ತುಮಕೂರು: ಶಿವಮೊಗ್ಗದ ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ಜೆಲೆಟಿನ್ ಸ್ಫೋಟಗೊಂಡು 6 ಮಂದಿ ಮೃತಪಟ್ಟಿದ್ದಾರೆ. ಆ ಮಹಾ ದುರಂತದ ನೆನಪು ಮಾಸುವ ಮೊದಲೇ ತುಮಕೂರಿನ ಮಸ್ಕಲ್ ಗ್ರಾಮದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಇದೂ ಕೂಡ ಜಿಲೆಟಿನ್ ಸ್ಫೋಟ !
ಕ್ರಷರ್ ಹಾಗೂ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಜೆಲೆಟಿನ್ ಕಡ್ಡಿ ಸ್ಫೋಟಗೊಂಡು ಮನೆಯೊಂದು ಧ್ವಂಸವಾಗಿದೆ. ಇದರಿಂದಾಗಿ ಮಹಿಳೆಯೊಬ್ಬಳ ತಲೆಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ತಾಲೂಕಿನ ಹೆಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ ಎಂಬುವರ ಮನೆ ಈ ಜಿಲಿಟಿನ್ ಸ್ಫೋಟಕ್ಕೊಳಗಾಗಿದ್ದು, ಸೀಟಿನ ಮನೆ ಸಂಪೂರ್ಣ ನಾಶವಾಗಿದೆ. ಸ್ಫೋಟದ ಹೊಡೆತಕ್ಕೆ ಮನೆಯ ಶೀಟುಗಳೆಲ್ಲ ಚೂರುಚೂರಾಗಿವೆ.
ಸೋಮವಾರ ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಸ್ಫೋಟ ಸಂಭವಿಸಿದ್ದು, ಆ ವೇಳೆ ಲಕ್ಷ್ಮೀಕಾಂತ್ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋಗಿದ್ದರು. ಅವರ ಪತ್ನಿ ಸುವರ್ಣಮ್ಮ ಒಬ್ಬರೇ ಇದ್ದರು. ಚೂರಾದ ಸೀಟುಗಳು ಇವರ ತಲೆಗೆ ಬಡಿದು, ಗಾಯಗೊಂಡಿದ್ದಾರೆ.
ಲಕ್ಷ್ಮೀಕಾಂತ್ ಮನೆಯಲ್ಲಿ ಜೆಲಾಟಿನ್ ಕಡ್ಡಿ ಹೇಗೆ?
ಮಸ್ಕಲ್ ಗ್ರಾಮದ ನಿವಾಸಿ ಲಕ್ಷ್ಮೀಕಾಂತ ಕಲ್ಲು ಬಂಡೆಗಳನ್ನು ಸ್ಫೋಟಿಸುವುದು, ಮಣ್ಣು ತೆಗೆಯಲು ಸಹಾಯ ಮಾಡುವುದು, ಸಂದರ್ಭ ಬಂದರೆ ಕೂಲಿ ಕೆಲಸ ಮಾಡುತ್ತಿದ್ದರು. ಇವರು ಮಸ್ಕಲ್ ಸಮೀಪದ ಶಾಲೆಯೊಂದರಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಜೆಲಾಟಿನ್ ಕಡ್ಡಿ ಬಳಕೆ ಮಾಡಿಕೊಂಡು ಹೆಚ್ಚಾಗಿದ್ದ ಜೆಲೆಟಿನ್ ಕಡ್ಡಿಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಶೀಟಿನ ತಾಪಕ್ಕೆ ಜೆಲಾಟಿನ್ ಕಡ್ಡಿ
ಕಲ್ಲುಬಂಡೆ ಸ್ಫೋಟಿಸಲು ಜೆಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿದ್ದ ಲಕ್ಷ್ಮೀಕಾಂತ್ಗೆ ಇವು ಮನೆಯಲ್ಲೇ ಸ್ಫೋಟಗೊಳ್ಳಬಹುದೆಂಬ ಅಂದಾಜು ಇರಲಿಲ್ಲ. ಮನೆಗೆ ಶೀಟುಗಳನ್ನು ಹಾಕಿದ್ದರಿಂದ ಬಿಸಿಲಿನ ತಾಪಕ್ಕೆ ಅವುಗಳ ಶಾಖ ಹೆಚ್ಚಾಗಿದೆ. ಇದರಿಂದಾಗಿ ಮನೆಯೊಳಗಿನ ಶಾಖವೂ ಹೆಚ್ಚಾಗಿ ಜೆಲಾಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಇದರ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೂ ಕಕ್ಕಾಬಿಕ್ಕಿಯಾಗಿ, ಮನೆಯಿಂದ ಹೊರಗೆ ಬಂದು ನೋಡಿದ್ದಾರೆ. ಲಕ್ಷ್ಮೀಕಾಂತ್ ಮನೆಯ ಪಕ್ಕದಲ್ಲೇ ಇದ್ದ ತಿಮ್ಮರಾಜು ಎಂಬುವರ ಮನೆಯ ಸೀಟುಗಳೂ ಪುಡಿಯಾಗಿವೆ. ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ, ಡಿವೈಎಸ್ಪಿ ಶ್ರೀನಿವಾಸ್, ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ಚನ್ನೇಗೌಡ ದೌಡಾಯಿಸಿದ್ದಾರೆ.
ಬುದ್ಧಿ ಕಲಿಯದ ಜಿಲ್ಲಾಡಳಿತ
ಶಿವಮೊಗ್ಗದ ಹುಣಸೋಡಿನಲ್ಲಿ ಜಿಲೆಟಿನ್ ಸ್ಫೋಟಗೊಂಡಿದ್ದು ಅದೆಷ್ಟು ಆತಂಕ ಮೂಡಿಸಿತ್ತು ಎಂಬುದು ಗೊತ್ತೇ ಇದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಮೃತರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಸೂಚನೆಯನ್ನೂ ನೀಡಿದ್ದಾರೆ. ಆದರೆ ತುಮಕೂರು ಜಿಲ್ಲಾಡಳಿತ ಮಾತ್ರ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ
ಜಿಲ್ಲೆಯಲ್ಲಿ ಅಕ್ರಮ ಅಕ್ರಮ ಗಣಿಗಾರಿಕೆ, ಜೆಲೆಟಿನ್ ಬಳಕೆಮಾಡುವವರು ಅದನ್ನು ಎಲ್ಲಿಂದ ತರಿಸಿಕೊಳ್ಳುತ್ತಾರೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನವನ್ನೂ ಜಿಲ್ಲಾಡಳಿತ ಮಾಡಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣಕುರುಡಾಗಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರು ಜನವರಿ 26ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಅ ರೀತಿ ಇದ್ದರೆ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದೀಗ ಮಸ್ಕಲ್ ಗ್ರಾಮದಲ್ಲಿ ಜೆಲೆಟಿನ್ ಸ್ಫೋಟಗೊಂಡಿದ್ದರೂ ಅವರು ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಭೇಟಿ
ಇನ್ನು ಇಂದು ಬೆಳಗ್ಗೆ ಲಕ್ಷ್ಮೀಕಾಂತ್ ಮನೆಗೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದಾರೆ. ಅವರ ಮನೆಯ ಸುತ್ತ 200 ಮೀ ದೂರದವರೆಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ. ಮನೆಯಲ್ಲಿ ಇನ್ನೂ ಜಿಲಾಟಿನ್ ಕಡ್ಡಿಗಳು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಸುತ್ತಮುತ್ತ ಯಾರೂ ಬರಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.
Published On - 11:27 am, Tue, 2 February 21