ಬಳ್ಳಾರಿ: ತಮ್ಮ ನೆಚ್ಚಿನ ಬೈಕ್ಗಳಿಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಡಿಸೈನ್ ಮಾಡಿಕೊಳ್ಳುವುದು ಈಗಿನ ಯುವ ಸಮೂಹದ ಟ್ರೆಂಡ್. ಆದರೆ ಇಲ್ಲೊಬ್ಬ ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ತನ್ನ ಬೈಕ್ ಮೇಲೆ ಬಿಡಿಸಿಕೊಂಡು ಸೋಲೋ ರೈಡ್ ಹೊರಟಿದ್ದಾರೆ. ಮಹಾರಾಷ್ಟ್ರದ ಪುಣೆಯ ನಿವಾಸಿಯಾಗಿರುವ ಗಣೇಶ್ ಸಿಂಧೆ ವೃತ್ತಿಯಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಗೆಳೆಯರ ಜೊತೆಗೂಡಿ ಬೈಕ್ನಲ್ಲಿ ಲಾಂಗ್ ಡ್ರೈವ್ ಮಾಡುತ್ತಾರೆ.
2014 ರಲ್ಲಿ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದಾಗ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತ ಗಣೇಶ್ ಸಿಂಧೆ ಈ ಸ್ಮಾರಕಗಳಿಗೆ ವಿಶಿಷ್ಟವಾದ ಗೌರವ ಕೊಟ್ಟಿದ್ದಾರೆ. ಗಣೇಶ್ ಸಿಂಧೆ ಹಂಪಿಯಲ್ಲಿ ವಾಸ್ತವ್ಯ ಹೂಡಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪರವಾನಿಗೆ ಪಡೆದು ಏಕ್ರಾಲಿಕ್ ಬಣ್ಣದಿಂದ ಬುಲೆಟ್ನ ಪೆಟ್ರೋಲ್ ಟ್ಯಾಂಕ್ ಒಂದು ಭಾಗದಲ್ಲಿ ತಳವಾರಘಟ್ಟ ಪ್ರವೇಶದ್ವಾರ, ಮತ್ತೊಂದು ಭಾಗದಲ್ಲಿ ವಿಜಯವಿಠ್ಠಲ ದೇವಸ್ಥಾನದ ಪ್ರವೇಶ ದ್ವಾರ, ಬ್ಯಾಟರಿ ಬಾಕ್ಸ್ ಎದುರು ಬಸವಣ್ಣ, ಮತ್ತೊಂದು ಕಡೆ ಹೇಮಕೂಟ ಪರ್ವತ, ಟೂಲ್ ಕಿಟ್ಗೆ ವಿರುಪಾಕ್ಷ ಗೋಪುರ, ಮತ್ತೊಂದು ಕಡೆ ಉಗ್ರ ನರಸಿಂಹ ಚಿತ್ರಗಳನ್ನು ಬಿಡಿಸಿದ್ದಾರೆ.
ಹಂಪಿಯ ಸ್ಮಾರಕಗಳಿಗೆ ಮನಸೋತಿರುವ ಗಣೇಶ್ ಸಿಂಧೆ 2019 ರಲ್ಲಿ ಪುನ: ಹಂಪಿಗೆ ಭೇಟಿ ನೀಡಿದ್ದರು. ಇದಾದ ಬಳಿಕ ಈಗ ತನ್ನ ಪತ್ನಿಯೊಂದಿಗೆ ಮತ್ತೆ ಹಂಪಿಗೆ ಭೇಟಿ ನೀಡಿದ್ದಾರೆ. ಹಂಪಿ ಬಗ್ಗೆ ಎಲ್ಲಿಲ್ಲದ ಅಭಿಮಾನ ಬೆಳೆಸಿಕೊಂಡಿರುವ ಗಣೇಶ್ ಸಿಂಧೆ ಕಳೆದ ಆರೇಳು ವರ್ಷಗಳಿಂದ ಇದೇ ಬೈಕ್ನಲ್ಲಿ ಹಿಮಾಚಲ ಪ್ರದೇಶ, ರಾಜಸ್ಥಾನ, ಕೇರಳ, ಸಿಲಿಗುರಿ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಗೆ ಹೋಗಿದ್ದಾರೆ. ದೇಶದ ಪ್ರಮುಖ ಸ್ಥಳಗಳ ಸುತ್ತುವ ಹವ್ಯಾಸ ಬೆಳೆಸಿಕೊಂಡಿರುವ ಗಣೇಶ್ ಸಿಂಧೆ ಇದುವರೆಗೆ ಹಂಪಿಗೆ ಮೂರು ಬಾರಿ ಭೇಟಿ ನೀಡಿದ್ದಾರೆ.
