ಗದಗ, ಸೆ.1: ಸತತ 25 ವರ್ಷಗಳ ಕಾಲ ಹಳ್ಳಿಗುಡಿ, ಹಳ್ಳಿಕೇರಿ, ತಿಮ್ಮಾಪೂರ ಗ್ರಾಮದ ಜನರು ದಿನ ನಿತ್ಯ ರೈಲು ಪ್ರಯಾಣಕ್ಕೆ ಸಂಚರಿಸಲು ಗ್ರಾಮಸ್ಥರು ಪರದಾಡುವಂತಾಗಿತ್ತು. ಈ ಭಾಗದ ಗ್ರಾಮಸ್ಥರ ಮನವಿ ಮೇರೆಗೆ ಕೇಂದ್ರ ಸರ್ಕಾರ ಜನರ ನಿರೀಕ್ಷೆಯಂತೆ ರೈಲು ನಿಲ್ದಾಣ ಹಾಗೂ ಪ್ಯಾಸೆಂಜರ್ ವಿಶೇಷ ರೈಲಿಗೆ ನಿಲುಗಡೆ ಸೌಲಭ್ಯ ಒದಗಿಸಿಕೊಟ್ಟಿರುವದು ಸಂತಸದಾಯಕವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ (Shivakumar Udasi) ಹೇಳಿದರು.
ಭಾರತ ಸರ್ಕಾರ ಹಾಗೂ ಹುಬ್ಬಳ್ಳಿ ರೈಲ್ವೆ ವಿಭಾಗ, ಗದಗ ಹಳ್ಳಿಗುಡಿ ಹಾಲ್ ರೈಲು ನಿಲ್ದಾಣದ ಉದ್ಘಾಟನೆ ಮತ್ತು ರೈಲು ಸಂಖ್ಯೆ 07381/07382 ಎಸ್.ಎಸ್.ಎಸ್. ಹುಬ್ಬಳ್ಳಿ-ಕಾರಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲಿಗೆ ಹಳ್ಳಿಗುಡಿಯಲ್ಲಿ ನಿಲುಗಡೆ ಸೌಲಭ್ಯಕ್ಕೆ ಶುಕ್ರವಾರದಂದು ಜ್ಯೋತಿ ಬೆಳಗಿಸಿ, ರೈಲು ಗಾಡಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರೈಲು ಸಂಖ್ಯೆ 07381 ಎಸ್.ಎಸ್.ಎಸ್. ಹುಬ್ಬಳ್ಳಿ – ಕಾರಟಗಿ ಪ್ಯಾಸೆಂಜರ್ ವಿಶೇಷ ರೈಲು ಹಳ್ಳಿಗುಡಿ ಹಾಲ್ಸ್ ನಿಲ್ದಾಣಕ್ಕೆ ಬೆಳಿಗ್ಗೆ 10:30 ಗಂಟೆಗೆ ಆಗಮಿಸಿ 10:31 ಗಂಟೆಗೆ ಹೊರಡಲಿದೆ. ರೈಲು ಸಂಖ್ಯೆ 07382 ಕಾರಟಗಿ- ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲು ಹಳ್ಳಿಗುಡಿ ಹಾಲ್ಫ್ ನಿಲ್ದಾಣಕ್ಕೆ ಸಂಜೆ 4:22 ಗಂಟೆಗೆ ಆಗಮಿಸಿ 4:23 ಗಂಟೆಗೆ ಹೊರಡಲಿದೆ.
ಇದನ್ನೂ ಓದಿ: Hubballi Ankola Railway Line Project: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದೆ ರೈಲ್ವೆ
ಈ ರೈಲಿನ ನಿಲುಗಡೆಯಿಂದ ಹಳ್ಳಿಗುಡಿ, ಹಳ್ಳಿಕೇರಿ, ತಿಮ್ಮಾಪುರ ಮತ್ತು ಹತ್ತಿರದ ಇತರ ಹಳ್ಳಿಗಳ ಗ್ರಾಮಸ್ಥರಿಗೆ ರೈಲಿನಲ್ಲಿ ಪ್ರಯಾಣಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ಈ ರೈಲು ನಿಲುಗಡೆಯ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಶಿವಕುಮಾರ ಉದಾಸಿ ಹೇಳಿದರು.
