
- ಸಮಾಜ ಕಲ್ಯಾಣ ಇಲಾಖೆಗೆ 18,612 ಕೋಟಿ ರೂ. ಅನುದಾನ
- ಲೋಕೋಪಯೋಗಿ ಇಲಾಖೆಗೆ 11,424 ಕೋಟಿ ರೂ. ಹಂಚಿಕೆ
- ಆಹಾರ ಇಲಾಖೆಗೆ 7,942 ಕೋಟಿ ರೂ. ಅನುದಾನ ಹಂಚಿಕೆ
- ಕೃಷಿ ಇಲಾಖೆಗೆ 8,373 ಕೋಟಿ ರೂ. ಅನುದಾನ ಹಂಚಿಕೆ
- ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗೆ 4,084 ಕೋಟಿ ರೂ.
- ಇತರೆ ಇಲಾಖೆಗಳಿಗೆ ಒಟ್ಟು 1,72,757 ಕೋಟಿ ರೂ. ಅನುದಾನ
-
Karnataka Budget LIVE: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 13,000 ಕೋಟಿ ರೂ. ಅನುದಾನ
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 13,000 ಕೋಟಿ ರೂ. ಅನುದಾನ ನೀಡಲಾಗುವುದು, ಮೂರು ವರ್ಷಗಳಲ್ಲಿ ಅವಧಿಯಲ್ಲಿ 13,000 ಕೋಟಿಗಳ ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಿ ಸಿಎಂ ಘೋಷಣೆ
ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ತಲಾ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಮುನಿರಾಬಾದ್-ಟಿ.ಬಿ ಡ್ಯಾಂ ಬಳಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಮೀನುಗಾರಿಕೆಗಾಗಿ ಪೋತ್ರಾಹಧನ 20 ಸಾವಿರ ರೂ.ಗೆ ಏರಿಕೆ
ಮೀನುಗಾರಿಕೆಗಾಗಿ ಪೋತ್ರಾಹಧನ 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಮೀನುಗಾರಿಕಾ ವಿವಿಯಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್,ಮೀನು ಮಾರಾಟ ಮಾಡಲು ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆಯಲ್ಲಿ ಸ್ಥಾಪನೆ ಮಾಡಲಾಗುವುದು. 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಕೃಷಿ ಸಾಲ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಮಲೆನಾಡು, ಕರಾವಳಿಯಲ್ಲಿ ಕಾಲು ಸಂಕ ನಿರ್ಮಾಣ
ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಹಾಗೂ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ 300 ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ, ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿ ಆರ್ ಸಿ ಕೇಂದ್ರಗಳಲ್ಲಿ ಓರ್ವ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರ ನೇಮಕ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದಾರೆ.
-
Karnataka Budget LIVE: ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ
ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ ಮಾಡಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಸಸ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುತ್ತದೆ. ಕೃಷಿ ಮಾಹಿತಿಗಾಗಿ ಎಐ ತಂತ್ರಜ್ಞಾನ ಆಧಾರಿತ ರೈತ ಕರೆ ಕೇಂದ್ರ ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