ನಿತ್ಯದ ಕೆಲಸಕ್ಕೆ ಬೇರೆ ಬೈಕ್ ಬಳಕೆ
ಹಂಪಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಿಗೆ ತೆರಳಲು ಮಾತ್ರ ಈ ಬೈಕ್ ಓಡಿಸಿಕೊಂಡು ಬರುವ ಗಣೇಶ್ ಸಿಂಧೆ ಉಳಿದ ದಿನಗಳಲ್ಲಿ ಈ ಬೈಕ್ ಬಳಸದೇ ಮನೆಯಲ್ಲಿ ಇಡುತ್ತಾರೆ. ನಿತ್ಯದ ಕೆಲಸಕ್ಕೆ ಬೇರೊಂದು ದ್ವಿಚಕ್ರ ವಾಹನ ಬಳಸುವ ಇವರು ಈ ಅಪರೂಪದ ಎನ್ಫೀಲ್ಡ್ ಬೈಕ್ನ ಜೋಪಾನ ಮಾಡುತ್ತಾರೆ. ಮನೆಯಲ್ಲಿರುವಾಗ ಈ ಬೈಕ್ ನೋಡಿದಾಗಲೆಲ್ಲ ವಿಶ್ವವಿಖ್ಯಾತ ಹಂಪಿ ಕಣ್ಣೆದುರಿಗೆ ಬರುತ್ತದೆ. ಬೈಕ್ ಮೇಲೆ ಬಿಡಿಸಿದ ಸ್ಮಾರಕಗಳ ಚಿತ್ರಗಳನ್ನ ನೋಡಿಯೇ ಖುಷಿ ಪಡುತ್ತಾರೆ.
ಕೆಲವೆ ನಿಮಿಷದಲ್ಲಿ ಹಂಪಿ ದರ್ಶನ
ಈ ಬೈಕ್ ಸಂಪೂರ್ಣವಾಗಿ ವೀಕ್ಷಣೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಂಪಿಯ ದರ್ಶನವಾಗುತ್ತದೆ. ಬೈಕ್ನ ಪ್ರತಿಯೊಂದು ಬಿಡಿಭಾಗಗಳ ಮೇಲೂ ಹಂಪಿಯ ಸ್ಮಾರಕಗಳ ವೈಭವ ಎದ್ದು ಕಾಣುತ್ತಿದೆ. ಸಿಂಧೆ ತಾವು ಬಳಸುವ ಹೆಲ್ಮೆಟ್ ಮೇಲೂ ಸ್ಮಾರಕದ ಚಿತ್ರ ಬಿಡಿಸಿದ್ದಾರೆ. ಹೀಗಾಗಿ ಇಡೀ ಎನ್ಫೀಲ್ಡ್ ಸಂಪೂರ್ಣ ಹಂಪಿಮಯವಾಗಿ ಬಿಟ್ಟಿದೆ. ಈ ಬೈಕ್ ತೆಗೆದುಕೊಂಡು ಗಣೇಶ್ ಸಿಂಧೆ ಹಂಪಿಗೆ ಬಂದಾಗಲೆಲ್ಲಾ ಪ್ರವಾಸಿಗರು ಈ ಬೈಕ್ ನೋಡಿ ಕಣ್ತುಂಬಿ ಕೊಳ್ಳುತ್ತಾರೆ. ಜೊತೆಗೆ ಈ ಬೈಕ್ ಮುಂಭಾಗ ನಿಂತು ಸೇಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸುತ್ತಾರೆ.
ದೇಶದ ಪ್ರಮುಖ ಸ್ಥಳಗಳು ಸೇರಿದಂತೆ ಕೋಸ್ಟಲ್ ಪ್ರದೇಶಕ್ಕೂ ಲಾಂಗ್ ಡ್ರೈವ್ ಹೋಗಿದ್ದೇನೆ. ಅವೆಲ್ಲವುಗಳಿಗಿಂತ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ಬಹಳ ಇಷ್ಟವಾದವು. ಆದ್ದರಿಂದ ನನ್ನ ಬೈಕ್ನ ಮೇಲೆ ಏಕ್ರಾಲಿಕ್ ಬಣ್ಣದಿಂದ ಚಿತ್ರಗಳನ್ನು ಬಿಡಿಸಿಕೊಂಡಿದ್ದೇನೆ. ಇದು ಹೆಮ್ಮೆ ಎನಿಸುತ್ತಿದೆ ಎಂದು ಹವ್ಯಾಸಿ ಕಲಾವಿದ ಗಣೇಶ್ ಸಿಂಧೆ ಹೇಳಿದರು.
ಇದನ್ನೂ ಓದಿ
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪಿನಾಯಿಲ್ ಕುಡಿದು ಆತ್ಮಹತ್ಯೆ: ಚಿಕಿತ್ಸೆ ಫಲಿಸದೆ ಸಾವು
Published On - 3:18 pm, Sun, 14 March 21