ಹುಬ್ಬಳ್ಳಿ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ಸಂತೋಷ ವರ್ಮಾ ಮಾತನಾಡಿ, ಹುಬ್ಬಳ್ಳಿ, ಗದಗ, ಕೊಪ್ಪಳದ ಕಡೆಗೆ ರೈಲಿನಲ್ಲಿ ಹೋಗಲು ಹಳ್ಳಿಗುಡಿಯಲ್ಲಿ ಹಾಲ್ಟ ನಿಲ್ದಾಣ ಮತ್ತು ರೈಲುಗಳಿಗೆ ನಿಲುಗಡೆಯನ್ನು ಒದಗಿಸಿ ಅನುಕೂಲ ಮಾಡಿಕೊಡುವಂತೆ ಹಳ್ಳಿಗುಡಿ, ಹಳ್ಳಿಕೇರಿ, ತಿಮ್ಮಾಪುರ ಮತ್ತು ಹತ್ತಿರದ ಇತರ ಹಳ್ಳಿಗಳ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ ಹರ್ಲಾಪುರ ಮತ್ತು ಸೋಂಪುರ ರೋಡ್ ನಿಲ್ದಾಣಗಳ ನಡುವ ಲೆವಲ್ ಕ್ರಾಸಿಂಗ್ ಗೇಟ್ ಸಂಖ್ಯೆ 45ರ ಬಳಿ ಹಳ್ಳಿಗುಡಿ ಹಾಲ್ಟ ನಿಲ್ದಾಣವನ್ನು ಒದಗಿಸಲಾಗಿದೆ ಎಂದರು.
ಹಳ್ಳಿಗುಡಿ ಹಾಲ್ಟನಲ್ಲಿ ತಲಾ 350 ಮೀ. ಉದ್ದದ ಎರಡು ರೈಲ್ ಲೆವೆಲ್ ಪ್ಲಾಟ್ ಫಾರ್ಮ್ ಒದಗಿಸಲಾಗಿದೆ. ಒಂದು ಟಿಕೆಟ್ ಕೌಂಟರನ್ನು ಒದಗಿಸಲಾಗಿದೆ. ರೈಲು ಟಿಕೆಟ್ಗಳನ್ನು ವಿತರಿಸಲು ಕಮಿಷನ್ ಆಧಾರದಲ್ಲಿ ಒಬ್ಬ ಹಾಲ್ಟ್ ಏಜೆಂಟ್ ಅನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದರು.
ರೈಲು ಸಂಖ್ಯೆ 07381/07382 ಎಸ್.ಎಸ್.ಎಸ್. ಹುಬ್ಬಳ್ಳಿ – ಕಾರಟಗಿ- ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲಿಗೆ ಹಳ್ಳಿಗುಡಿ’ ಹಾಲ್ಸ್ ನಿಲ್ದಾಣದಲ್ಲಿ ಸೆಪ್ಟೆಂಬರ್ 1 ರಿಂದ 29 ಫೆಬ್ರವರಿ 2024 ರವರೆಗೆ ಒಂದು ನಿಮಿಷದ ಅವಧಿಯ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು ಪ್ರಯಾಣಿಕರ ಪ್ರತಿಕ್ರಿಯೆಯನ್ನು ಆಧರಿಸಿ ಈ ಪ್ರಾಯೋಗಿಕ ನಿಲುಗಡೆಯನ್ನು ಮುಂದುವರೆಸುವ ಕುರಿತು ನಿರ್ಧರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಳ್ಳಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಮರಿಯವ್ವ ಹಿರೇಮನಿ, ಹುಬ್ಬಳ್ಳಿ ವರಿಷ್ಠ ವಿಭಾಗಿಯ ವಾಣಿಜ್ಯ ವ್ಯವಸ್ಥೆಯ ಸಂತೋಷ ಹೆಗ್ಡೆ, ಮುಂಡರಗಿ ತಹಶಿಲ್ದಾರ ಧನಂಜಯ, ಹುಬ್ಬಳ್ಳಿ ರೈಲ್ವೆ ಪಿ.ಆರ್.ಓ ಪ್ರಾಣೇಶ, ರೈಲ್ವೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