-
Karnataka Budget LIVE: ಪಶು ವೈದ್ಯ ಸಂಸ್ಥೆಗಳಿಗಾಗಿ ಹೊಸದಾಗಿ 100 ಕಟ್ಟಡ ನಿರ್ಮಾಣ : ಸಿದ್ದರಾಮಯ್ಯ
ಪಶು ವೈದ್ಯ ಸಂಸ್ಥೆಗಳಿಗಾಗಿ ಹೊಸದಾಗಿ 100 ಕಟ್ಟಡ ನಿರ್ಮಾಣ ಮಾಡಲಾಗುತ್ತದೆ, ಬೆಳಗಾವಿ, ಕಲಬುರಗಿಯಲ್ಲಿ ಕುರಿ ಸಾಕಾಣಿಕೆಗೆ ಪೋತ್ಸಾಹ ನೀಲಡಾಗುತ್ತದೆ. ಹಸು, ಎಮ್ಮೆ ಖರೀದಿಸಲು ಪ್ರೋತ್ಸಾಹ ಧನಕ್ಕೆ 40 ಕೋಟಿ ರೂ. ಮೀಸಲಿಡಲಾಗುವುದು, 20 ತಾಲೂಕು ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.10 ಕೋಟಿ ರೂ. ವೆಚ್ಚದಲ್ಲಿ 15 ಪಶು ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸಲಾಗುವುದು. ಮೈಸೂರಿನಲ್ಲಿ ಬೊಯರ್ ಮೇಕೆ ತಳಿ ಸಂವರ್ಧನಾ ಕೇಂದ್ರ ಸ್ಥಾಪಿಸಲಾಗುವುದು. ಬಂಡೂರು ಕುರಿ ಸಂವರ್ಧನಾ ಕೇಂದ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
ಅಡಿಕೆ ಬೆಳೆಗಾರರು, ತೆಂಗು ಬೆಳೆಗಾರರ ಸಮಸ್ಯೆ ನಿವಾರಣೆಗೆ 10 ಕೋಟಿ ರೂ. ಮೀಸಲು: ಸಿದ್ದರಾಮಯ್ಯ
ಅಡಿಗೆ ಬೆಳೆಗಾರರು ಅನುಭವಿಸುತ್ತಿರುವ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲು 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಆರೋಗ್ಯ ಕ್ಷೇತ್ರಕ್ಕೆ ಕರ್ನಾಟಕ ಬಜೆಟ್‌ನಲ್ಲಿ ಸಿಕ್ಕಿದ್ದೇನು?
ಆರೋಗ್ಯ ಇಲಾಖೆ ಮೂಲ ಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂ. ಮೀಸಲಿಡಲಾಗುವುದು, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲಾಗುವುದು. ಐಸಿಯುಗಳಿಗೆ ಉಪಕರಣ ಮೇಲ್ದರ್ಜೆಗೇರಿಸಲು 45 ಕೋಟಿ ರೂಪಾಯಿ ಮೀಸಲಿಡಲಾಗುವುದು. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆಯಲಾಗುವುದು. 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್ ನೀಡಲಾಗುವುದು. ಮಾರಣಾಂತಿಕ ಕಾಯಿಲೆ ರೋಗಿಗಳಿಗೆ ಕೇರಳ ಮಾದರಿ ಗೃಹಾಧಾರಿತ ಆರೈಕೆ ಒದಗಿಸಲಾಗುವುದು. ಇಸ್ಕಾನ್ ಮೂಲಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರ ಪೂರೈಕೆ ಮಾಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಶೀಘ್ರ ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಸಿರಿಧಾನ್ಯ ಉತ್ಪನ್ನ ಉತ್ತೇಜನಕ್ಕಾಗಿ ಮಿಲೆಟ್ ಹಬ್ ನಿರ್ಮಾಣ
ಸಿರಿಧಾನ್ಯ ಉತ್ಪನ್ನ ಉತ್ತೇಜನಕ್ಕಾಗಿ ಮಿಲೆಟ್ ಹಬ್ ನಿರ್ಮಿಸಲಾಗುತ್ತದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಜಾರಿ ಮಾಡಲಾಗುತ್ತದೆ. ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ ಮಾಡಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಸಸ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುತ್ತದೆ. ಕೃಷಿ ಮಾಹಿತಿಗಾಗಿ AI ತಂತ್ರಜ್ಞಾನ ಆಧಾರಿತ ರೈತ ಕರೆ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಚಿತ್ರದುರ್ಗದಲ್ಲಿ ಕೃಷಿ ಉದ್ದಿಮೆ ತರಬೇತಿ ಕೇಂದ್ರ ಉನ್ನತೀಕರಣಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ 2026ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: ಬೆಂಗಳೂರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ ಸ್ಥಾಪನೆ
ಬೆಂಗಳೂರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ ಸ್ಥಾಪನೆ ಮಾಡುವುದಾಗಿ ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆಜಿಎಫ್‌ನಲ್ಲಿ ESI ಆಸ್ಪತ್ರೆ ಉನ್ನತೀಕರಣಗೊಳಿಸುವುದಾಗಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: ಈ ವರ್ಷ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಹಣ ಮೀಸಲು
ಈ ವರ್ಷ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಹಣ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: 60 ಕೋಟಿ ರೂ. ವೆಚ್ಚದಲ್ಲಿ ನೂತನ 10 GTTC ಕೇಂದ್ರಗಳ ಸ್ಥಾಪನೆ
60 ಕೋಟಿ ರೂ. ವೆಚ್ಚದಲ್ಲಿ ನೂತನ10 GTTC ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ, ಕಾರ್ಮಿಕರ ಮಕ್ಕಳಿಗಾಗಿ ನೂತನ 62 ವಸತಿ ಶ್ರಮಿಕ ಶಾಲೆ ಆರಂಭಿಸಲಾಗುತ್ತದೆ. ಒಟ್ಟು 104 ಶಾಲೆಗಳ ಆರಂಭಕ್ಕೆ ಆದ್ಯತೆ ನೀಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ತೆರೆಯಲಾಗುತ್ತದೆ. 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಕಾಡೆಮಿ ಸ್ಥಾಪನೆ ಮಾಡಲಾಗುತ್ತದೆ. ಕಾರ್ಮಿಕರ ವಿಮಾ ಸೊಸೈಟಿಯಿಂದ ಹುಬ್ಬಳ್ಳಿ, ಇಂದಿರಾನಗರ , ಮೈಸೂರು, ದೊಡ್ಡ ಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: ಸಾರಿಗೆ ಇಲಾಖೆಗೆ 15,500 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ
ಸಾರಿಗೆ ಇಲಾಖೆಗೆ 15,500 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ ನೀಡಲಾಗಿದೆ. ನೊಂದಣಿ ಹಾಗೂ ಮುದ್ರಾಂಕ ಇಲಾಖೆಗೆ 29 ಸಾವಿರ ಕೋಟಿ ರಾಜಸ್ವ ಗುರಿ, ಅಬಕಾರಿ ಇಲಾಖೆ ಇಲಾಖೆಯಲ್ಲಿ 45,000 ಕೋಟಿ ರೂ. ಆದಾಯ ಗುರಿ ನೀಡಲಾಗಿದೆ.
-
Karnataka Budget LIVE: 56,432 ಉದ್ಯೋಗ ಭರ್ತಿ: ಸಿದ್ದರಾಮಯ್ಯ
ಈ ವರ್ಷ 56,432 ಉದ್ಯೋಗ ಭರ್ತಿಗೆ ಚಾಲನೆ ನೀಡಲಾಗುತ್ತಿದೆ. ನೇಮಕಾತಿಗೆ ವಯೋಮಿತಿ 5 ವರ್ಷಗಳ ಸಡಿಲಿಕೆ ನೀಡಿದ್ದೇವೆ . ಕರ್ನಾಟಕ 45 ಉತ್ಪನ್ನಗಳಿಗೆ GI ಮಾನ್ಯತೆ ದೊರೆತಿದೆ.ಮುಜರಾಯಿ ಇಲಾಖೆ ವ್ಯಾಪ್ತಿಯ 259 ಕಲ್ಯಾಣಿಗಳ ಪುನರುಜ್ಜೀವನ ಮಾಡಲಾಗುತ್ತದೆ. ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಗೆ 100 ಕೋಟಿ ರೂ. ಅನುದಾನ ನೀಡಲಾಗುತ್ತದೆ.
-
Karnataka Budget LIVE: ಕರ್ನಾಟಕದ ಒಟ್ಟು ಸಾಲ 8 ಲಕ್ಷ 24,000 389 ಕೋಟಿ ರೂ. ಇದೆ: ಸಿದ್ದರಾಮಯ್ಯ
ಕರ್ನಾಟಕದ ಒಟ್ಟು ಸಾಲ 8 ಲಕ್ಷ 24,000 389 ಕೋಟಿ ರೂ. ಇದೆ, ಗಣಿಗಾರಿಕೆಯಿಂದ 11,000 ಕೋಟಿ ರೂಪಾಯಿ ಶುಲ್ಕ ಅಂದಾಜು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್ ವೇ
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ. ಪಿಪಿಪಿ ಮಾದರಿಯಲ್ಲಿ ರೋಪ್ ವೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: ಯು.ಆರ್ ಅನಂತ ಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ
ಯು.ಆರ್ ಅನಂತ ಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ತೆರೆಯಲಾಗುತ್ತದೆ, ಕುವೆಂಪು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು ಎಂದು 2026-27ನೇ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
-
Karnataka Budget LIVE: ಹಾಲು ಕೊಡುವ ಹಸುಗಳ ಆರೈಕೆ ಬಗ್ಗೆ ಸಿದ್ದರಾಮಯ್ಯ ಮಾತು
ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ, ಹೆಚ್ಚು ಹಾಲು ಕೊಡುವ ಹಸುಗಳಿಗೆ ಹೆಚ್ಚು ಆರೈಕೆ ಮಾಡಬೇಕು, ಒಕ್ಕೂಟ ಸರ್ಕಾರವೂ ಸಂವೇದನಾ ಶೀಲತೆಯಿಂದ ವರ್ತಿಸಬೇಕು, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆರ್ಥಿಕ ಸುಧಾರಣೆ ಆಗ್ತಿದೆ, ಸೌಕರ್ಯ ಅಭಿವೃದ್ದಿಗೂ ನಾವು ಗಮನ ಹರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ರಾಜ್ಯದಲ್ಲಿ ಗ್ಯಾರಂಟಿ ಮೂಲಕ ದೊಡ್ಡ ಸಾಧನೆ ಮಾಡಿದ್ದೇವೆ: ಸಿದ್ದರಾಮಯ್ಯ
ರಾಜ್ಯದಲ್ಲಿ ಗ್ಯಾರಂಟಿ ಮೂಲಕ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
-
Karnataka Budget LIVE: ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ.
-
Karnataka Budget LIVE: ಬಜೆಟ್ಗೆ ಅನುಮೋದನೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಬಜೆಟ್ಗೆ ಅನುಮೋದನೆ ಸಿಕ್ಕಿದೆ.
-
Karnataka Budget LIVE: ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ, ಬಜೆಟ್ ಮಂಡನೆಗೆ ಅನುಮೋದನೆ ಪಡೆಯಲಿದ್ದಾರೆ.
-
Karnataka Budget LIVE: ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಂಪು ಸೂಟ್ಕೇಸ್ನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಲಿದೆ.
-
Karnataka Budget LIVE: ಬಸ್ ನಿಲ್ದಾಣಗಳಲ್ಲಿ ಕರ್ನಾಟಕ ಬಜೆಟ್ ನೇರ ಪ್ರಸಾರ
ಇಂದು ಸಿದ್ದರಾಮಯ್ಯ 17ನೇ ದಾಖಲೆಯ ಬಜೆಟ್ ಮಂಡನೆ ಹಿನ್ನೆಲೆ, ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಇರಲಿದೆ. ರಾಜ್ಯದ ಆಯ್ದ 230 ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಮಾಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಬಜೆಟ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಗಳೂರಿನ 6 ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ವೀಕ್ಷಿಸಬಹುದು.
-
Karnataka Budget LIVE: ಕರ್ನಾಟಕ ಬಜೆಟ್, ಬೆಂಗಳೂರಿನ ನಿರೀಕ್ಷೆಗಳೇನು?
ಬೆಂಗಳೂರಿನ ಅಭಿವೃದ್ಧಿಗೆ ಮತ್ತಷ್ಟು ಅನುದಾನ ಮೀಸಲಿಡಬಹುದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬಹುದು, ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಮಾರ್ಗ, ಐಟಿ ಕಾರಿಡಾರ್ ಸ್ಥಾಪನೆಗೆ ಹಣ ಮೀಸಲಿಡಬಹುದು, ಕೈಗೆಟುಕುವ ದರದಲ್ಲಿ ವಸತಿ, ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಪೂರೈಕೆಯಂತಹ ಪ್ರಮುಖ ಬೇಡಿಕೆ ಈಡೇರಿಸುವ ನಿರೀಕ್ಷೆ. ವಿದ್ಯುತ್ ತೆರಿಗೆ ಇಳಿಕೆ, ಆಸ್ತಿ ತೆರಿಗೆ ರಿಯಾಯಿತಿ ನೀಡುವ ನಿರೀಕ್ಷೆ ಇದೆ.
-
Karnataka Budget LIVE: ಲಕ್ಕುಂಡಿ ಅಭಿವೃದ್ಧಿಗೆ ಹಣ ಮೀಸಲು
ಬಜೆಟ್ ನಲ್ಲಿ ಲಕ್ಕುಂಡಿ ಅಭಿವೃದ್ಧಿಗೆ 100ಕೋಟಿ ರೂ. ನೀಡುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿತ್ತು. ಲಕ್ಕುಂಡಿ ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರೇ ಸಜ್ಜಾಗಿದ್ದಾರೆ.
-
Karnataka Budget LIVE: ತೆರಿಗೆ ಆದಾಯ
2020-21ರಲ್ಲಿ ರಾಜ್ಯದ ತೆರಿಗೆ ಆದಾಯ ಕುಸಿತ ಕಂಡಿತ್ತು. ಆದರೆ 2021-22ರಿಂದ ಅದು ವೇಗವಾಗಿ ಏರಿಕೆ ಕಾಣತೊಡಗಿತು. 2022-23ರಲ್ಲಿ ತೆರಿಗೆ ಸಂಗ್ರಹಣದಲ್ಲಿ ದೊಡ್ಡ ಜಿಗಿತ ಕಂಡುಬಂದಿತು. 2023-24ರಲ್ಲಿ ಬೆಳವಣಿಗೆ ಬಹುತೇಕ ಸ್ಥಗಿತಗೊಂಡಂತಾಗಿದ್ದರೂ, 2024-25 ಮತ್ತು 2025-26ರಲ್ಲಿ ಮತ್ತೆ ವೇಗ ಪಡೆದಿದೆ. 2025-26ರಲ್ಲಿ ತೆರಿಗೆ ಆದಾಯವು 2 ಲಕ್ಷ ಕೋಟಿ ರೂ.ಗೂ ಅಧಿಕವಾಗುವ ನಿರೀಕ್ಷೆ ವ್ಯಕ್ತವಾಗಿದೆ.
-
Karnataka Budget LIVE: ಬಜೆಟ್ ನಿರೀಕ್ಷೆಗಳೇನು?
ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ನಿರೀಕ್ಷೆ ಇದೆ. ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಿಗೆ ಹೊಸ ಕಾಲೇಜುಗಳ ಘೋಷಣೆ ಸಾಧ್ಯತೆ ದಟ್ಟವಾಗಿದೆ.ಬೆಳಗಾವಿ-ಹುಬ್ಬಳ್ಳಿ ರೈಲು ಮಾರ್ಗ, ಕೈಗಾರಿಕಾ ಆಧುನೀಕರಣ, ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯ?,ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನಿರೀಕ್ಷೆ ಇದೆ.
-
Karnataka Budget LIVE: ಬಜೆಟ್ ಅಧಿವೇಶನ
ಬಜೆಟ್ ಅಧಿವೇಶನವು ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ ನಡೆಯಲಿದ್ದು, ಉಭಯ ಸದನಗಳಲ್ಲಿ 14 ದಿನಗಳ ಚರ್ಚೆ ನಡೆಯಲಿದೆ. ಮಾಡಿದ ಘೋಷಣೆಗಳು ಕರ್ನಾಟಕದ ಆರ್ಥಿಕ ದಿಕ್ಕು, ಅಭಿವೃದ್ಧಿ ಆದ್ಯತೆಗಳು ಮತ್ತು ಮುಂಬರುವ ವರ್ಷದ ಕಲ್ಯಾಣ ಬದ್ಧತೆಗಳ ಬಗ್ಗೆ ಚರ್ಚೆ ನಡೆಯಲಿದೆ.
-
Karnataka Budget LIVE: ಬಜೆಟ್ ಗಾತ್ರ ಎಷ್ಟಿರಬಹುದು?
ಈ ವರ್ಷದ ರಾಜ್ಯ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆಯ ಅಂದಾಜುಗಳು ಸೂಚಿಸುತ್ತವೆ. ಅದೇ ಸಮಯದಲ್ಲಿ ಸಾಲದ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಹಣಕಾಸು ನಿರ್ವಹಣೆ ಹೇಗೆ ಮಾಡುತ್ತದೆ ಎಂದು ಕಾದು ನೋಡಬೇಕಿದೆ.
-
Karnataka Budget LIVE: 2026ರ ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಒತ್ತು?
ಈ ಬಾರಿಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆಯನ್ನು ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತದೆಯೇ ಎಂಬ ಕುತೂಹಲವಿದೆ. ಮೂಲಸೌಕರ್ಯ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಹೀಗಾಗಿ, ಸಿದ್ದರಾಮಯ್ಯ ಮಂಡಿಸಲಿರುವ ಈ ಬಜೆಟ್‌ನತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.
-
Karnataka Budget LIVE: ಕರ್ನಾಟಕ ಬಜೆಟ್ ಲೈವ್ ಎಲ್ಲಿ ವೀಕ್ಷಿಸಬಹುದು?
ಬಜೆಟ್ 2026 ರ ನೇರ ಪ್ರಸಾರವನ್ನು ನೀವು ಟಿವಿಯಲ್ಲಿ ನಿಮ್ಮ ನೆಚ್ಚಿನ ಟಿವಿ9 ಕನ್ನಡದಲ್ಲಿ ವೀಕ್ಷಿಸಬಹುದು. ಇನ್ನು ನೀವು ಇದ್ದಲ್ಲೇ ಮೊಬೈಲ್ ನಲ್ಲಿ ನೋಡುವುದಾದರೆ ಟಿವಿ9 ಯುಟ್ಯೂಬ್ನಲ್ಲೂ ಸಹ ನೋಡಬಹುದು. ಹಾಗೇ ಬಜೆಟ್‌ನಲ್ಲಿ ಏನೇನು ಘೋಷಣೆಯಾಗುತ್ತೆ ಎನ್ನುವುದನ್ನು ತಿಳಿಯಲು ಟಿವಿ9 ಕನ್ನಡ ವೆಬ್ಸೈಟ್ನ ಲೈವ್ ಪೇಜ್ ನೋಡಿ. ಹೀಗೆ ದೃಶ್ಯ ಜೊತೆ ಟೆಕ್ಸ್ಟ್ ಫಾರ್ಮೆಂಟ್ನಲ್ಲೂ ಟಿವಿ9 ನಿಮಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತೆ.
-
Karnataka Budget Live: ಆರ್ ಅಶೋಕ್ ಕಿಡಿ
ರಾಜ್ಯ ಬಜೆಟ್ ಮಂಡನೆಗೂ ಮುನ್ನ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಸುಮಾರು 1.15 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಮತ್ತು ಸಾರ್ವಜನಿಕರ ಮೇಲೆ ಹೊಸ ತೆರಿಗೆಗಳನ್ನು ವಿಧಿಸಬಹುದು ಎಂದು ಹೇಳಿದ್ದಾರೆ.
Karnataka Budget 2026-27 LIVE News Updates in Kannada: ಬೆಂಗಳೂರು, ಮಾರ್ಚ್ 06: ಇಂದು ಎಲ್ಲರ ಚಿತ್ತ ಕರ್ನಾಟಕ ಬಜೆಟ್(Karnataka Budget) ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಇಂದು 2026-27ನೇ ಸಾಲಿನ ದಾಖಲೆಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇದು ಅವರ 17ನೇ ಬಜೆಟ್. ಬಜೆಟ್ ಗಾತ್ರ ನಾಲ್ಕೂವರೆ ಲಕ್ಷ ಕೋಟಿ ರೂ.ತಲುಪುವ ನಿರೀಕ್ಷೆ ಇದೆ. 2025ರಲ್ಲಿ ಆದಾಯ ಸಂಗ್ರಹದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದ ಕಾರಣ 2026-27ನೇ ಸಾಲಿನ ಬಜೆಟ್ ಮೇಲೆ ಅದರ ಪರಿಣಾಮ ಗೋಚರಿಸುವ ಸಾಧ್ಯತೆಗಳಿವೆ.
1995-96ರಲ್ಲಿ ಮೊದಲ ಮುಂಗಡಪತ್ರ ಮಂಡಿಸಿದ್ದ ಸಿದ್ದರಾಮಯ್ಯ ಕಳೆದ 30 ವರ್ಷಗಳಲ್ಲಿ ಇದೀಗ 17 ಬಜೆಟ್ ಮಂಡಿಸಲಿದ್ದಾರೆ. 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನೂ ಹೊಂದಿದ್ದರು. ಆ ಅವಧಿಯ ಎಲ್ಲಾ ಬಜೆಟ್‌ಗಳನ್ನ ಅವರೇ ಮಂಡಿಸಿದ್ದರು. ಎರಡನೇ ಅವಧಿ ಮುಖ್ಯಮಂತ್ರಿಯಾದ ಬಳಿಕ ಈವರೆಗೂ ಮೂರು ಬಾರಿ ಬಜೆಟ್ ಮಂಡಿಸಿದ್ದು, 4ನೇ ಬಜೆಟ್ ಮಂಡನೆಗೆ ಈಗ ಸಿದ್ಧವಾಗಿದ್ದಾರೆ.
2026ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡಬಹುದು, ಪಂಜಾಬ್ ಮಾದರಿಯಲ್ಲಿ ರೈತರ ಓಡಾಟಕ್ಕೆ ಟೋಲ್ ಫ್ರೀ ವ್ಯವಸ್ಥೆ, ನಗರಗಳ ಅಭಿವೃದ್ಧಿಗೆ ಮೆಗಾಸಿಟಿ ಯೋಜನೆ ಘೋಷಣೆ ಸಾಧ್ಯತೆ, ಟನಲ್ ರೋಡ್ ಹಾಗೂ ಡಬಲ್ ಡೆಕ್ಕರ್ ರೋಡ್ ಯೋಜನೆ ವಿಸ್ತರಣೆ, ರೈತರ ಎಲ್ಲಾ ಬೆಳೆಗಳಿಗೆ ವಿಶೇಷ ವಿಮಾ ಯೋಜನೆ ಘೋಷಣೆ ಸಾಧ್ಯತೆ ಇದೆ.
ಮತ್ತಷ್ಟು ಓದಿ: Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ?
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಯಶಸ್ಸು ಸಿಕ್ಕಿದೆ ಎನ್ನುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ ಎನ್ನುವ ವಿಚಾರಗಳೂ ಜನರ ಬಾಯಲ್ಲಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವ ಸಾಧ್ಯತೆ ಇದೆ. ಪ್ರಸ್ತುತ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅಬಕಾರಿ ಸೆಸ್, ಇಂಧನ ಸೆಸ್ ಹೆಚ್ಚಿಸುವ ಸಾಧ್ಯತೆಗಳೂ ಇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2024-2025ರಲ್ಲಿ ಒಟ್ಟು 3.71 ಲಕ್ಷ ಕೋಟಿ ರೂ. ಗಾತ್ರದ ಹಾಗೂ 2025-2026ರಲ್ಲಿ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಯಾವೆಲ್ಲಾ ಘೋಷಣೆಗಳನ್ನು ಮಾಡಲಿದ್ದಾರೆ, ಯಾವುದೆಲ್ಲಾ ದುಬಾರಿಯಾಗಲಿವೆ, ಯಾವ್ಯಾವ ಜಿಲ್ಲೆಗಳಿಗೆ ಎಷ್ಟು ಹಣ ಸಿಗಲಿದೆ ಎಂಬುದರ ಕುರಿತ ಬಜೆಟ್ನ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಕನ್ನಡ ವೆಬ್ಸೈಟ್ನಲ್ಲಿ ವೀಕ್ಷಿಸಿ.
ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - Mar 06,2026 7:22 AM
